ಸಿದ್ದಾಪುರ: ಪಹಣಿ ಇಲ್ಲದ ಜಾಗದಲ್ಲಿ ನಿರ್ಮಿಸಿರುವ ಮನೆಗಳ ಕರ ಪಡೆಯಬಾರದು; ಬಿಜೆಪಿ

ಸಿದ್ದಾಪುರ: ಪಹಣಿ ಇಲ್ಲದ ಜಾಗದಲ್ಲಿ ನಿರ್ಮಿಸಿರುವ ಮನೆಗಳ ಕರ ಪಡೆಯಬಾರದು; ಬಿಜೆಪಿ

ಸಿದ್ದಾಪುರ: ಪಹಣಿ ಇಲ್ಲದ ಜಾಗದಲ್ಲಿ ನಿರ್ಮಿಸಿರುವ ಮನೆಗಳ ಕರ ಪಡೆಯಬಾರದು; ಬಿಜೆಪಿ

ಸಿದ್ದಾಪುರ: ಪಹಣಿ ಇಲ್ಲದ ಜಾಗದಲ್ಲಿ ನಿರ್ಮಿಸಿರುವ ಮನೆಗಳ ಕರ ಪಡೆಯಬಾರದು ಎಂಬ ಆದೇಶ ವಿಧಾನಸಭೆಯಲ್ಲಿ ಮಂಡನೆಯಾದಾಗ ನಮ್ಮ ಶಾಸಕರು ಏನು ಮಾಡುತ್ತಿದ್ದರು? ಬಡವರ ಕುರಿತು ಕಾಳಜಿ ಇದ್ದರೆ ಆದೇಶ ಹೊರಡಿಸುವ ಮೊದಲೇ ಸದನದಲ್ಲಿ ವಿರೋಧ ವ್ಯಕ್ತಪಡಿಸಬೇಕಿತ್ತು ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪಹಣಿ ಇಲ್ಲದ ಜಾಗವನ್ನು ಹೊರತುಪಡಿಸಿ ಉಳಿದ ಮನೆಗಳ ಕರ ಪಡೆಯಬಾರದು ಎಂಬ ಆದೇಶವನ್ನು ವಿರೋಧಿಸಿ, ಸ್ಥಳೀಯ ಶಾಸಕರ ವೈಫಲ್ಯ ಖಂಡಿಸಿ ಬುಧವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಸಿದ್ದಾಪುರವನ್ನೂ ಬರಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಗಟ್ಟಿ ಧ್ವನಿಯಲ್ಲಿ ಆಗ್ರಹಿಸಲು ಶಾಸಕರಿಗೆ ಆಗುತ್ತಿಲ್ಲ. ಈ ಮೂರೂವರೆ ವರ್ಷಗಳಲ್ಲಿ ತಾಲ್ಲೂಕಿಗೆ ಏನು ಮಾಡಿದ್ದಾರೆ? ಇದೇ ರೀತಿ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ’ ಎಂದರು.

ಜೆಡಿಎಸ್ ಮುಖಂಡ ಉಪೇಂದ್ರ ಪೈ ಮಾತನಾಡಿ, ‘ಭ್ರಷ್ಟ ಸರ್ಕಾರದ ನಿಷ್ಕ್ರಿಯ ಶಾಸಕರ ಕುರಿತು ಮಾತನಾಡುವುದೇ ವ್ಯರ್ಥ. ದಿವಾಳಿ ಸರ್ಕಾರದ ಕುಬೇರ ಮುಖ್ಯಮಂತ್ರಿಗಳಿಗೂ ಬಡವರ ಕೂಗು ಕೇಳುತ್ತಿಲ್ಲ. ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಮನೆಗಳ ನಂಬರ್ ರದ್ದಾದರೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಬಡ ಜನರ ಬದುಕಿನೊಂದಿಗೆ ರಾಜಕೀಯ ಮಾಡುವುದು ಸರಿಯಲ್ಲ’ ಎಂದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ‘ಚುನಾವಣೆ ಸಮಯದಲ್ಲಿ ಮತದಾರರು ದೇವರಾಗಿರುತ್ತಾರೆ. ಚುನಾವಣೆ ಮುಗಿದ ಬಳಿಕ ಅದೇ ಮತದಾರರು ಅತಿಕ್ರಮಣದಾರರಾಗುತ್ತಾರೆ. ಬಡವರಿಗೆ ಸರ್ಕಾರದಿಂದ ಯಾವುದೇ ಮನೆ ಮಂಜೂರಾಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ನಾನು ಕೊತ್ವಾಲ್ ಶಿಷ್ಯ’ ಎಂದು ಹೇಳಿಕೊಂಡಿದ್ದಾರೆ. ಜನರನ್ನು ಹೆದರಿಸಿ ಸರ್ಕಾರದ ನಡೆಯ ಕುರಿತು ಮಾತನಾಡದಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನಿಕಟಪೂರ್ವ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎ.ಜಿ. ನಾಯ್ಕ, ಮಂಜುನಾಥ ಭಟ್ಟ, ಕೃಷ್ಣಮೂರ್ತಿ ಐಸೂರು, ಸುರೇಶ ಬಾಲಿಕೊಪ್ಪ ಮುಂತಾದವರು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ