ಕಲಬುರಗಿ: ಕಟ್ಟಡದ ತ್ಯಾಜ್ಯ ಸುರಿಯುವ ಜಾಗ ಉದ್ಯಾನ!

ಕಲಬುರಗಿ: ಕಟ್ಟಡದ ತ್ಯಾಜ್ಯ ಸುರಿಯುವ ಜಾಗ ಉದ್ಯಾನ!

ಕಲಬುರಗಿ: ಕಟ್ಟಡದ ತ್ಯಾಜ್ಯ ಸುರಿಯುವ ಜಾಗ ಉದ್ಯಾನ!

ಕಲಬುರಗಿ: ನಗರದ ಹಾಗೂ ನಗರವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಯಿಂದ ನಿರ್ಮಿಸಲಾಗುವ ಉದ್ಯಾನಗಳು ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಾಗಿ ಜನೋಪಯೋಗಿಯಾಗದಿರುವುದು ವಿಷಾದದ ಸಂಗತಿ.

ಮಹಾನಗರ ಪಾಲಿಕೆಯ ವಾರ್ಡ್‌ ನಂ.23ರ ವ್ಯಾಪ್ತಿಗೆ ಬರುವ ಬಂಬೂ ಬಜಾರ್‌ ಹಾಗೂ ಫಿಲ್ಟರ್‌ ಬೆಡ್‌ ರಸ್ತೆಯ ಪಕ್ಕದ ಸಾಯಿ ಕಾಲೊನಿಯಲ್ಲಿ ಕಾಣಸಿಗುವ (ಜಿಡಿಎ ಕಾಲೊನಿ–3ನೇ ಹಂತದ ಬಳಿ) ಸಾರ್ವಜನಿಕ ಉದ್ಯಾನವು ನಿರ್ಮಾಣ ಹಂತದಲ್ಲೇ ತೆವಳುತ್ತಿದ್ದು, ಹಸಿರಿಲ್ಲದೆ, ಕೂರಲು ಕುರ್ಚಿಗಳಿಲ್ಲದೆ, ಆಟವಾಡಲೂ ಜೋಕಾಲಿ, ಜಾರುಬಂಡಿ ಇಲ್ಲ. ಉದ್ಯಾನದ ಒಳಗೆ ಎಲ್ಲಿ ನೋಡಿದರು ಕಟ್ಟಡದ ತ್ಯಾಜ್ಯವೇ ತುಂಬಿದೆ.

ಇಲ್ಲಿ ಕಾಂಪೌಂಡ್‌ ಹೊರತುಪಡಿಸಿ ಉದ್ಯಾನವೆಂಬುದಕ್ಕೆ ಬೇರೆ ಕುರುಹು ಇಲ್ಲ. ಸುಂದರ, ಸ್ವಚ್ಛಂದ ಪರಿಸರದಿಂದ ಕೂಡಿರಬೇಕಿದ್ದ ಉದ್ಯಾನ ಕೊಳಚೆ ಚರಂಡಿ ನೀರು, ದುರ್ವಾಸನೆ ಬೀರುವ ಕಸ, ಮಲ–ಮೂತ್ರ ವಿಸರ್ಜನೆ ಹಾಗೂ ಹಾವು ಚೇಳುಗಳ ಗೂಡಾಗಿರುವ ಗಿಡಗಂಟಿಗಳಿಂದ ತುಂಬಿ ಸ್ಥಳೀಯರಲ್ಲಿ ಭೀತಿ ಹುಟ್ಟಿಸುಂತಹ ಸ್ಥಿತಿ ತಲುಪಿದೆ.

ಈ ಉದ್ಯಾನಕ್ಕೆ ಎರಡೇ ಕಡೆ ದಾರಿ ಇದ್ದು, ಒಂದೆಡೆ ಪೂರ್ತಿ ಕಚ್ಚಾ ರಸ್ತೆ ಇದೆ. ಮಳೆಯಿಂದಾಗಿ ಕೆಸರುಮಯವಾಗಿದ್ದರೆ ಪಕ್ಕದ ಸಿಮೆಂಟ್‌ ರಸ್ತೆಯ ಒಂದು ಚರಂಡಿ ಹಾಗೂ ಮತ್ತೊಂದು ಬದಿಯುದ್ದಕ್ಕೂ ಪಾಲಿಕೆಯವರು ತ್ಯಾಜ್ಯ ತಂದು ಸುರಿಯುತ್ತಾರೆ. ಇಲ್ಲಿ ಜಾನುವಾರುಗಳು ಮೇಯಿಸುವುದು ಸಹಜವಾಗಿದ್ದು, ಇದರಿಂದ ಉದ್ಯಾನದ ಒಳಗೂ-ಹೊರಗೂ ಸ್ವಚ್ಛತೆ ಮರಿಚೀಕೆಯಾಗಿದೆ.

ಉದ್ಯಾನದ ಕಾಂಪೌಂಡ್‌ನ ಹೊರಮೈ ಸುತ್ತ ಮುಳ್ಳು ಕಂಟಿಗಳು ಬೆಳೆದಿದ್ದು, ಒಳೆಗಡೆಯೂ ಅಲ್ಲಲ್ಲಿ ಬೆಳೆದಿದೆ. ಅಲ್ಲಲ್ಲಿ ಮದ್ಯದ ಬಾಟಲಿಗಳು, ಗಾಜಿನ ಚೂರುಗಳು, ಮನೆ ಕಸ ಬಿಸಾಕುವುದು ಎಥೇಚ್ಚವಾಗಿ ನಡೆಯುತ್ತಲೇ ಇದೆ. ಹಚ್ಚಹಸಿರಿನಿಂದ ಸ್ವಚ್ಛಂದವಾಗಿ ನಳನಳಿಸಬೇಕಿದ್ದ ಉದ್ಯಾನವೇ ಸೊಳ್ಳೆಗಳು ಉತ್ಪಾದಿಸುವ ಫ್ಯಾಕ್ಟರಿಯಾಗಿ ಮಾರ್ಪಟ್ಟು ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಬದುಕುವಂತಾಗಿದೆ.

‘ಉದ್ಯಾನಗಳಿದ್ದರೆ ಒಂದಷ್ಟು ರಿಲೀಫ್‌ ಆಗಲು, ಮಕ್ಕಳು ಆಡಲು, ಹಿರಿಯರು ಓಡಾಡಲು, ವಾಕಿಂಗ್‌ ಮಾಡಲು ಅನುಕೂಲವಾಗುತ್ತದೆ. ಉದ್ಯಾನಕ್ಕೆಂದು ವಿಶಾಲವಾದ ಜಾಗವಿದ್ದರೂ ಉಪಯೋಗವಿಲ್ಲದಂತಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಪಾಲಿಕೆ ಸದಸ್ಯ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಬೇಸತ್ತು ವಾಯು ವಿಹಾರಕ್ಕಾಗಿ ನಾವು ಪಕ್ಕದ ಬಡಾವಣೆಯ ಉದ್ಯಾನಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.

‘ಸಾರ್ವಜನಿಕ ಉದ್ಯಾನಗಳು ಜನರ ಆರೋಗ್ಯ, ಮನರಂಜನೆ, ನಗರದ ಸೌಂದರ್ಯ, ಒಳ್ಳೆಯ ಗಾಳಿ ಸೇರಿದಂತೆ ಜೀವವೈವಿಧ್ಯತೆ ಕಾಪಾಡುವ ಮಹತ್ವದ್ದ ಕಾರ್ಯ ಮಾಡುತ್ತವೆ. ಸುಮಾರು ದಿನಗಳಿಂದ ಯಾವ ಪ್ರಗತಿಯೂ ಕಾಣದ ಉದ್ಯಾನದತ್ತ ವಿಚಾರ ತಿಳಿಯದ ಸ್ಥಳೀಯ ನಿವಾಸಿಗಳು ಬಂದು ನಿರಾಶರಾಗುತ್ತಿದ್ದಾರೆ. ಹಾಗಾಗಿ ಶೀಘ್ರ ಉದ್ಯಾನದ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸದಿದ್ದರೂ ಉದ್ಯಾನದಲ್ಲಿ ಕನಿಷ್ಠ ಸ್ವಚ್ಛತೆಯಾದರು ಕಾಪಾಡಲಿ’ ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ಈ ಕುರಿತು ಮಾತನಾಡಲು ಮಹಾನಗರ ಪಾಲಿಕೆಯ ಸ್ಥಳೀಯ ವಾರ್ಡ್‌ ಸದಸ್ಯರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಕರೆಗೆ ಸಿಗಲಿಲ್ಲ.

ಉದ್ಯಾನಗಳಿಗಿಲ್ಲ ನಾಮಫಲಕ

ನಗರದ ಬಹುತೇಕ ಬಡಾವಣೆಗಳಲ್ಲಿರುವ ಕೆಲ ಸಾರ್ವಜನಿಕ ಉದ್ಯಾನಗಳಿಗೆ ಅಲ್ಲಿಯ ವಿವರ, ವ್ಯಾಪ್ತಿ, ಮಾಹಿತಿ ಇತ್ಯಾದಿ ಒದಗಿಸುವ ನಾಮಫಲಕವಾಗಲಿ ಅಥವಾ ಸೂಚನಾ ಫಲಕವಾಗಲಿ ಮಹಾನಗರ ಪಾಲಿಕೆಯವರು ಅಳವಡಿಸದೆ ಇರುವುದು ಆಶ್ಚರ್ಯದ ಸಂಗತಿಯಾಗಿದೆ. ಇದರಿಂದ ಬಹಳಷ್ಟು ಸಮಸ್ಯೆಗಳು ಆಗುತ್ತಿವೆ ಮತ್ತು ಸಾರ್ವಜನಿಕ ಸ್ವತ್ತಿನ ವಿಚಾರದಲ್ಲಿ ಸ್ಪಷ್ಟ ನಾಮಫಲಕ, ಸೂಚನಾ ಫಲಕ ಅಥವಾ ಕಾಂಪೌಂಡ್‌ ಇಲ್ಲದೇ ಇರುವುದರಿಂದ ಒತ್ತುವರಿ ಆಗುವ ಸಾಧ್ಯತೆ ಇದೆ ಎಂಬುದು ವಾಯುವಿಹಾರಿಗಳ ಕಳವಳ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260806-34-1204670989

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ