
ಗದಗ: ಜಿಲ್ಲೆಗೆ ಬೇಕಿದೆ ‘ನೀರಿನ ಭದ್ರತೆ‘
ಗದಗ: ಜಿಲ್ಲೆ ರಚನೆಯಾಗಿ 30 ವರ್ಷಗಳು ಸಮೀಪಿಸುತ್ತಿದೆ. ಹೀಗಿದ್ದರೂ, ಬಹುತೇಕ ಭಾಗಗಳಲ್ಲಿ ನೀರಿನ ಸಮರ್ಪಕ ಪೂರೈಕೆ ಸಾಧ್ಯವಾಗಿಲ್ಲ. ಜನರು, ನೀರಿಗಾಗಿ ಅಲೆದಾಡುವುದು ಇನ್ನೂ ತಪ್ಪುತ್ತಿಲ್ಲ.
ಜಿಲ್ಲೆಯಲ್ಲಿ ಪ್ರಮುಖ ಜಲಮೂಲ ಇಲ್ಲವಾದ್ದರಿಂದ ತುಂಗಭದ್ರಾ ನದಿ ಹಾಗೂ ಮಲಪ್ರಭಾ ನದಿ ಮೂಲಕ ವಿವಿಧ ಭಾಗಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನದಿಗಳಲ್ಲಿ ನೀರು ಕಡಿಮೆಯಾದರೆ ಇಲ್ಲವೇ ನೀರು ಪೂರೈಕೆಯಾಗುವ ಮಾರ್ಗದಲ್ಲಿ ತಾಂತ್ರಿಕ ತೊಂದರೆ ಎದುರಾದರೆ ಜಿಲ್ಲೆಯಲ್ಲಿ ನೀರಾಗಾಗಿ ಹಾಹಾಕಾರ ಉಂಟಾಗುತ್ತದೆ. ಸಮಸ್ಯೆಗಳನ್ನು ನಿವಾರಿಸಿ, ಶಾಶ್ವತವಾಗಿ ನೀರಿನ ಯೋಜನೆ ರೂಪಿಸುವುದು ಗಗನಕುಸುಮವಾಗಿಯೇ ಇದೆ.
ಜಿಲ್ಲಾ ಕೇಂದ್ರದಲ್ಲೂ ತಪ್ಪದ ಬವಣೆ: ಜಿಲ್ಲಾ ಕೇಂದ್ರವಾದ ಗದಗ–ಬೆಟಗೇರಿ ನಗರದಲ್ಲಿ ತುಂಗಭದ್ರಾ ನದಿ ನೀರನ್ನು ಪೂರೈಸಲಾಗುತ್ತಿದೆ. ನದಿಯಲ್ಲಿ ನೀರಿದ್ದರೂ 15–20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬುದು ಜನರ ಆರೋಪ.
ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಹಮ್ಮಿಗಿ ಬ್ಯಾರೇಜಿಗೆ ಬರುವ ನೀರನ್ನು ಜಾಕ್‌ವೆಲ್ ಮೂಲಕ 45 ಕಿ.ಮೀ. ದೂರದ ಡಂಬಳ ಗ್ರಾಮದಲ್ಲಿನ ಮಧ್ಯಂತರ ಪಂಪಿಂಗ್ ಕೇಂದ್ರಕ್ಕೆ, ಅಲ್ಲಿಂದ 9.8 ಕಿ.ಮೀ. ದೂರದ ಪಾಪನಾಶಿಯಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ, ಅಲ್ಲಿಂದ 8.69 ಕಿ.ಮೀ ದೂರದಲ್ಲಿರುವ ‘ಎ’ ಪಾಯಿಂಟ್‌ಗೆ ನೀರು ಸರಬರಾಜು ಆಗುತ್ತದೆ. ಅಲ್ಲಿಂದ ನಗರದ 16 ಕಡೆಗಳಲ್ಲಿರುವ ಓವರ್‌ಹೆಡ್ ಟ್ಯಾಂಕ್‌ಗಳ ಮೂಲಕ ವಿವಿಧ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.
‘ಹಮ್ಮಿಗಿಯಲ್ಲಿರುವ ಜಾಕ್‌ವೆಲ್‌ನ ಚಾವಣಿ ಭಾಗಶಃ ಹಾಳಾಗಿದೆ. ಇದರಿಂದಾಗಿ ನೀರನ್ನು ಪಂಪ್ ಮಾಡುವ ಯಂತ್ರಗಳನ್ನು ರಕ್ಷಿಸುವುದು ಸವಾಲಾಗಿದೆ. ಅಲ್ಲಿನ ಹಲವು ಎಲೆಕ್ಟ್ರಾನಿಕ್ ಹಾಗೂ ವಿದ್ಯುತ್ ಉಪಕರಣಗಳು ಸುಸ್ಥಿತಿಯಲ್ಲಿ ಇಲ್ಲ. ಡಂಬಳದಲ್ಲಿರುವ ಕೇಂದ್ರದಲ್ಲೂ ಬಹುತೇಕ ಇಂತಹುದೇ ಸ್ಥಿತಿ ಇದೆ. ಪಾಪನಾಶಿಯಲ್ಲಿರುವ ಘಟಕದಲ್ಲಿರುವ ಕೆಲವು ಯಂತ್ರಗಳ ದುರಸ್ತಿ ಅಗತ್ಯವಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
‘ಇದೆಲ್ಲದರ ನಡುವೆ ಆಗಾಗ್ಗೆ ವಿದ್ಯುತ್ ವ್ಯತ್ಯಯವಾಗುವುದರಿಂದ ನೀರಿನ ಹರಿಯುವಿಕೆ ಒತ್ತಡ ಹೆಚ್ಚಿ, ಪೈಪ್‌ಗಳಿಗೆ ಹಾನಿಯಾಗುತ್ತಿದೆ. ನೆಲದಡಿ ಇರುವ ಈ ಪೈಪ್‌ಗಳನ್ನು ದುರಸ್ತಿ ಮಾಡುವುದು ಸುಲಭಸಾಧ್ಯವಲ್ಲ. ಇಷ್ಟೆಲ್ಲ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ನೀರು ಪೂರೈಕೆ ಮಾಡಬೇಕಿರುವುದರಿಂದ ಒಮ್ಮೊಮ್ಮೆ ವ್ಯತ್ಯಯವಾಗುತ್ತಿದೆ. ಬೇಸಿಗೆಯಲ್ಲೂ ನಿಯಮಿತವಾಗಿ ನೀರು ಪೂರೈಸಲಾಗಿತ್ತು. ದುರಸ್ತಿ ಕಾರ್ಯಗಳನ್ನೂ ವೇಗವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತಿದೆ’ ಎಂದು ಹೇಳಿದರು.
ನರೇಗಲ್: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದೆ ಜಲಮೂಲಗಳು ಬರಿದಾಗಿದ್ದು, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಇದರಿಂದ ಕೊಳವೆಬಾವಿಗಳಲ್ಲೂ ನೀರಿಲ್ಲದಂತಾಗಿದೆ.
ಸದ್ಯ ಪಟ್ಟಣಕ್ಕೆ ಜಿಗಳೂರು ಕೆರೆಯಿಂದ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಮಳೆಯ ಕೊರತೆಯಿಂದಾಗಿ ಕೆರೆಯ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದೆ. ‘ಅಮೃತ 2.0’ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. 17 ವಾರ್ಡ್‌ಗಳಲ್ಲಿ ಪೈಪ್‌ಲೈನ್ ಮತ್ತು ಮೀಟರ್ ಅಳವಡಿಕೆ ಪೂರ್ಣಗೊಂಡಿದ್ದರೂ, ಕೆಲವೇ ಬಡಾವಣೆಗಳಲ್ಲಿ ಪ್ರಾಯೋಗಿಕ ಪೂರೈಕೆಗಷ್ಟೇ ಸೀಮಿತವಾಗಿದೆ.
‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಜಲ ಸಂಗ್ರಹಾಗಾರಗಳು ನಿರ್ವಹಣೆಯಿಲ್ಲದೆ ವರ್ಷಗಳಿಂದ ಪಾಳುಬಿದ್ದಿವೆ. ನಿರ್ವಹಣೆ ಕೊರತೆ ಕಾರಣ ಕೆಲವೊಮ್ಮೆ ಹುಳುಗಳು ಮತ್ತು ಹೊಲಸು ಮಿಶ್ರಿತವಾಗಿ ನೀರು ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಮುಖಂಡ ಸೋಮಪ್ಪ ಹನಮಸಾಗರ ಆಗ್ರಹಿಸಿದರು.
ಮುಂಡರಗಿ: ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದರೂ, ನದಿ ದಂಡೆಯ ಹಮ್ಮಿಗಿ, ಹೆಸರೂರು, ಕೊರ್ಲಹಳ್ಳಿ, ಬಿದರಳ್ಳಿ ಮೊದಲಾದ ಗ್ರಾಮಗಳೇ ನೀರಿಗಾಗಿ ಪರಿತಪಿಸುವಂತಾಗಿದೆ.
ತಾಲ್ಲೂಕಿನ ಬಿದರಳ್ಳಿ ಗ್ರಾಮಕ್ಕೆ ನಿತ್ಯ 2.50 ಲಕ್ಷ ಲೀಟರ್ ನೀರು ಪೂರೈಕೆ ಬದಲಾಗಿ, 50,000–60,000 ಸಾವಿರ ಲೀಟರ್ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿತ್ತು. ಗ್ರಾಮಸ್ಥರ ಹೋರಾಟಕ್ಕೆ ಮಣಿದು ಇದಿಗ ಅಗತ್ಯ ಪ್ರಮಾಣಕ್ಕೆ ತಕ್ಕಂತೆ ನೀರು ಪೂರೈಸಲಾಗುತ್ತಿದೆ.
ತಾಲ್ಲೂಕಿನ ಪ್ರತಿಯೊಂದು ಮನೆಗೂ ಪ್ರತ್ಯೇಕ ಪೈಪ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ. ಆದರೆ, ಬಹುತೇಕ ಜನರು ತಮ್ಮ ನಳಗಳಿಗೆ ಟ್ಯಾಪ್ ಅಳವಡಿಸದೇ ಇರುವುದರಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದೆ. ಕೆಲವು ಗ್ರಾಮಗಳಿಗೆ ಅಗತ್ಯಕ್ಕಿಂತ ಹೆಚ್ಚು ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ತಾಲ್ಲೂಕಿನ ಗಂಗಾಪುರ, ಕೊರ್ಲಹಳ್ಳಿ ಮೊದಲಾದ ಭಾಗಗಳಲ್ಲಿ ಬೃಹತ್ ಪೈಪ್ ಮೂಲಕ ನಿತ್ಯ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ.
ತಾಲ್ಲೂಕಿನ ಹಮ್ಮಿಗಿ, ಜಂತ್ಲಿ–ಶಿರೂರ, ಹೆಸರೂರು ಮೊದಲಾದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಈಗಾಗಲೇ ಆರಂಭವಾಗಿದ್ದು, ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ತಾಲ್ಲೂಕು ಆಡಳಿತವು ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂಬುದು ಜನರ ಒತ್ತಾಯ.
ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಾರದಿಂದ ವಾರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. 24x7 ನೀರು ಪೂರೈಕೆ ಎನ್ನುವುದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಕನಿಷ್ಠ ನಾಲ್ಕು ದಿನಕ್ಕೊಮ್ಮೆ, ಗರಿಷ್ಠ ಎರಡು ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.
‘ತಾಲ್ಲೂಕಿನ 30 ಹಳ್ಳಿಗಳಿಗೆ ನವಿಲುತೀರ್ಥ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಆಗುತ್ತಿದೆ. ಜಲಾಶಯ ಸಂಪೂರ್ಣ ಭರ್ತಿಯಾದರಷ್ಟೇ ನಿರಂತರವಾಗಿ ನೀರು ದೊರೆಯುತ್ತದೆ. ವಿದ್ಯುತ್ ವ್ಯತ್ಯಯವೂ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ’ ಎಂದು ಪಟ್ಟಣದ ನಿವಾಸಿ ಎಸ್.ಬಿ. ಜೋಗಣ್ಣವರ ಹೇಳಿದರು.
‘ನರಗುಂದ ಪಟ್ಟಣದಲ್ಲಿ ಸದಸ್ಯ ನೀರಿನ ಸಮಸ್ಯೆ ಇಲ್ಲ. ನೀರು ಪೂರೈಕೆಯಾದಾಗ ನಾಗರಿಕರು ಪೋಲು ಮಾಡದಿದ್ದರೆ ಸಕಾಲಕ್ಕೆ ನೀರು ಒದಗಿಸಲು ಸಾಧ್ಯವಾಗುತ್ತದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಸುಭಾಸ ಖುದಾನಪುರ ಹೇಳಿದರು.
ಪೂರಕ ಮಾಹಿತಿ: ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್. ಹಣಗಿ, ಶ್ರೀಶೈಲ ಎಂ. ಕುಂಬಾರ, ನಿಂಗಪ್ಪ ಹಮ್ಮಿಗಿ, ಚಂದ್ರು ಎಂ. ರಾಥೋಡ್, ಬಸವರಾಜ ಹಲಕುರ್ಕಿ
ಫ್ಲೋರೈಡ್‌ಯುಕ್ತ ನೀರೇ ಗತಿ
ಶಿರಹಟ್ಟಿ: ತಾಲ್ಲೂಕಿನ ಬಹುತೇಕ ಗ್ರಾಮದ ಶುದ್ಧ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಶುದ್ಧ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಸದ್ಯ ಬೆರಳೆಣಿಕೆಯಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಫ್ಲೋರೈಡ್‌ಯುಕ್ತ ನೀರೇ ಜನರಿಗೆ ಗತಿಯಾಗಿದೆ.
ತಾಲ್ಲೂಕಿನಲ್ಲಿ ಒಟ್ಟು 56 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸುಗನಹಳ್ಳಿ, ಕೊಂಚಿಗೇರಿ, ಹಡಗಲಿ, ನವೇ ಭಾವನೂರು, ಶಿವಾಜಿನಗರ, ಎಂ ಹೊಸಳ್ಳಿ, ಹೆಬ್ಬಾಳ ಸೇರಿದಂತೆ ಒಟ್ಟು 23 ಗ್ರಾಮದಲ್ಲಿ ನೀರಿನ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಶುದ್ಧ ನೀರಿನ ಘಟಕಗಳ ಸ್ಥಾಪನೆ ಹಾಗೂ ನಿರ್ವಹಣೆ ಪಡೆದ ಏಜೆನ್ಸಿಯ ಅವಧಿ ಮುಗಿದರೂ ಈವರೆಗೆ ಸ್ಥಳೀಯ ಆಡಳಿಕ್ಕೆ ಘಟಕಗಳನ್ನು ಹಸ್ತಾಂತರಿಸಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆರು ಶುದ್ಧ ನೀರಿನ ಘಟಕಗಳ ಪೈಕಿ, ನಾಲ್ಕು ಮಾತ್ರ ಚಾಲ್ತಿಯಲ್ಲಿವೆ.
ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಜನರ ಆರೋಗ್ಯ ದೃಷ್ಟಿಯಿಂದ ಶುದ್ಧ ನೀರು ಒದಗಿಸಲು ಆಳಿತ ಕ್ರಮ ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಕಲುಷಿತ ನೀರು ಸರಬರಾಜು: ಆರೋಪ
ಗಜೇಂದ್ರಗಡ: ಡಿಬಿಒಟಿ ಯೋಜನೆಯಂತೆ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಜನರ ನೀರಿನ ಬವಣೆ ನೀಗಿದೆ. ಆದರೆ, ಆಗಾಗ ತಾಂತ್ರಿಕ ತೊಂದರೆ ಹಾಗೂ ಪೈಪ್‌ಲೈನ್ ಒಡೆದಾಗ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ನೀರಿನ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ.
ತಾಲ್ಲೂಕಿನ ರಾಜೂರು, ದಿಂಡೂರು, ಲಕ್ಕಲಕಟ್ಟಿ, ನಾಗೇಂದ್ರಗಡ, ಮುಶಿಗೇರಿ, ಕಲ್ಲಿಗನೂರು, ನೆಲ್ಲೂರು, ಬೇವಿನಕಟ್ಟಿ, ಸೂಡಿ, ಕಾಲಕಾಲೇಶ್ವರ, ಬೈರಾಪೂರ, ಜಿಗೇರಿ, ರಾಮಾಪುರ, ಹಿರೇಕೊಪ್ಪ, ಕುಂಟೋಜಿ, ಗೊಗೇರಿ ಸೇರಿದಂತೆ 33 ಹಳ್ಳಿಗಳಿಗೆ ನವಿಲುತೀರ್ಥದ ಜಲಾಶಯದ ಮೂಲಕ ಮಲಪ್ರಭಾ ನದಿ ನೀರು ಪೂರೈಸಲಾಗುತ್ತಿದೆ. ಕಣವಿ ವೀರಭದ್ರೇಶ್ವರ ಬೆಟ್ಟದ ಮೇಲೆ 4 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಬೃಹತ್ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹಿಸಿ, ಅಲ್ಲಿಂದ 33 ಹಳ್ಳಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣಕ್ಕೆ ಜಿಗಳೂರು ಕೆರೆಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 4-5 ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದ್ದರೂ, ಗಡಿ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ನೀರಿನ ಪೈಪ್‌ಲೈನ್, ನಿಯಂತ್ರಣ ಕೊಠಡಿಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಹಾಗೂ ನೀರು ಗಂಟಿಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಕೆಲವೊಮ್ಮೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೊಳೆ ನೀರು ಹಾಗೂ ಕೊಳವೆ ಬಾವಿ ನೀರನ್ನು ಮಿಶ್ರಣ ಮಾಡಿ ಪೂರೈಸುತ್ತಿದ್ದಾರೆ. ಕೆಲವೊಮ್ಮೆ ಕಲುಷಿತ ನೀರು ಬರುತ್ತವೆ ಎಂದು ಲಕ್ಕಲಕಟ್ಟಿ ಗ್ರಾಮಸ್ಥರು ಆರೋಪಿಸುತ್ತಾರೆ.
ಕೊಳವೆ ಬಾವಿ ನೀರು ಪೂರೈಕೆ
ಲಕ್ಷ್ಮೇಶ್ವರ: ಪಟ್ಟಣಕ್ಕೆ ಹಾವೇರಿ ಮೇವುಂಡಿ ಹತ್ತಿರದ ತುಂಗಭದ್ರಾ ನದಿಯಿಂದ 22 ವರ್ಷಗಳಿಂದ ನೀರು ಪೂರೈಕೆಯಾಗುತ್ತಿದೆ. ಪೈಪ್‌ಲೈನ್ ಹಳೆಯದಾಗಿದ್ದು, ಆಗಾಗ ದುರಸ್ತಿಗೆ ಬರುತ್ತಿದೆ. ಇದರಿಂದಾಗಿ 15–20 ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ ದಿನಗಳಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದೆ.
ತಾಲ್ಲೂಕಿನ ಕೊನೆಯ ಹಳ್ಳಿ ಬಾಲೆಹೊಸೂರಿನಲ್ಲೂ ನೀರಿನ ಸಮಸ್ಯೆ ತಲೆದೋರಿದೆ. ಜಲಜೀವನ್ ಮಿಷನ್ ಯೋಜನೆಯಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ದೊಡ್ಡೂರಲ್ಲೂ ಈ ಯೋಜನೆ ಹಳ್ಳ ಹಿಡಿದಿದೆ.