ಆಧುನಿಕ ಸಮಾಜಕ್ಕೆ ಗಾಂಧಿ ಚಿಂತನೆ ಅಗತ್ಯ: ಎಸ್.ಎಸ್. ಪಾಟೀಲ

ಆಧುನಿಕ ಸಮಾಜಕ್ಕೆ ಗಾಂಧಿ ಚಿಂತನೆ ಅಗತ್ಯ: ಎಸ್.ಎಸ್. ಪಾಟೀಲ

ಆಧುನಿಕ ಸಮಾಜಕ್ಕೆ ಗಾಂಧಿ ಚಿಂತನೆ ಅಗತ್ಯ: ಎಸ್.ಎಸ್. ಪಾಟೀಲ

ಗದಗ: ‘ಪರಿಸರ ಸಂರಕ್ಷಣೆ, ಅಸ್ಪೃಶ್ಯತೆ ನಿರ್ಮೂಲನೆ, ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣ, ರಾಜಕೀಯದಲ್ಲಿ ಮೌಲ್ಯಗಳ ಪಾಲನೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆಯಂತಹ ಮಹಾತ್ಮ ಗಾಂಧಿ ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ’ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಇಲ್ಲಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘20ನೇ ಶತಮಾನದಲ್ಲಿ ಬಸವಣ್ಣನವರ ತತ್ವಗಳನ್ನು ಆಚರಣೆಗೆ ತಂದ ಪ್ರಮುಖ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧಿ ಸಹ ಒಬ್ಬರು. ಅವರ ಮೌಲ್ಯಗಳು ಮತ್ತು ವಿಚಾರಗಳನ್ನು ಇಂದಿನ ಸಮಾಜ ಕಡೆಗಣಿಸುವ ಮೂಲಕ ವೈಚಾರಿಕವಾಗಿ ಅವರನ್ನು ಹತ್ಯೆ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗಾಂಧಿ ಅವರ ಗ್ರಾಮ ಸ್ವರಾಜ್ಯದ ತತ್ವವನ್ನು ಆಧಾರವಾಗಿಟ್ಟುಕೊಂಡು ವಿಶ್ವವಿದ್ಯಾಲಯ ಮುನ್ನಡೆಯುತ್ತಿರುವುದು ಶ್ಲಾಘನೀಯ. ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಗೆ ವಿಶ್ವವಿದ್ಯಾಲಯವು ಪ್ರಮುಖ ಜ್ಞಾನಕೇಂದ್ರವಾಗಬೇಕು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತರಬೇತಿ ನೀಡುವ ಪ್ರಮುಖ ಕೇಂದ್ರವಾಗಿ ವಿಶ್ವವಿದ್ಯಾಲಯ ರೂಪುಗೊಳ್ಳಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಮಾತನಾಡಿ, ‘ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ, ದೇಶಸೇವೆ ಹಾಗೂ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ಹಾಗೂ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಯುವಜನರನ್ನು ರೂಪಿಸುವುದು ವಿಶ್ವವಿದ್ಯಾಲಯದ ಪ್ರಮುಖ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಸಬರಮತಿ ಆಶ್ರಮದ ಸಂಚಾಲಕ ಪ್ರಕಾಶ್ ಎಸ್. ಮಾಚೇನಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಗಾಂಧೀಜಿ ಮತ್ತು ಶಾಸ್ತ್ರಿ ಅವರ ಸರಳ ಜೀವನ, ಪ್ರಾಮಾಣಿಕತೆ ಹಾಗೂ ದೇಶದ ಮೇಲಿನ ಬದ್ಧತೆಯನ್ನು ಸ್ಮರಿಸಿ, ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಮುಂದುವರಿಸಬೇಕು ಪ್ರಶಾಂತ್ ಜೆ.ಸಿ., ಹಣಕಾಸು ಅಧಿಕಾರಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ