
ಕೊಡಗು: ಒಂಬತ್ತು ತಿಂಗಳಿನಲ್ಲಿ 42 ಡೆಂಗಿ ಪ್ರಕರಣ ಪತ್ತೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ವರ್ಷ 42 ಮಂದಿ ಡೆಂಗಿ ರೋಗ ಪತ್ತೆಯಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾತಾವರಣ ಸಂಪೂರ್ಣವಾಗಿ ಬದಲಾಗಿರುವುದರಿಂದ ಎಚ್ಚರಿಕೆ ವಹಿಸಬೇಕಿದೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ.
ಹಲವು ದಿನಗಳಿಂದ ಮಳೆಆಗಿಲ್ಲ. ಬಿಸಿಲೂ ವಿಪರೀತ ಇರುವುದರಿಂದ ಸದ್ಯ ನೀರು ಎಲ್ಲೆಡೆ ಆವಿಯಾಗಿದೆ ಎಂದು ಜಿಲ್ಲಾ ಸರ್ವೆಕ್ಷಣಾ ಘಟಕದ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಆಗದೆ ಆಗೊಮ್ಮೆ, ಈಗೊಮ್ಮೆ ಮಳೆಯಾಗುವುದರಿಂದ ಸಮಸ್ಯೆ ಉಂಟಾಗಬಹುದು ಎಂದು ಅವರು ಎಚ್ಚರಿಸುತ್ತಾರೆ.
ಒಮ್ಮೆ ಮಳೆ ಬಂದಾಗ ಕುಂಡಗಳಲ್ಲಿ, ಟೈಯರ್ಗಳಲ್ಲಿ, ಹಳ್ಳಗಳಲ್ಲಿ ವಿಶೇಷವಾಗಿ ರಸ್ತೆ ಹೊಂಡಗಳಲ್ಲಿ ನೀರು ನಿಲ್ಲುವುದು ಸಹಜ. ಈ ನೀರಿನಲ್ಲಿಯೇ ಡೆಂಗಿ ರೋಗವನ್ನು ಹರಡುವಂತಹ ಈಡೀಸ್ ಈಜಿಪ್ಟೈ ಸೊಳ್ಳೆ ಉತ್ಪತ್ತಿಯಾಗುತ್ತದೆ. ಈ ಸೊಳ್ಳೆಯಿಂದಲೇ ಮಾರಕ ಡೆಂಗಿ ರೋಗ ಹರಡುತ್ತದೆ. ಹಾಗಾಗಿ, ಮಳೆ ಬಂದ ನಂತರ ನೀರು ನಿಲ್ಲದಂತೆ ನೋಡಿಕೊಳ್ಳುವುದು ತೀರಾ ಅಗತ್ಯ.
ಈ ಸೊಳ್ಳೆಯು ನಿಂತ ಸ್ವಚ್ಛ ನೀರಿನಲ್ಲಿ ಹುಟ್ಟುವುದು ವಿಶೇಷ. ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ. ಸೊಳ್ಳೆಯು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 8 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. 7 ದಿನಗಳ ಮೊದಲ 3 ಹಂತಗಳು ಮೊಟ್ಟೆ, ಲಾರ್ವ, ಪ್ಯೂಪಾ ಈ ಪ್ರಕ್ರಿಯೆಯು ನೀರಿನಲ್ಲಿ ನಡೆಯುತ್ತದೆ. ಹಾಗಾಗಿ, ನೀರು ನಿಲ್ಲದಂತೆ ನೋಡಿಕೊಳ್ಳಲೇ ಬೇಕಿದೆ.
ಸಿಮೆಂಟ್ ತೊಟ್ಟಿ, ಪ್ಲಾಸ್ಟಿಕ್ ತೊಟ್ಟಿ, ಬಕೆಟ್ಗಳು, ಡ್ರಂಗಳು, ಬ್ಯಾರಲ್, ಖಾಲಿ ಡಬ್ಬಗಳು, ಹವಾನಿಯಂತ್ರಕ, ಗಡಿಗೆ ತುಂಡು, ತೆಂಗಿನ ಚಿಪ್ಪು, ಹಳೆಯ, ಒಡೆದ ಟೈರ್ಗಳು, ಹೀಗೆ ಎಲ್ಲೆಲ್ಲಿ ಸ್ವಚ್ಛ ನೀರು ನಿಲ್ಲಬಹುದೋ ಅಲ್ಲೆಲ್ಲಾ ಈ ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ.
ಎಲ್ಲಾ ನೀರಿನ ತೊಟ್ಟಿಗಳು, ಡ್ರಂ, ಬ್ಯಾರಲ್ಗಳು, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಪಡಿಸಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕಿದೆ.
ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ಮೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ ಈ ಕಾಯಿಲೆಯ ಲಕ್ಷಣಗಳಾಗಿವೆ.
ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಇಲಾಖೆಯ ಅಧಿಕಾರಿಗಳು ಮನವಿ ಮಾಡುತ್ತಾರೆ.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸುವುದು ಹಾಗೂ ಹಗಲಿನಲ್ಲಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರುವುದು ಅತಿ ಮುಖ್ಯವಾಗಿದೆ.
ಈ ವರ್ಷ ಪರೀಕ್ಷಿಸಿದ 2,502 ರಕ್ತದ ಮಾದರಿಗಳ ಪೈಕಿ 42 ಮಂದಿಯಲ್ಲಿ ಡೆಂಗಿ ಪತ್ತೆಯಾಗಿದೆ.