
ಕೋಲಾರ | ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚಾಲನೆ: ಕೆಪಿಸಿಸಿ ಉಪಾಧ್ಯಕ್ಷ
ಕೋಲಾರ: ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗುವುದು. ಶಾಸಕರ ಶಿಫಾರಸು, ಜಾತಿ ಅಥವಾ ಹಣಬಲಕ್ಕೆ ಮನ್ನಣೆ ನೀಡದೆ, ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ ತಿಳಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಕ್ಷದ ಸಂಘಟನೆಯಲ್ಲಿ ಶಿಸ್ತು ಮತ್ತು ಸಮನ್ವಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಎಐಸಿಸಿ ಮೂಲಕ ಆಯ್ಕೆ ಮಾಡಲಾಗಿದೆ. ಶಾಸಕರು ಸೇರಿದಂತೆ ಪಕ್ಷದ ಎಲ್ಲರೂ ಜಿಲ್ಲಾ ಅಧ್ಯಕ್ಷರ ಮೂಲಕವೇ ಸಂಘಟನಾತ್ಮಕ ಕಾರ್ಯ ನಡೆಸಬೇಕು ಎಂಬುದು ಹೈಕಮಾಂಡ್‌ನ ಸೂಚನೆಯಾಗಿದೆ. ಇದೇ ಮಾದರಿಯಲ್ಲಿ ಬ್ಲಾಕ್ ಮಟ್ಟದಲ್ಲಿಯೂ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಿ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ’ ಎಂದರು.
ಅ.8ರಂದು ಆರಂಭವಾಗಿರುವ ಬ್ಲಾಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಅ.30ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಶಾಸಕರು, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಘಟನೆಯ ಮುಖಂಡರು ಕಾರ್ಯಕರ್ತರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಪ್ರತಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಆಯ್ಕೆಯಾದವರ ಹೆಸರನ್ನು ಕೆಪಿಸಿಸಿಗೆ ಕಳುಹಿಸಿ, ಅಲ್ಲಿಂದ ಅನುಮೋದನೆ ಪಡೆದ ಬಳಿಕ ನೇಮಕ ಮಾಡಲಾಗುವುದು’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಎಲ್ಲಾ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. 60 ವರ್ಷ ದಾಟಿದವರಿಗೆ ಸಾಮಾನ್ಯವಾಗಿ ಕಡಿಮೆ ಅವಕಾಶ ನೀಡಲಾಗುತ್ತದೆಯಾದರೂ, ಕೆಲವು ಹಿರಿಯರಿಗೆ ಅವಕಾಶ ಸಿಗಲಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಎದುರಾಗಲಿರುವುದರಿಂದ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೆಪಿಸಿಸಿ ವೀಕ್ಷಕಿ ಯೋಗೇಶ್ವರಿ ಮಾತನಾಡಿ, ‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ನ್ಯಾಯದ ತತ್ವದಡಿ ವಿವಿಧ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗುವುದು’ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ಮಾತನಾಡಿ, ‘ಇದು ಸಂಘಟನಾ ಸಜ್ಜನ್-2 ಅಭಿಯಾನವಾಗಿದ್ದು, ಬ್ಲಾಕ್ ಕಾಂಗ್ರೆಸ್ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲರ ಅಭಿಪ್ರಾಯ ಆಲಿಸಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ’ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ಸರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾದ್ರಿಪುರ ಬಾಬು, ಚಿಕ್ಕ ಅಯ್ಯೂರು ರವೀಂದ್ರನಾಥ್ ಇದ್ದರು.
ವೇಮಗಲ್‌ನಲ್ಲಿ ಅಭಿಪ್ರಾಯ ಸಂಗ್ರಹ
ವೇಮಗಲ್‌ನಲ್ಲಿ ಕೋಲಾರ ತಾಲ್ಲೂಕು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
‘ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಬ್ಲಾಕ್ ಮಟ್ಟದಲ್ಲಿ ಸಮರ್ಥ ನಾಯಕತ್ವವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಅರ್ಹತೆ, ಪಕ್ಷದ ಸಂಘಟನೆಯಲ್ಲಿ ಅವರ ಸೇವೆ, ಕಾರ್ಯಕರ್ತರೊಂದಿಗೆ ಹೊಂದಿರುವ ಒಡನಾಟ ಹಾಗೂ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯದ ಕುರಿತು ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆಯಲಾಗಿದೆ’ ಎಂದು ವೆಂಕಟೇಶ್ ಹೇಳಿದರು.