
PV WEB Exclusive: ನೂಲು ಹೆಣೆದು, ವಿನ್ಯಾಸ ಪಡೆಯುವ ‘ಅಮೇಜಿಂಗ್’ ಅನುಭವ...
ಆ ಮಹಿಳೆಯನ್ನು ಪರಿಚಯಿಸಿದವರು ಬಲರಾಮ ಅವರು. ಗದುಗಿನ ಬೆಟಗೇರಿಯ ಬಸವಾ ಹ್ಯಾಂಡ್ಲೂಮ್ಸ್ನ ಮಾಲೀಕರಲ್ಲೊಬ್ಬರು. ‘ನೋಡಿ ಇವಳೇ, 40 ವರ್ಷಗಳಿಂದ ನಮ್ಮ ಹ್ಯಾಂಡ್ಲೂಮ್ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೂ 60 ವರ್ಷ ದಾಟಿದೆ. ಆದರೂ, ಕಾಯಕ ಬಿಟ್ಟಿಲ್ಲ. ಕಾರ್ಮಿಕರ ಕೊರತೆಯ ನಡುವೆಯೂ ಉದ್ಯಮ ನಡೆಸುತ್ತಿರುವ ನಮಗೆ ಇವರೇ ಆಧಾರ...’
ಬಹುತೇಕ ಕತ್ತಲು ಆವರಿಸಿದ್ದ ಆ ಕೊಠಡಿಯಲ್ಲಿ, ಚಾವಣಿಯ ಎರಡು ಭಾಗದಿಂದಷ್ಟೇ ಬೆಳಕು ಇಣುಕುತ್ತಿತ್ತು. ಜೊತೆಗೆ, ಬಲರಾಮ ಅವರ ಮಾತುಗಳು. ‘ಸಾಹುಕಾರರೇ...’ ಎಂದು ಸಂಭೋದಿಸುತ್ತಲೇ ಆ ಮಹಿಳೆ ಅತ್ಯಂತ ಸಲುಗೆಯಿಂದ ಮಾತನಾಡಲು ಆರಂಭಿಸಿದರು. ಮಾಲೀಕರು–ಕಾರ್ಮಿಕರು ಎಂಬ ಬೇಧ ಅವರ ಮಾತುಗಳಲ್ಲಿ ಕಿಂಚಿತ್ತೂ ಇರಲಿಲ್ಲ.
ಸುತ್ತಲೂ ಕಣ್ಣಾಡಿಸಿದೆ. ಏಳೆಂಟು ಕೈಮಗ್ಗಗಳೊಂದಿಗೆ ವಿದ್ಯುತ್ ಮಗ್ಗಗಳೂ ದೂಳು ಹೊದ್ದು, ವಿಶ್ರಾಂತಿಯಲ್ಲಿದ್ದವು. ಒಂದು ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ಮಾತ್ರ ಚಾಲ್ತಿಯಲ್ಲಿತ್ತು. ಕೈಮಗ್ಗದ್ದಲ್ಲಿ ಚೆಂದದ ಸೀರೆ ನೇಯುತ್ತಿದ್ದವರೇ ಆ ಮಹಿಳೆ. ವಿದ್ಯುತ್ ಮಗ್ಗವು ಅರೆಬರೆಯಾಗಿ ಸೀರೆ ಹೆಣೆದು, ಅದೇಕೋ ಮುನಿಸಿಕೊಂಡಿತ್ತು. ಏನೋ ಸಮಸ್ಯೆಯಾಗಿದೆ ಎಂಬುದರ ಬಗ್ಗೆ ಇಬ್ಬರ ಸಂಭಾಷಣೆ ನಡೆದಿತ್ತು.
‘ನೋಡಿ, ಇವಷ್ಟೇ ಮಗ್ಗಗಳು ಮಾತ್ರವಲ್ಲ, ಇನ್ನಷ್ಟು ಮಗ್ಗಗಳು, ಹತ್ತಾರು ಘಟಕಗಳು ಈ ಹಿಂದೆ ಬಿಡುವಿಲ್ಲದೆ ದುಡಿಯುತ್ತಿದ್ದವು. ಕಾರ್ಮಿಕರ ಸಂಖ್ಯೆಯನ್ನು ಲೆಕ್ಕ ಹಾಕಲೂ ಆಗುತ್ತಿರಲಿಲ್ಲ. ನೇಯುವವರು ಮಾತ್ರವಲ್ಲ, ಒಂದು ಸೀರೆ ತಯಾರಾಗಲು ಹಲವರ ಶ್ರಮ ಇರುತ್ತಿತ್ತು. ಈಗ, ಅದನ್ನು ಊಹಿಸಲೂ ಆಗಲ್ಲ. ಉಳಿದವರು ಕೆಲವೇ ಮಂದಿ. ಅದರಲ್ಲಿ ಇವಳು ಹಳಬಳು’ ಎಂದು ನೇಕಾರಿಕೆ ಉದ್ಯಮದ ಈ ಹಿಂದಿನ ವೈಭವವನ್ನು, ಇಂದಿನ ದುರ್ಗತಿಯನ್ನು ಕೆಲವೇ ಸಾಲುಗಳಲ್ಲಿ ಹೇಳಿಬಿಟ್ಟರು ಬಲರಾಮ ಅವರು.
ಕೈಮಗ್ಗದ ಒಂದು ಬಂದಿ ನಿಂತು, ಕೈಯಲ್ಲಿ ಸೂತ್ರದಗೊಂಬೆ ಆಡಿಸಿದವರಂತೆ ಹಗ್ಗವಾಡಿಸುತ್ತ, ಕಾಲುಗಳಲ್ಲಿ ಸೈಕಲ್ ತುಳಿವವರಂತೆ ಒತ್ತುತ್ತಿದ್ದ ಮಹಿಳೆಯ ಪರಿಶ್ರಮವನ್ನು ಕೆಲ ಸಮಯದ ನೋಡುತ್ತ ನಿಂತೆ. ಎಳೆ ಎಳೆಯಾಗಿದ್ದ ರೇಷ್ಮೆ ಒಂದು ಸಾಲಿಗೆ ಬಂದು ಸೇರಿ, ಮಧ್ಯದಲ್ಲಿ ಒಂದು ಬಣ್ಣದ ವಸ್ತ್ರವಾಗಿ, ಅಂಚಿನಲ್ಲಿ ವಿನ್ಯಾಸವಾಗಿ, ವಸ್ತ್ರದ ನಡುವೆ ಚುಕ್ಕಿಗಳಾಗಿ ರೂಪುಗೊಳ್ಳುತ್ತಿದ್ದ ಬಗೆ, ವಾಹ್...! ಅನಿಸತೊಡಗಿತು. ಬಟ್ಟೆಯಾಗಿ ಮೂಡವವರೆಗೂ ಒಂದಕ್ಕೊಂದು ಸಂಬಂಧವೇ ಇಲ್ಲವೆಂಬಂತೆ ಇದ್ದ ನೂಲುಗಳು, ಒಂದು ಬದಿಯಲ್ಲಿ ಬೇರ್ಪಡಿಸಲಾಗದಷ್ಟು ಬೆಸೆದುಕೊಂಡಿದ್ದವು.
ಸೀರೆ ಕೊಳ್ಳಲು ಅಂಗಡಿ ಹೋದಾಗ, ಸೀರೆಯ ಬಣ್ಣ, ವಿನ್ಯಾಸ, ಅಂಚು, ಸೆರಗು, ಗುಣಮಟ್ಟ ಎಲ್ಲವನ್ನೂ ಅಳೆದು ತೂಗವವರನ್ನು ನೋಡಿಸುತ್ತೇವೆ. ಒಂದು ದಾರ ಹೊರಗೆ ಕಂಡರೂ, ಇಡೀ ವಸ್ತ್ರದ ಗುಣಮಟ್ಟವೇ ಸರಿ ಇಲ್ಲ ಎನ್ನುವಂತೆ ವರ್ತಿಸುವವರನ್ನೂ ನೋಡಿರುತ್ತೇವೆ. ಅಂತಹ ಸಂದರ್ಭಗಳಲ್ಲಿ, ವಿಶೇಷ ಅಂತೇನೂ ಅನಿಸುವುದ್ದಿಲ್ಲ. ಆದರೆ, ಸೀರೆ ನೇಯುವುದನ್ನು ನೇರವಾಗಿ ಕಂಡವರಿಗೆ, ನೇಕಾರರ ಶ್ರಮ ಅರಿತವರಿಗೆ, ನಿಜಕ್ಕೂ ನೇಕಾರರಿಗೆ ‘ಹ್ಯಾಟ್ ಆಫ್’ ಹೇಳಲೇ ಬೇಕೆನಿಸುತ್ತದೆ.
ಅಲ್ಲಿಂದ ಮತ್ತೊಂದು ಘಟಕಕ್ಕೆ ಪಯಣ ಸಾಗಿತು. ವಿದ್ಯುತ್ ಮಗ್ಗದಲ್ಲಿ ಏಕಕಾಲಕ್ಕೆ ಎರಡು ಸೀರೆಗಳನ್ನು ನೇಯುವಲ್ಲಿ ಯುವಕನೊಬ್ಬ ನಿರತನಾಗಿದ್ದ. ‘ಸಾಹುಕಾರರು’ ಎಷ್ಟೆಲ್ಲಾ ಮತನಾಡಿಸಿದರೂ, ಅವನ ಉತ್ತರ ಮಾತ್ರ ಕೆಲವು ಪದಗಳಲ್ಲಷ್ಟೇ ಇತ್ತು. ಆದರೆ, ಅವನ ಮಾತುಗಳೆಲ್ಲ, ರೇಷ್ಮೆ ಎಳೆಗಳ ಅದ್ಭುತ ಸಂಯೋಜನೆಯಲ್ಲಿ ಕೇಳಿಸುತ್ತಿತ್ತು, ಕಾಣಿಸುತ್ತಿತ್ತು.
ಅಲ್ಲಿಂದ ಸಾಗಿದ್ದು, ಆರಂಭಿಕ ಹಂತಗಳಲ್ಲಿ ಬಟ್ಟೆ ನೇಯಲು ಬಳಸುತ್ತಿದ್ದ ಕುಣಿ ಮಗ್ಗದತ್ತ. ‘ಸಾಹುಕಾರರ’ ಬಳಿ ಕೆಲಸ ಮಾಡುತ್ತಿದ್ದ ಮಹಿಳೆಯ ಮನೆಯಲ್ಲೇ ‘ಸಾಹುಕಾರರು’ ಕುಣಿ ಮಗ್ಗದ ಘಟಕ ಹಾಕಿಸಿಕೊಟ್ಟಿದ್ದರು. ತಯಾರಿಕಾ ಹಂತದಲ್ಲಿದ್ದ ಸೀರೆಯೊಂದ ಆಗಷ್ಟೇ ವಿರಮಿಸುತ್ತಿತ್ತು. ‘ಸಾಹುಕಾರರು’ ಕುಣಿಯೊಳಗೆ (ಗುಂಡಿ) ಇಳಿದು, ತಾವೂ ಒಂದು ಕೈ ನೋಡಿಬಿಟ್ಟರು. ಲಯ ಹಿಡಿಯಲಿಲ್ಲ. ಈ ಮಹಿಳೆ ಸಹ ಸಲುಗೆಯಿಂದ ಸಾಹುಕಾರರಿಗೆ ನೇಯ್ಗೆಯ ರೀತಿ ಹೇಳಿಕೊಟ್ಟು, ಅವರಿಗೆ ರೂಢಿ ತಪ್ಪಿರುವುದನ್ನು ನೆನಪಿಸಿದಳು.
ಸಾಹುಕಾರ ಬಲರಾಮ್ ಅವರು, ‘ಈ ಮನೆ ಇವಳದೇ. ಎಷ್ಟು ದೊಡ್ಡ ಮನೆ ಕಟ್ಟಿಕೊಂಡಿದ್ದಾಳೆ, ನೋಡಿ. ಇನ್ನೊಂದು ಪ್ಲಾಟ್ ಹಿಡಿದಿದ್ದಾಳೆ. ನಾನಲ್ಲ ಸಾಹುಕಾರ. ಇವರೂ ಸಾಹುಕಾರರೇ ಆಗಿದ್ದಾರೆ. ಸೀರೆ ಉದ್ಯಮದಲ್ಲಿ ಭಗವಂತ ನಮಗೆ ಸಾಕಷ್ಟು ನೀಡಿದ್ದಾನೆ. ಈಗ ಇವರ ಸರದಿ. ಇವರು ಕಾರ್ಮಿಕರಲ್ಲ, ನನ್ನ ಉದ್ಯಮದಲ್ಲಿ ಪಾಲುದಾರರು’ ಎಂದು ಬಾಯ್ತುಂಬ ನುಗುತ್ತ ಹೇಳಿದರು.
ಆಧುನಿಕತೆ ತುಂಬಾ ಮುಂದೆ ಸಾಗಿದೆ. ಗಂಟೆಗೆ ಕಿಲೋಮೀಟರ್ಗಟ್ಟಲೆ ಬಟ್ಟೆ ಉತ್ಪಾದಿಸಬಹುದಾದ ಸಾಮರ್ಥ್ಯವುಳ್ಳ ಕಂಪನಿಗಳಿವೆ. ಮುದ್ರಿತ (ಪ್ರಿಂಟೆಂಡ್) ವಿನ್ಯಾಸ ಬಟ್ಟೆಗಳು ನಮ್ಮನ್ನು ಥಟ್ಟನೆ ಸೆಳೆಯುತ್ತವೆ. ಯಂತ್ರಗಳಿಂದ ತಯಾರಾದ ಬಟ್ಟೆ, ಯಂತ್ರಗಳಿಂದಲೇ ಆಕಾರಕ್ಕೆ ಅನುಗುಣವಾಗಿ ಕತ್ತರಿಸಿಕೊಂಡು, ಹೊಲಿದುಕೊಂಡು, ವಿನ್ಯಾಸ ಅಚ್ಚೊತ್ತಿದಾಗ ‘ಗ್ರೇಟ್ ಇನೇವೇಷನ್’ ಅನಿಸುತ್ತದೆ.
ಆದರೆ, ಮಗ್ಗದ ಮುಂದೆ ನಿಂತು, ಎಳೆ ಎಳೆ ಕೂಡಿಸಿ, ಒತ್ತಾಗಿ ಹೆಣೆದ ವಸ್ತ್ರವಾಗಿಸುವುದು ಮಾತ್ರವಲ್ಲದೆ, ಇಡೀ ವಸ್ತ್ರದಲ್ಲಿ ಆಕರ್ಷಕ ವಿನ್ಯಾಸ ಮೂಡಬೇಕು, ಅದಕ್ಕೊಂದು ಅಳತೆ ಇರಬೇಕು. ಬಣ್ಣಗಳ ಸಂಯೋಜನೆ ಮುಖ್ಯವಾಗಿರಬೇಕು, ಸೀರೆಯೊಂದು ಚೆಂದಗೊಳ್ಳಲು ಒಂದು ದಿನ ಬೇಕು, ಅಷ್ಟೊಂದು ತಾಳ್ಮೆ, ಏಕಾಗ್ರತೆ ಬೇಕು ಎಂಬುದು ‘ಗ್ರೇಟೆಸ್ಟ್’ ಅನಿಸದೇ ಇರದು. ತಂತ್ರಜ್ಞಾನ ಇಲ್ಲದ ಕಾಲದಲ್ಲಿಯೇ ಇಂತಹ ಸರಳ ತಾಂತ್ರಿಕ ಇತ್ತು, ಇದರಿಂದ ಎಲ್ಲವೂ ಸಾಧ್ಯವಾಗುತ್ತಿತ್ತು ಎಂಬುದು ‘ಅಮೇಜಿಂಗ್’ ಅನಿಸದೇ ಇರದು.
ಕೋಟಿ ನೂಲಿನಂತೆ ಸೂಕ್ಷ್ಮಾತಿ ಸೂಕ್ಷ್ಮ ಭಾವಗಳಿಂದ ಹೆಣೆದುಕೊಂಡು ದೇಹವಿದು. ಇದು ಗುಣಮಟ್ಟದ್ದೂ ಆಗಬೇಕು, ಗಟ್ಟಿಯೂ ಆಗಬೇಕು, ಆಕರ್ಷಕವೂ ಆಗಬೇಕು, ನೋಡುಗರ ಮನಸ್ಸಿಗೆ ಒಪ್ಪುವ ಅಂಶವೂ ಆಗಬೇಕೆಂದು ಅನಿಸದೇ ಇರದು...