ಸಂಸದ, ಶಾಸಕಿ ವಿರುದ್ಧ ಪ್ರತಿಭಟನೆಗೆ ಸೇವ್‌ ಕೆಜಿಎಫ್‌ ಸಮಿತಿ ನಿರ್ಧಾರ

ಸಂಸದ, ಶಾಸಕಿ ವಿರುದ್ಧ ಪ್ರತಿಭಟನೆಗೆ ಸೇವ್‌ ಕೆಜಿಎಫ್‌ ಸಮಿತಿ ನಿರ್ಧಾರ

ಸಂಸದ, ಶಾಸಕಿ ವಿರುದ್ಧ ಪ್ರತಿಭಟನೆಗೆ ಸೇವ್‌ ಕೆಜಿಎಫ್‌ ಸಮಿತಿ ನಿರ್ಧಾರ

ಕೆಜಿಎಫ್‌: ಬಿಜಿಎಂಎಲ್‌ ಕಾರ್ಮಿಕರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿರುವ ಸಂಸದ, ಶಾಸಕಿ ವಿರುದ್ಧ ಸೇವ್‌ ಕೆಜಿಎಫ್‌ ಯುನೈಟೆಡ್‌ ಫ್ರಂಟ್‌ ವತಿಯಿಂದ ಶೀಘ್ರದಲ್ಲಿಯೇ ರಾಬರ್ಟಸನ್ ಪೇಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಸೇವ್‌ ಕೆಜಿಎಫ್‌ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಬೆಮಲ್‌ ನಗರದಲ್ಲಿ ಶುಕ್ರವಾರ ನಡೆದ ಸಮಿತಿಯ ಪದಾಧಿಕಾರಿಗಳು ಮತ್ತು ಬಿಜಿಎಂಎಲ್‌ ಕಾರ್ಮಿಕರ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಜ್ಯೋತಿಬಸು, ‘ಊರಿಗಾಂನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಅಂಗವಾಗಿ ಇಪ್ಪತ್ತೊಂದು ಮನೆಗಳನ್ನು ಅಕ್ರಮವಾಗಿ ತೆರವು ಮಾಡಲಾಗಿದೆ. ಅಧಿಕಾರಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಬಿಜಿಎಂಎಲ್‌ ಕಾಲೊನಿಗಳಲ್ಲಿ ವಾಸ ಮಾಡುತ್ತಿರುವವರು ಬೇರೆ ದೇಶದಿಂದ ಬಂದವರಲ್ಲ. ಅವರೆಲ್ಲರೂ ನೂರಾರು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದಾರೆ. ಅವರ ಕುಟುಂಬಕ್ಕೆ ಸೇರಿದ ಸುಮಾರು ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಚಿನ್ನ ತೆಗೆಯಲು ಗಣಿಯೊಳಗೆ ಇಳಿದು ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಕುಟುಂಬದ ಸದಸ್ಯರ ಮನೆಗಳನ್ನು ಅಮಾನವೀಯವಾಗಿ ತೆರವು ಮಾಡಲಾಗಿದೆ. ಸಂಸದರು ಈ ತೆರವು ಕಾರ್ಯ ಮತ್ತು ಅದಕ್ಕೆ ಬದಲಿ ಪರಿಹಾರಕ್ಕೆ ಒಲವು ತೋರಿಲ್ಲ. ಶಾಸಕಿ ₹25ಸಾವಿರ ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದರು.

‘ಗಣಿಯ ಸೈನೈಡ್‌ ದಿಬ್ಬವನ್ನು ಮರುಸಂಸ್ಕರಣೆ ಮಾಡಿ ಚಿನ್ನ ತೆಗೆಯುವ ಟೆಂಡರ್‌ಗೆ ಸಿದ್ಧತೆ ನಡೆಯುತ್ತಿದೆ. ಕಂಪನಿ ಆಸ್ಪತ್ರೆ ಸೇರಿದಂತೆ ಗಣಿಯ ಆಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಕೂಡ ಚಾಲನೆ ದೊರೆತಿದೆ. ಇಂತಹ ಸಂದರ್ಭದಲ್ಲಿ ಮೈನಿಂಗ್‌ ಕಾಲೊನಿಗಳಲ್ಲಿರುವ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಊರಿಗಾಂ ರೀತಿಯಲ್ಲಿಯೇ ತಮ್ಮನ್ನು ಪರಿಗಣಿಸಿದರೆ ಹೇಗೆ ಎಂಬ ಭೀತಿಯಲ್ಲಿದ್ದಾರೆ. ಹೈಕೋರ್ಟ್‌ ಗಣಿ ಕಾಲೊನಿಗಳ ಮನೆಗಳ ಸಂಬಂಧವಾಗಿ ಸ್ಪಷ್ಟವಾಗಿ ತೀರ್ಪು ನೀಡಿದೆ. ಎಸ್‌ಟಿಬಿಪಿಯಲ್ಲಿ (ವಿಶೇಷ ನಿವೃತ್ತಿ ಯೋಜನೆ) ನಿವೃತ್ತಿ ತೆಗೆದುಕೊಂಡ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಮನೆ ಕೊಡಲಾಗುತ್ತಿದೆ. ಅದರ ಜೊತೆಗೆ ಅಗತ್ಯತೆ ಇರುವ ಕಾರ್ಮಿಕರಿಗೆ ಅಗತ್ಯ ಇದ್ದರೆ ಮನೆಗಳನ್ನು ಕೊಡಬಹುದು ಎಂಬ ಅಂಶವನ್ನು ಕೂಡ ತೀರ್ಪಿನಲ್ಲಿ ತಿಳಿಸಿದೆ. ಈ ಬಗ್ಗೆ ಸಂಸದರಾಗಲಿ, ಶಾಸಕಿಯಾಗಲಿ ಇದುವರೆವಿಗೂ ಮಾತನಾಡಿಲ್ಲ. ಅವರಿಗೆ ಗಣಿ ಪ್ರದೇಶದ ಜನರ ವೋಟ್‌ ಬೇಕೇ ವಿನಹ ಅವರ ಅಭಿವೃದ್ಧಿ ಬೇಕಾಗಿಲ್ಲ’ ಎಂದು ಆರೋಪಿಸಿದರು.

ಹಟ್ಟಿ ಚಿನ್ನದ ಗಣಿ ಮಾದರಿಯಲ್ಲಿಯೇ ಬಿಜಿಎಂಎಲ್‌ ಚಿನ್ನದ ಗಣಿಯನ್ನು ಪುನರಾರಂಭ ಮಾಡಬೇಕು. ಬಿಜಿಎಂಎಲ್‌ ವಿಷಯವಾಗಿ ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರ ಇನ್ನೂ ಊರ್ಜಿತವಾಗಿಯೇ ಇದೆ. ಗಣಿ ಕಾಲೊನಿಗಳ ಮನೆಗಳನ್ನು ವಾಸ ಮಾಡುತ್ತಿರುವವರಿಗೆ ನೀಡಬೇಕು ಎಂಬುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಒಂದು ಲಕ್ಷ ಸಹಿಯುಳ್ಳ ಮನವಿಯನ್ನು ಪ್ರತಿಭಟನೆ ದಿನದಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜ್ಯೋತಿಬಸು ಹೇಳಿದರು.

ಮುಖಂಡರಾದ ಪ್ರತಾಪ್‌, ಕರುಣಾಮೂರ್ತಿ, ಜಯಶೀಲನ್‌, ಇರುದಯರಾಜ್‌, ವಿಕ್ರಂ, ಪೊನ್‌ ಚಂದ್ರಶೇಖರ್‌, ದಕ್ಷಿಣಾಮೂರ್ತಿ, ಶ್ರೀಕುಮಾರ್‌, ಅರಿವಳಗನ್‌, ದಾಡಿ ಅನ್ಬಳಗನ್‌, ತಿರುಮುರುಗನ್‌, ಕಮಲ್‌ ಮುನಿಸ್ವಾಮಿ ಹಾಜರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ