
ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಸಹಕರಿಸಿ: ಪಿ.ಎ ಮುರುಳಿ
ಶೃಂಗೇರಿ: ‘ಪ್ರತಿ ವರ್ಷದಂತೆ ಈ ವರ್ಷ ಶಾರದಾ ಪೀಠದಲ್ಲಿ ನಡೆಯುವ ಶರನ್ನವರಾತ್ರಿ ಉತ್ಸವವನ್ನು ಅ.10ರಿಂದ ವಿಜೃಂಭಣೆಯಿಂದ ನಡೆಸಲು ಎಲ್ಲಾ ಭಕ್ತರು ಸಹಕರಿಸಬೇಕು’ ಎಂದು ಶಾರದಾ ಮಠದ ಆಡಳಿತಾಧಿಕಾರಿ ಪಿ.ಎ ಮುರುಳಿ ಹೇಳಿದರು.
ಶೃಂಗೇರಿ ಶಾರದಾ ಮಠದ ಪ್ರವಚನ ಮಂದಿರದಲ್ಲಿ ಭಾನುವಾರ ನಡೆದ ಶರನ್ನವರಾತ್ರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ನವರಾತ್ರಿ ಉತ್ಸವದಲ್ಲಿ ಪ್ರತಿ ದಿನವೂ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ ಬೀದಿ ಉತ್ಸವವು ನಡೆಯಲಿದ್ದು, 9ನೇ ದಿನದಂದು ಕಾಳಿಕಾಂಬಾ ದೇವಸ್ಥಾನದಲ್ಲಿ ಬನ್ನಿ ಉತ್ಸವ ನಡೆಯಲಿದೆ. ರಥೋತ್ಸವದಲ್ಲಿ ಪಾಲ್ಗೊಳ್ಳುವ ಸ್ಥಬ್ಧ ಚಿತ್ರಗಳು ಪರಂಪರೆಯನ್ನು ಬಿಂಬಿಸಲಿವೆ’ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಪಟ್ಟಣದ ರಸ್ತೆ ವಿಸ್ತರಣೆ ಉದ್ದೇಶ ಹೊಂದಲಾಗಿದ್ದು, ಉತ್ಸವದ ಅಂಗವಾಗಿ ತಾತ್ಕಲಿಕವಾಗಿ ಮುಖ್ಯ ರಸ್ತೆಯ ಗುಂಡಿಯನ್ನು ಮುಚ್ಚಲು ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ವಾಹನ ನಿಲುಗಡೆ ಮತ್ತು ಪ್ರವಾಸಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳ ಸಿಬ್ಬಂದಿ ನಿರ್ವಹಿಸಲಿದ್ದಾರೆ. ಬೀದಿ ದೀಪವನ್ನು ಸಮರ್ಪಕವಾಗಿ ಇಡುವಂತೆ ಮೆಸ್ಕಾಂಗೆ ಸೂಚನೆ ನೀಡಲಾಗುವುದು' ಎಂದರು.
ಪಟ್ಟಣದ ಸಂಚಾರ ವ್ಯವಸ್ಥೆ, ಗಾಂಧಿ ಮೈದಾನದಿಂದ ಮುಖ್ಯ ರಸ್ತೆಗೆ ಬರುವ ರಸ್ತೆಯಲ್ಲಿರುವ ಗೂಡಂಗಡಿ ತೆರವು ಮಾಡುವುದು ಸೇರಿದಂತೆ ವಿವಿಧ ವಿಷಯ ಸಾರ್ವಜನಿಕರು ವ್ಯಕ್ತಪಡಿಸಿದರು.
ಸಭೆಯಲ್ಲಿ ಮಠದ ಅಧಿಕಾರಿಗಳಾದ ಶಿವಶಂಕರ ಭಟ್, ಕೃಷ್ಣ ಭಟ್, ಶ್ರೀಕಾಂತ್, ಸತೀಶ್ ಭಟ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸರಸ್ವತಿ ಷಣ್ಮುಗ ಸುಂದರಿ, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಎಲ್ ರವಿ ಕುಮಾರ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಕೆ ಪರಾಶರ, ವಕೀಲ ಜಿ.ಎಂ.ಸತೀಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಲಕ್ಷ್ಮಿನಾರಾಯಣ, ಎ.ಎಸ್ ನಯನ, ಉಮೇಶ್ ಪುದುವಾಳ್, ಸುಮಂಗಲಿ ಆನಂದ ಸ್ವಾಮಿ ಭಾಗವಹಿಸಿದ್ದರು.
261006-126-1937447412