
ಮದ್ದೇರಿ ಬೆಟ್ಟಗಳಲ್ಲಿ 2.5 ಲಕ್ಷ ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ
ವೇಮಗಲ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಹೋಬಳಿಯ ಐತಿಹಾಸಿಕ ಮದ್ದೇರಿ ಬೆಟ್ಟಗಳಲ್ಲಿ ಬೃಹತ್ ಹಸಿರೀಕರಣ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಸುಮಾರು 300 ಎಕರೆ ವಿಸ್ತೀರ್ಣವುಳ್ಳ ಬೆಟ್ಟದ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಸ್ವಯಂಸೇವಕರು ಐದು ತಂಡಗಳಾಗಿ ವಿಂಗಡಣೆಗೊಂಡು ಒಟ್ಟು 2.5 ಲಕ್ಷ ವಿವಿಧ ಜಾತಿಯ ಬೀಜಗಳನ್ನು ಬಿತ್ತುವ ಮೂಲಕ ಪರಿಸರ ಜಾಗೃತಿಗೆ ನಾಂದಿ ಹಾಡಿದರು.
‘ಮದ್ದೇರಿ ವೈದ್ಯಕೀಯ ಮಹತ್ವ ಹೊಂದಿದೆ. ಪೂರ್ವಜರು ಸ್ಥಳೀಯವಾಗಿ ಲಭ್ಯವಿದ್ದ ಗಿಡಮೂಲಿಕೆಗಳು ಮತ್ತು ಪರಂಪರಾಗತ ಜ್ಞಾನದಿಂದ ರೋಗಿಗಳಿಗೆ ನಾಟಿ ವೈದ್ಯ ಪದ್ಧತಿಯಲ್ಲಿ ಮದ್ದು ನೀಡುತ್ತಿದ್ದ ಕಾರಣದಿಂದ ಈ ಊರಿಗೆ ‘ಮದ್ದೇರಿ’ ಎಂಬ ಹೆಸರು ಬಂದಿದೆ’ ಎಂದು ಆಧ್ಯಾತ್ಮಿಕ ಚಿಂತಕ ರಾಮಚಂದ್ರ ಗುರೂಜಿ ತಿಳಿಸಿದರು.
‘ಜಗತ್ತಿನಲ್ಲಿ ನೀವು ಕಾಣಲು ಬಯಸುವ ಬದಲಾವಣೆಯು ನೀವೇ ಆಗಿರಿ’ ಎಂಬ ಗಾಂಧೀಜಿಯ ಸಂದೇಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಷೇರು ಮಾರುಕಟ್ಟೆ ವಿಶ್ಲೇಷಕ ರುದ್ರಮೂರ್ತಿ ಮಾತನಾಡಿದರು.
ವಿಜೆ ಗ್ರೂಪ್ ಅಧ್ಯಕ್ಷ ವಿಶ್ವಜಿತ್, ಚಲನಚಿತ್ರ ನಟಿ ಶೋಭಿತಾ, ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್, ವಕೀಲ ಜಯರಾಮ್, ಮದ್ದೇರಿ ಸೊಸೈಟಿ ಮಾಜಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸಗೌಡ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಐ.ಮಂಜುನಾಥ್, ಯುವ ಮುಖಂಡ ಕೋಟೆ ಮುರಳಿಗೌಡ, ರತ್ನಾ ಬಡಿಗೇರ್, ಪ್ರಕಾಶ್ ಹೆಬ್ಬಾರ್, ಅನಂತ್‌ನಾಗ್, ಮಂಜುನಾಥ್ ಜಗಳೂರು ಹಾಜರಿದ್ದರು.