
ನಮ್ಮನ್ನು ಟೀಕಿಸದಿದ್ದರೆ ವಿಪಕ್ಷವಾಗಿ ಕೂರಲು ಬಿಜೆಪಿಗೆ ಅವಕಾಶ ಇರಲ್ಲ: ಸಚಿವ ಸವದಿ
ಬೆಳಗಾವಿ: ‘ಬಿಜೆಪಿಯವರು ತಾವು ಜೀವಂತವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಟೀಕಿಸುತ್ತಿದ್ದಾರೆ. ಬರ ಪರಿಸ್ಥಿತಿ ಅಧ್ಯಯನ ಮಾಡುತ್ತಿದ್ದಾರೆ. ಇದನ್ನೂ ಮಾಡದಿದ್ದರೆ 2028ರ ಚುನಾವಣೆ ನಂತರ ವಿರೋಧ ಪಕ್ಷವಾಗಿ ಕುಳಿತುಕೊಳ್ಳಲು ಅವರಿಗೆ ಅವಕಾಶ ಇರುವುದಿಲ್ಲ’ ಎಂದು ಸಚಿವ ಲಕ್ಷ್ಮಣ ಸವದಿ ತಿರುಗೇಟು ಕೊಟ್ಟರು.
‘ಸಂಪುಟ ಸಂಕಟದಲ್ಲಿ ಸಿಲುಕಿದ ರಾಜ್ಯ ಸರ್ಕಾರ ಟೇಕಾಫ್ ಆಗುತ್ತಿಲ್ಲ’ ಎಂಬ ಬಿಜೆಪಿಯವರ ಹೇಳಿಕೆಗೆ, ಇಲ್ಲಿ ಶನಿವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ತಾವು ಜೀವಂತವಾಗಿ ಎಂದು ಹೇಳಬೇಕೆಂದರೆ, ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿಯವರು ಟೀಕಿಸಲೇಬೇಕು. ಸರ್ಕಾರ ಟೇಕಾಫ್ ಆಗಿಲ್ಲ ಎಂದು ಆರೋಪಿಸಲೇಬೇಕು. ಇಲ್ಲದಿದ್ದರೆ ಕೋಮಾ ಸ್ಥಿತಿಗೆ ಹೋಗುತ್ತಾರೆ. ಅಧಿವೇಶನದ ಸಂದರ್ಭ ಸರ್ಕಾರದ ಗಮನಸೆಳೆಯುವ ದೃಷ್ಟಿಯಿಂದ ಅವರೂ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲೇಬೇಕು. ಇದು ಅವರ ಜವಾಬ್ದಾರಿ ಕೂಡ’ ಎಂದರು.
‘ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಗಳಿಂದ ಸತ್ಕಾರ ಸ್ವೀಕರಿಸಿ, ಗೌರವಯುತವಾಗಿಯೇ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಿರ್ಗಮಿಸಿದ್ದಾರೆ. ಯಾರನ್ನೂ ನಾವು ಆ ಸ್ಥಾನದಿಂದ ಕಿತ್ತುಹಾಕಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬಿಜೆಪಿಯಲ್ಲಿ 25 ವರ್ಷ ಕೆಲಸ ಮಾಡಿ, ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ನನ್ನನ್ನು ಅಥಣಿ ಕ್ಷೇತ್ರದ ಮತದಾರರು ಅಪ್ಪಿಕೊಂಡು, ಒಪ್ಪಿಕೊಂಡು ಗೆಲ್ಲಿಸಿದ್ದಾರೆ. ಅವರಿಗೆ ಕೃತಜ್ಞನಾಗಿದ್ದೇನೆ’ ಎಂದರು.
‘ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಹೀಗೆ... ಮೂರು ಹಂತಗಳಲ್ಲಿ ಅಭಿವೃದ್ಧಿ ಮಾಡುತ್ತೇನೆ. ಜಿಲ್ಲೆಯ ಎಲ್ಲ ಶಾಸಕರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ. 2028ರ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಮ್ಮತದಿಂದ ಹೋಗುವಂತೆ ಪಕ್ಷದ ವರಿಷ್ಠರು ಹೇಳಿದ್ದಾರೆ’ ಎಂದರು.
‘ನನಗೆ ಯಾವ ಖಾತೆ ನೀಡುತ್ತಾರೆ ಎಂಬ ಚರ್ಚೆ ಬೇಡ. ಯಾವ ಖಾತೆ ಕೊಟ್ಟರೂ, ಉತ್ತಮವಾಗಿ ನಿರ್ವಹಿಸುವುದರಿಂದ ಅದಕ್ಕೆ ಬೆಲೆ ಬರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಅಥಣಿಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಜಾಗ ಮಂಜೂರಾಗಿದೆ. ಕಂದಾಯ ಇಲಾಖೆಯಿಂದ ಕೃಷಿ ಇಲಾಖೆಗೆ ಜಾಗ ಹಸ್ತಾಂತರವಾಗಬೇಕಿದೆ. ಆ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಆರಂಭಿಸುತ್ತೇವೆ’ ಎಂದು ತಿಳಿಸಿದರು.
‘ದೇಶದಲ್ಲಿ ನಡೆಯುತ್ತಿರುವ ಜನಗಣತಿ ಮುಗಿಯುವವರೆಗೆ ಯಾವುದೇ ತಾಲ್ಲೂಕು ಅಥವಾ ಜಿಲ್ಲೆ ವಿಭಜನೆ ಸಾಧ್ಯವಿಲ್ಲ. ಅದು ಮುಗಿದ ಮೇಲೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡುತ್ತೇವೆ. ಜಿಲ್ಲಾ ವಿಭಜನೆಗೆ ನಮ್ಮಲ್ಲಿ ಒಮ್ಮತವಿದೆ’ ಎಂದರು.
‘ಒಂದು ಕೋಟಿ ಟನ್ ಕಬ್ಬು ಬೆಳೆಯುವ ತಾಲ್ಲೂಕಾಗಲಿದೆ’
‘ಅಥಣಿ ತಾಲ್ಲೂಕಿನಲ್ಲಿ ಈಗ ವಾರ್ಷಿಕ 76 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. ಅಮ್ಮಾಜೇಶ್ವರಿ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗಳ ಕಾಮಗಾರಿ ಶೇ 90ರಷ್ಟು ಮುಗಿದಿದೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಈ ಯೋಜನೆಗಳ ಮೂಲಕ ರೈತರಿಗೆ ನೀರು ನೀಡಿದರೆ, 2027–28ನೇ ಸಾಲಿನಲ್ಲಿ 1 ಕೋಟಿ ಟನ್ ಕಬ್ಬು ಬೆಳೆಯುವ ತಾಲ್ಲೂಕಾಗಿ ಅಥಣಿ ಹೊರಹೊಮ್ಮಲಿದೆ’ ಎಂದು ಸವದಿ ಹೇಳಿದರು.