ಕೋಲಾರ ನಗರಸಭೆಯಿಂದ ನಗರದಾದ್ಯಂತ ರಸ್ತೆ ಒತ್ತುವರಿ ತೆರವು, ಜೆಸಿಬಿಗಳ ಘರ್ಜನೆ

ಕೋಲಾರ ನಗರಸಭೆಯಿಂದ ನಗರದಾದ್ಯಂತ ರಸ್ತೆ ಒತ್ತುವರಿ ತೆರವು, ಜೆಸಿಬಿಗಳ ಘರ್ಜನೆ

ಕೋಲಾರ ನಗರಸಭೆಯಿಂದ ನಗರದಾದ್ಯಂತ ರಸ್ತೆ ಒತ್ತುವರಿ ತೆರವು, ಜೆಸಿಬಿಗಳ ಘರ್ಜನೆ

ಕೋಲಾರ: ಕೋಲಾರ ನಗರದಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಕಾಣದಂಥ ರೀತಿಯಲ್ಲಿ ಬೃಹತ್‌ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಭಾನುವಾರ ಒಂದೇ ದಿನ ಸುಮಾರು 20 ಕಿ.ಮೀ ಸೇರಿದಂತೆ ಒಟ್ಟು 22.5 ಕಿ.ಮೀ ವ್ಯಾಪ್ತಿಯ ಒತ್ತುವರಿ ತೆರವುಗೊಳಿಸಲಾಗಿದೆ.

ಕೋಲಾರ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ ಸೂಚನೆಯಂತೆ ಪೌರಾಯುಕ್ತ ವೆಂಕಟೇಶ್ ನಾಗನೂರ ನೇತೃತ್ವದಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ.

ನಗರಸಭೆಯಿಂದ ಕೈಗೊಂಡ ಈ ಬೃಹತ್‌ ಕಾರ್ಯಾಚರಣೆಯಲ್ಲಿ ರಸ್ತೆ, ಪಾದಚಾರಿ ಮಾರ್ಗ ಹಾಗೂ ಚರಂಡಿ ಮೇಲಿನ ಒತ್ತುವರಿಗಳನ್ನು ಕಿತ್ತು ಹಾಕಲಾಯಿತು. ಕೆಲವರು ಸಿಮೆಂಟಿನಿಂದ ರಸ್ತೆವರೆಗೆ ಮೆಟ್ಟಿಲು ನಿರ್ಮಿಸಿಕೊಂಡಿದ್ದರು. ಚರಂಡಿ ದಾಟಿ ರಸ್ತೆಗೆ ಚಾಚಿಕೊಂಡಿದ್ದ ಫಲಕಗಳನ್ನು ತೆಗೆದು ಹಾಕಲಾಯಿತು.

ಭಾನುವಾರ ರಜೆಯಲ್ಲಿದ್ದ ಮಾಲೀಕರು ಬೆಳಿಗ್ಗೆ ತಮ್ಮ ಅಂಗಡಿ ಮಳಿಗೆಗಳ ಮುಂದಿನ ಸ್ಥಿತಿ ನೋಡಿ ಕಕ್ಕಾಬಿಕ್ಕಿಯಾದರು.

ಕೆಲವರು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಲಾವಕಾಶ ನೀಡದೆ ತೆರವುಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ನಗರಸಭೆ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದರು.

ಬೆಳಿಗ್ಗೆ 6 ಗಂಟೆಗೆ ಶುರುವಾದ ಸುಮಾರು 21 ಜೆಸಿಬಿ, 21 ಟ್ರಾಕ್ಟರ್‌ಗಳ ಘರ್ಜನೆ ಮಧ್ಯಾಹ್ನ 12 ಗಂಟೆವರೆಗೆ ಮುಂದುವರಿದಿತ್ತು. ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು, ಚಾಲಕರು ಒತ್ತುವರಿ ತೆರವುಗೊಳಿಸಿದರು. ವೆಂಕಟೇಶ್‌ ನಾಗನೂರ ಹಲವು ಕಡೆ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿ ಸಲಹೆ, ಸೂಚನೆ ನೀಡಿದರು.

ನಗರದ ಎಂ.ಬಿ.ರಸ್ತೆ, ಬಂಗಾರಪೇಟೆ ರಸ್ತೆ, ಕ್ಲಾಕ್‌ ಟವರ್‌ ಸರ್ಕಲ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸುತ್ತಮುತ್ತ, ಬ್ರಾಹ್ಮಣರ ಬೀದಿ, ಕಾಳಮ್ಮ ಗುಡಿ ರಸ್ತೆ, ಬಂಗಾರಪೇಟೆ ವೃತ್ತ, ಟೇಕಲ್‌ ಸರ್ಕಲ್‌ನಿಂದ ಬೈಪಾಸ್‌ ಮೇಲ್ಸೇತುವೆ, ಅಮ್ಮವಾರಿಪೇಟೆ ಸರ್ಕಲ್‌ನಿಂದ ಶ್ರೀನಿವಾಸಪುರ ಟೋಲ್‌ಗೇಟ್‌, ಮೆಕ್ಕೆ ಸರ್ಕಲ್‌, ಶ್ರೀನಿವಾಸಪುರ ಸರ್ಕಲ್‌ನಿಂದ ಚಿಕ್ಕಬಳ್ಳಾಪುರ ರಸ್ತೆ, ರೈಲ್ವೆ ಬ್ರಿಡ್ಜ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಅಮ್ಮವಾರಿಪೇಟೆ ಸರ್ಕಲ್‌, ರಾಘವೇಂದ್ರ ಮಠ ರಸ್ತೆ, ಅರಹಳ್ಳಿ ಗೇಟ್‌ನಿಂದ ಆಜಾದ್‌ನಗರ ಸೇರಿದಂತೆ ವಿವಿಧ ತೆರವು ಕಾರ್ಯಾಚರಣೆ ನಡೆಯಿತು.

ನಗರಸಭೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪಾದಚಾರಿ ಮಾರ್ಗ, ರಸ್ತೆ, ಚರಂಡಿಗಳ ಮೇಲಿನ ಅನಧಿಕೃತ ನಿರ್ಮಾಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದಂತೆ ನಗರಸಭೆ ಪೌರಾಯುಕ್ತರು ಕಾರ್ಯಾಚರಣೆಗಿಳಿದಿದ್ದರು.

ಈ ಸಂಬಂಧ ಸಾರ್ವಜನಿಕ ಪ್ರಕಟಣೆಯನ್ನೂ ಹೊರಡಿಸಿದ್ದರು. ಅಲ್ಲದೇ, ನಗರಸಭೆಯಿಂದ ಆಟೊ, ಸ್ವಚ್ಛತಾ ವಾಹಿನಿಗಳಲ್ಲೂ ಪ್ರಚಾರ ನಡೆಸಲಾಗಿತ್ತು. ಕರಪತ್ರ ವಿತರಿಸಿ ಅನಧಿಕೃತ ನಿರ್ಮಾಣಗಳನ್ನು ಖುದ್ದಾಗಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ನಿಗದಿತ ಏಳು ದಿನಗಳ ಗಡುವು ಮುಗಿದರೂ ಸ್ವಯಂಪ್ರೇರಿತರಾಗಿ ತೆರವುಗೊಳಿಸದ ಕಾರಣ ಅ.15ರಂದು ತೆರವು ಕಾರ್ಯಾಚರಣೆ ನಡೆಸುವುದಾಗಿ ಪ್ರಚಾರ ಮಾಡಿದ್ದರು.

ಎಲ್ಲೆಲ್ಲಿ ತೆರವು ಕಾರ್ಯಾಚರಣೆ?

•ಎಂ.ಜಿ.ರಸ್ತೆ (ಗಾಂಧಿವನದಿಂದ ಅಮ್ಮವಾರಿಪೇಟೆ ಆಂಜನೇಯಸ್ವಾಮಿ ವೃತ್ತ); 1.5 ಕಿ.ಮೀ.

•ಅಮ್ಮವಾರಿಪೇಟೆ ಆಂಜನೇಯಸ್ವಾಮಿ ವೃತ್ತದಿಂದ ಮೆಕ್ಕೆ ಸರ್ಕಲ್‌: 1 ಕಿ.ಮೀ.

•ವಾಲ್ಮೀಕಿ ವೃತ್ತದಿಂದ ಶಾರದಾ ಚಿತ್ರಮಂದಿರ ಪಕ್ಕದ ರಸ್ತೆ; 2.5 ಕಿ.ಮೀ.

•ಶನಿಮಹಾತ್ಮ ದೇವಾಲಯದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ; 2 ಕಿ.ಮೀ.

•ಕ್ಲಾಕ್‌ ಟವರ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ; 1 ಕಿ.ಮೀ.

•ಕ್ಲಾಕ್‌ ಟವರ್‌ನಿಂದ ಬಂಗಾರಪೇಟೆ ವೃತ್ತ; 1.5 ಕಿ.ಮೀ.

•ಟೇಕಲ್‌ ಸರ್ಕಲ್‌ನಿಂದ ಬೈಪಾಸ್‌ ಮೇಲ್ಸೇತುವೆ; 2.5 ಕಿ.ಮೀ.

•ಅಮ್ಮವಾರಿಪೇಟೆ ಸರ್ಕಲ್‌ನಿಂದ ಶ್ರೀನಿವಾಸಪುರ ಟೋಲ್‌ಗೇಟ್‌, ಮೆಕ್ಕೆ ಸರ್ಕಲ್‌; 2 ಕಿ.ಮೀ.

•ಶ್ರೀನಿವಾಸಪುರ ಸರ್ಕಲ್‌ನಿಂದ ಚಿಕ್ಕಬಳ್ಳಾಪುರ ರಸ್ತೆ, ರೈಲ್ವೆ ಬ್ರಿಡ್ಜ್‌; 3 ಕಿ.ಮೀ.

•ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಅಮ್ಮವಾರಿಪೇಟೆ ಸರ್ಕಲ್‌; 1.5 ಕಿ.ಮೀ.

•ಬಂಗಾರಪೇಟೆ ವೃತ್ತದಿಂದ ವಾಲ್ಮೀಕಿ ವೃತ್ತ; 1 ಕಿ.ಮೀ.

•ಸ್ಪೈಸಿ ಫಾರೆಸ್ಟ್‌ ರಸ್ತೆ (ಬ್ರಾಹ್ಮಣರ ಬೀದಿ); 1 ಕಿ.ಮೀ.

•ರಾಘವೇಂದ್ರ ಮಠ ರಸ್ತೆ; 1 ಕಿ.ಮೀ.

•ಅರಹಳ್ಳಿ ಗೇಟ್‌ನಿಂದ ಆಜಾದ್‌ನಗರ; 0.5 ಕಿ.ಮೀ.

•ಒಟ್ಟು 22.5 ಕಿ.ಮೀ ಒತ್ತುವರಿ ತೆರವು

21 ಜೆಸಿಬಿ, 21 ಟ್ರ್ಯಾಕ್ಟರ್‌ ಘರ್ಜನೆ!

ಕೋಲಾರ ನಗರಸಭೆಯಿಂದ ಭಾನುವಾರ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸುಮಾರು 21 ಜೆಸಿಬಿಗಳು, ಸುಮಾರು 21 ಟ್ರ್ಯಾಕ್ಟರ್‌ಗಳು ಘರ್ಜಿಸಿದವು!

ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ ಸೂಚನೆಯಂತೆ ಪೌರಾಯುಕ್ತ ವೆಂಕಟೇಶ್‌ ನಾಗನೂರು, ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ನಗರ ವ್ಯಾಪ್ತಿಯಲ್ಲಿ ಸುಮಾರು 22.5 ಕಿ.ಮೀಗಳಷ್ಟು ರಸ್ತೆ, ಪಾದಚಾರಿ ಮಾರ್ಗ ಹಾಗೂ ಚರಂಡಿ ಮೇಲಿನ ಒತ್ತುವರಿಗಳನ್ನು ಪೊಲೀಸ್ ಸಿಬ್ಬಂದಿ ಸಹಾಯದೊಂದಿಗೆ ತೆರವುಗೊಳಿಸಿದರು.

22.5 ಕಿ.ಮೀ ವ್ಯಾಪ್ತಿ ಒತ್ತುವರಿ ತೆರವು

ಕೋಲಾರ ನಗರದ ವ್ಯಾಪ್ತಿಯಲ್ಲಿ ನಗರಸಭೆಯಿಂದ ಮೂರು ದಿನಗಳಲ್ಲಿ ಸುಮಾರು 22.5 ಕಿ.ಮೀ ಒತ್ತುವರಿ ತೆರವುಗೊಳಿಸಲಾಗಿದೆ. ರಸ್ತೆ, ಚರಂಡಿ, ಪಾದಚಾರಿ ಮಾರ್ಗವನ್ನು ಅಂಗಡಿ ಮಳಿಗೆಯವರು ಒತ್ತುವರಿ ಮಾಡಿಕೊಂಡಿದ್ದರು.

ಅ.15ರಂದು ಎಂ.ಜಿ.ರಸ್ತೆಯ ಗಾಂಧಿವನದಿಂದ ಅಮ್ಮವಾರಿಪೇಟೆ ಆಂಜನೇಯಸ್ವಾಮಿ ವೃತ್ತದವರೆಗೆ 1.5 ಕಿ.ಮೀ. ಒತ್ತುವರಿ ತೆರವುಗೊಳಿಸಲಾಗಿತ್ತು. ಅ.16ರಂದು ಅಮ್ಮವಾರಿಪೇಟೆ ಆಂಜನೇಯಸ್ವಾಮಿ ವೃತ್ತದಿಂದ ಮೆಕ್ಕೆ ಸರ್ಕಲ್‌ವರೆಗೆ 1 ಕಿ.ಮೀ. ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಅ.17ರಂದು ಭಾರಿ ಮಳೆ ಕಾರಣ ಕಾರ್ಯಾಚರಣೆ ನಡೆದಿರಲಿಲ್ಲ. ಅ.18ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸುಮಾರು 20 ಕಿ.ಮೀ ಒತ್ತುವರಿ ತೆರವು ಮಾಡಲಾಗಿದೆ.

ಒತ್ತುವರಿ ಬಗ್ಗೆ ಗಮನಸೆಳೆದಿದ್ದ ‘ಪ್ರಜಾವಾಣಿ’

ಕೋಲಾರ ನಗರದ ವಿವಿಧೆಡೆ ಪಾದಚಾರಿ ಮಾರ್ಗ ಒತ್ತುವರಿ ಆಗಿರುವ ಬಗ್ಗೆ ಜುಲೈನಲ್ಲೇ ‘ಪ್ರಜಾವಾಣಿ ವರದಿ’ ಮೂಲಕ ಗಮನ ಸೆಳೆಯಲಾಗಿತ್ತು. ‘ಪಾದಚಾರಿ ಮಾರ್ಗ ನಾಪತ್ತೆ! ಹುಡುಕಿಕೊಡುವರಾರು?’ ಎಂಬ ವರದಿಯನ್ನು ಫೋಟೊಗಳ ಸಮೇತ ಪ್ರಕಟಿಸಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ಪೌರಾಯುಕ್ತ ವೆಂಕಟೇಶ್‌ ನಾಗನೂರ, ಒತ್ತುವರಿ ತೆರವುಗೊಳಿಸುವ ಮುನ್ನ ತಿಳವಳಿಕೆ ನೋಟಿಸ್‌ ನೀಡಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದ್ದರು. ಅದರಂತೆ ಈಗ ಬೃಹತ್‌ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ