
ರೋಣ:ಮಳೆ ಕೊರೆತೆಯಿಂದ ನಲುಗಿದ ರೈತರು, ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ಬೆಳೆ ಇಲ್ಲ
ರೋಣ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಪರಿಣಾಮ ತಾಲ್ಲೂಕಿನ ಪ್ರಮುಖ ಆಹಾರ ಬೆಳೆಗಳಾದ ಹೆಸರು, ಮೆಕ್ಕೆಜೋಳ, ಶೇಂಗಾ ಜೊತೆಗೆ ಈರುಳ್ಳಿ ಹಾಗೂ ಮೆಣಸಿನಕಾಯಿಯಂತಹ ತೋಟಗಾರಿಕೆ ಬೆಳೆಗಳ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ. ಸಮರ್ಪಕವಾಗಿ ಇಳುವರಿ ಸಿಗದೆ ರೈತರು ಕಣ್ಣೀರಿಡುತ್ತಿದ್ದಾರೆ.
ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದರು. ಮಳೆ ಕೊರತೆಯಿಂದಾಗಿ ಭೂಮಿಯಲ್ಲಿ ತೇವಾಂಶ ಇಲ್ಲದೆ, ಬೆಳೆಗಳು ಬಾಡುತ್ತಿವೆ. ಹಲವೆಡೆ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಇದು, ರೈತರನ್ನು ಮತ್ತೆ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಕೃಷಿ ಹೊಂಡದಲ್ಲಿದ್ದ ನೀರು ಕೂಡ ಬತ್ತಿಹೋಗಿದೆ. ಕೊಳವೆಬಾವಿ ಇರುವೆಡೆ ರೈತರು ತುಂತುರು ನೀರಾವರಿ ಮತ್ತು ಮೈಕ್ರೋ ಟೇಪ್‌ಗಳನ್ನು ಬಳಸಿ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಈ ಮಧ್ಯೆ ಬಿಸಿ ಗಾಳಿಯ ವಾತಾವರಣದಿಂದಾಗಿ ಭೂಮಿಯ ತೇವಾಂಶ ಕಡಿಮೆಯಾಗುತ್ತಾ ಸಾಗಿದ್ದು, ರೈತರ ಚಿಂತೆ ಹೆಚ್ಚಿಸಿದೆ.
ಈರುಳ್ಳಿ ಮತ್ತು ಒಣಮೆಣಸಿನಕಾಯಿ ಬೆಳೆಗೆ ಹೆಸರುವಾಸಿಯಾದ ರೋಣ ತಾಲ್ಲೂಕಿಗೆ ಈ ಬಾರಿಯ ಅನಾವೃಷ್ಟಿ ದೊಡ್ಡ ಹೊಡೆತ ನೀಡಿದೆ. ರೈತರೊಂದಿಗೆ, ಕೃಷಿ ಮಾರುಕಟ್ಟೆಗೂ ತೀವ್ರ ಹಾನಿ ಉಂಟಾಗಲಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ. ಮೆಕ್ಕೆಜೋಳ ಕೂಡ ತೇವಾಂಶ ಕೊರತೆಯ ಕಾರಣ ಈಗಾಗಲೇ ಒಣಗಲು ಪ್ರಾರಂಭಿಸಿದ್ದು, ಸದ್ಯ ಮಳೆಯಾದರೂ ಸುಧಾರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ.
ಈ ಮಧ್ಯೆ, ಈಗಾಗಲೇ ಬಿತ್ತನೆ ಮಾಡಿರುವ ಹೆಸರು ಬೆಳೆ ಕಟಾವು ಹಂತಕ್ಕೆ ಬಂದಿದ್ದು, ತಾಲ್ಲೂಕಿನ ಅಲ್ಲಲ್ಲಿ ಹೆಸರು ರಾಶಿ ಮಾಡಲು ಪ್ರಾರಂಭಿಸಲಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹೆಸರು ಕಾಳಿನ ಬೆಲೆ ದಾಖಲೆಯ ಪ್ರಮಾಣದಲ್ಲಿ ಅಂದರೆ, ₹10 ಸಾವಿರಕ್ಕಿಂತ ಅಧಿಕ ದರಕ್ಕೆ ಮಾರಾಟವಾಗುತ್ತಿದೆ. ಬೆಲೆ ಅಧಿಕವಾಗಿದ್ದರೂ, ಇಳುವರಿ ಕುಂಠಿತವಾದ ಕಾರಣ ನಿರೀಕ್ಷಿಸಿದಷ್ಟು ಲಾಭ ರೈತರಿಗೆ ದೊರೆಯುತ್ತಿಲ್ಲ.
ಶೇಂಗಾ ಬಿತ್ತನೆ ಪ್ರಮಾಣ ಕೂಡ ಕಡಿಮೆಯಾಗಿರುವುದರಿಂದ ಜಾನುವಾರುಗಳಿಗೆ ಶೇಂಗಾ ಹೊಟ್ಟಿನ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಖಾದ್ಯ ತೈಲ ಬೆಲೆ ಏರಿಕೆ ಕಾರಣಕ್ಕೆ ಶೇಂಗಾ ಕೂಡ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿದ್ದರೂ, ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಇಲ್ಲವಾಗಿದೆ.
ಸದ್ಯಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ
ರೋಣ ಪಟ್ಟಣ ಸಮೀಪದ ಜಿಗಳೂರು ಕೆರೆಯಲ್ಲಿ ಮುಂದಿನ ಆರು ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ರೋಣ, ಗಜೇಂದ್ರಗಡ, ನರೇಗಲ್ ಸೇರಿದಂತೆ ಸುತ್ತಲಿನ 23 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಎದುರಾಗದು ಎಂದು ಅಧಿಕಾರಿಗಳು ಹೇಳುತ್ತಾರೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಪೂರೈಕೆಗೆ ಬರ ಪರಿಸ್ಥಿತಿ ಅತಿಯಾಗಿ ಬಾಧಿಸದಿದ್ದರೂ, ಗಡಿಯಂಚಿನ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. ಬಿ.ಎಸ್. ಬೇಲೇರಿ, ಬಸರಕೋಡ, ಹೊಳೆಮಣ್ಣೂರು, ಯರೆ ಕುರುಬನಾಳ ಮೊದಲಾದ ಗ್ರಾಮಗಳಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260806-23-1037078754