
ದೊಡ್ಡಬಳ್ಳಾಪುರ: ತೋಟದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು
ದೊಡ್ಡಬಳ್ಳಾಪುರ: ತಾಲ್ಲೂಕಿನ ಮಲ್ಲೋಹಳ್ಳಿ ನಿವಾಸಿ ನಾರಾಯಣ ಗೌಡ (35) ಸೋಮವಾರ ರಾತ್ರಿ ತೋಟದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನಾರಾಯಣ ಅವರು ಮಾರಸಂದ್ರದಲ್ಲಿ ಬೇಕರಿ ನಡೆಸುತ್ತಿದ್ದರು. ಪ್ರತಿನಿತ್ಯ ಮಲ್ಲೋಹಳ್ಳಿ ಕಾಲೊನಿ ಬಳಿಯ ತಮ್ಮ ತೋಟ ನೋಡಲು ತೆರಳುತ್ತಿದ್ದರು. ಸೋಮವಾರ ರಾತ್ರಿ ಬದುವಿನಲ್ಲಿ ತೆರಳುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕುಟುಂಬಸ್ಥರು ರಾತ್ರಿ 10.30ರ ವೇಳೆಗೆ ತೋಟಕ್ಕೆ ಹುಡುಕಿಕೊಂಡು ಬಂದಾಗ ಮೃತಪಟ್ಟಿರುವುದು ಗೊತ್ತಾಗಿದೆ.
ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.