ವೇಮಗಲ್ | ಮಣ್ಣುಪಾಲಾಗುತ್ತಿರುವ ಐತಿಹಾಸಿಕ ಕುರುಹು: ಸಂರಕ್ಷಣೆಗೆ ಹೆಚ್ಚಿದ ಕೂಗು

ವೇಮಗಲ್ | ಮಣ್ಣುಪಾಲಾಗುತ್ತಿರುವ ಐತಿಹಾಸಿಕ ಕುರುಹು: ಸಂರಕ್ಷಣೆಗೆ ಹೆಚ್ಚಿದ ಕೂಗು

ವೇಮಗಲ್ | ಮಣ್ಣುಪಾಲಾಗುತ್ತಿರುವ ಐತಿಹಾಸಿಕ ಕುರುಹು: ಸಂರಕ್ಷಣೆಗೆ ಹೆಚ್ಚಿದ ಕೂಗು

ವೇಮಗಲ್: ಕೈಗಾರಿಕಾ ಕೇಂದ್ರವಾಗಿ ಗುರುತಿಸಿಕೊಂಡಿರುವ ಪಟ್ಟಣವು ಶತಶತಮಾನಗಳ ಇತಿಹಾಸ, ಸಾಂಸ್ಕೃತಿಕ ಗತವೈಭವವನ್ನು ತನ್ನೊಡಲಲ್ಲಿಟ್ಟುಕೊಂಡಿದೆ. ಪೂರ್ವಜರ ತ್ಯಾಗ, ಶೌರ್ಯ, ಜನಪದ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗಿ ನಿಂತಿದ್ದ ಅಪರೂಪದ ವೀರಗಲ್ಲು, ಶಾಸನ ಇದೀಗ ಸೂಕ್ತ ರಕ್ಷಣೆ, ನಿರ್ವಹಣೆಯಿಲ್ಲದೆ ಮಣ್ಣು ಪಾಲಾಗುತ್ತಿರುವುದು ಇತಿಹಾಸ ಪ್ರೇಮಿಗಳಲ್ಲಿ ಕಳವಳವನ್ನುಂಟು ಮಾಡಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ತಾಳೆ ಕೆರೆಯ ಏರಿ ಭಾಗದಲ್ಲಿ ಗಂಗರು, ಚೋಳರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಘಟ್ಟದ ಮಹತ್ವದ ಕುರುಹುಗಳಿವೆ.

ಬಿ.ಎಲ್.ರೈಸ್ ಅವರ ‘ಎಪಿಗ್ರಾಫಿಯಾ ಕರ್ನಾಟಿಕ’ ದಾಖಲೆಯಂತೆ, ಕ್ರಿಸ್ತಶಕ 1369ರಲ್ಲಿ ವಿಜಯನಗರದ ವೀರ ಬುಕ್ಕಣ್ಣರಾಯ ಆಳ್ವಿಕೆ ಅವಧಿಯ ಶಾಸನವೊಂದು ಇಲ್ಲಿದೆ. ನಾಡಿನ ಪ್ರಮುಖರು ಸೇರಿ ಕೆರೆ ನಿರ್ಮಾಣ ಹಾಗೂ ಕೃಷಿ-ನೀರಾವರಿಗೆ ಕೊಡುಗೆಗಳನ್ನು ನೀಡಿದ ವಿವರವನ್ನು ಹೊಂದಿರುವ ಈ ಶಾಸನದಲ್ಲಿ, ಈ ಊರನ್ನು ‘ವೇಮಮಂಗಲ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇಂದಿನ ವೇಮಗಲ್ ಪಟ್ಟಣದ ಮೂಲ ಹೆಸರು ಮತ್ತು ಪ್ರಾಚೀನತೆಯ ಅಸ್ತಿತ್ವಕ್ಕೆ ಏಕೈಕ ಲಿಖಿತ ಆಧಾರವಾಗಿರುವ ಈ ಮಹತ್ವದ ಶಾಸನ ಹಾಗೂ ವೀರಗಲ್ಲುಗಳು ಇಂದು ಕೆರೆಯ ಏರಿಯ ಮೇಲೆ ಮಣ್ಣಿನಲ್ಲಿ ಹೂತುಹೋಗುತ್ತಿವೆ.

ಪಟ್ಟಣದ ಅಗಸರ ಕುಂಟೆಯ ನೆಲಹಾಸು ಬಂಡೆಯ ಮೇಲೆ ಕೆತ್ತಲಾದ ಮತ್ತೊಂದು ಶಾಸನವು ಬಹುಪಾಲು ಅಳಿಸಿಹೋಗುವ ಹಂತ ತಲುಪಿದೆ.

ಕೆರೆಯ ಏರಿ ಹಾಗೂ ಬಯಲು ಪ್ರದೇಶದಲ್ಲಿರುವ ವೀರಗಲ್ಲುಗಳ ಮೇಲೆ ಸುಣ್ಣ-ಬಣ್ಣಗಳನ್ನು ಬಳಿದಿರುವುದರಿಂದ ಮೂಲ ಲಿಪಿ ಮತ್ತು ಶಿಲ್ಪದ ಸ್ಪಷ್ಟತೆ ಮರೆಯಾಗುತ್ತಿದೆ. ಪ್ರಾಚೀನ ಕಲ್ಲಿನ ಮಂಟಪಗಳಲ್ಲಿ ಗಿಡಗಂಟಿ, ಕಸಕಡ್ಡಿ, ಮಣ್ಣು ತುಂಬಿಕೊಂಡು ಅವ್ಯವಸ್ಥೆಯ ಆಗರವಾಗಿದೆ. ಊರಿನ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರರ ಸ್ಮಾರಕ ನೆಲಸಮವಾಗುತ್ತಿದ್ದು, ಅವುಗಳನ್ನು ಕೇವಲ ಕಲ್ಲುಗಳೆಂದು ಭಾವಿಸದೆ ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾದ ತುರ್ತು ಅಗತ್ಯವಿದೆ.

ವೇಗವಾಗಿ ನಗರೀಕರಣ ಮತ್ತು ಕೈಗಾರಿಕೀಕರಣಗೊಳ್ಳುತ್ತಿರುವ ವೇಮಗಲ್‌ನ ಮೂಲ ಬೇರುಗಳನ್ನು ಕಾಪಾಡಿಕೊಳ್ಳಲು ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಆಡಳಿತ ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಈ ಭವ್ಯ ಇತಿಹಾಸ ಶಾಶ್ವತವಾಗಿ ಕಣ್ಮರೆಯಾಗಲಿದೆ ಎಂಬ ಆತಂಕ ಸ್ಥಳೀಯರದ್ದಾಗಿದೆ.

‘ಯಾವುದೇ ಒಂದು ಊರಿನ ಜೀವಂತಿಕೆಗೆ ಆಧುನಿಕತೆಯ ಪ್ರಗತಿ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಅದರ ಸಾಂಸ್ಕೃತಿಕ ಅಸ್ಮಿತೆಯೂ ಉಳಿಯಬೇಕಾಗುತ್ತದೆ. ವೇಮಗಲ್ ಕೇವಲ ಇಂದಿನ ಕೈಗಾರಿಕಾ ಪಟ್ಟಣ ಮಾತ್ರವಲ್ಲ, ನೂರಾರು ವರ್ಷದ ಹಿಂದೆಯೇ ಸುಸ್ಥಿರ ಕೃಷಿ ಸಂಸ್ಕೃತಿ ಮತ್ತು ಸ್ವಾವಲಂಬಿ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದ ಐತಿಹಾಸಿಕ ತಾಣ. ಶಾಸನಗಳು ಮತ್ತು ವೀರಗಲ್ಲುಗಳು ತ್ಯಾಗದ ಪ್ರತೀಕಗಳಾಗಿವೆ. ಇವುಗಳನ್ನು ಕಡೆಗಣಿಸುವುದೆಂದರೆ ನಮ್ಮ ಬೇರುಗಳನ್ನು ನಾವೇ ಕತ್ತರಿಸಿಕೊಂಡಂತೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಈ ಕುರುಹುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ತುರ್ತಾಗಿ ಆಗಬೇಕಿದೆ.’

ಪ್ರೊ.ಜಿಯಾ ಉಲ್ಲಾ, ಇತಿಹಾಸ ಅಧ್ಯಯನಕಾರರು, ಬಸವಶ್ರೀ ಕಾಲೇಜು, ಕೋಲಾರ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ