
ಕಾಂಗ್ರೆಸ್–ಕಾಕ್ರೋಚ್ ನಡುವೆ ಸಂಘರ್ಷ? ಕ್ರೆಡಿಟ್‌ಗಾಗಿ ನಾಯಕರ ನಡುವೆ ಕೆಸರೆರಚಾಟ
ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳನ್ನು ಒಂದೇ ವೇದಿಕೆಗೆ ತರಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಯತ್ತಿಸುತ್ತಿರುವ ನಡುವೆಯೇ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಅಸ್ಸಾಂನಲ್ಲಿ ಸಿಜೆಪಿ ನಡೆಸಿದ್ದ ಶಾಲೆಗಳ ಸುಧಾರಣೆ ಅಭಿಯಾನದ ವೇಳೆ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಬಟಾಬಯಲಾಗಿದೆ. ದೆಹಲಿಯಲ್ಲಿ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಪ್ರತಿಭಟನೆ ಸಮಯದಿಂದಲೂ ಸಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್‌ಗಾಗಿ ಸಂಘರ್ಷ ನಡೆಯುತ್ತಿತ್ತು. ಅಸ್ಸಾಂ ಶಾಲಾ ಅಭಿಯಾನದಲ್ಲಿ ಸಿಜೆಪಿಗೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲ. ಇದು ಸಿಜೆಪಿ ಅಸಮಾಧಾನಕ್ಕೆ ಮತ್ತಷ್ಟು ಕಾರಣವಾಯಿತು. ಇದೀಗ ರಾಹುಲ್ ಗಾಂಧಿ 'ಸತ್ಯಾಗ್ರಹ' ಡಿಜಿಟಲ್ ವೇದಿಕೆ ರೂಪಿಸಿರುವುದು ರಾಜಕೀಯವಾಗಿ ಕ್ರೆಡಿಟ್ ತೆಗೆದುಕೊಳ್ಳುವ ಯತ್ನ ಎಂದು ಸಿಜೆಪಿ ಆರೋಪಿಸಿದೆ.
ನಾಲ್ಕು ದಿನಗಳ ಹಿಂದೆ 'ಸತ್ಯಾಗ್ರಹ' ಡಿಜಿಟಲ್ ವೇದಿಕೆಗೆ ಚಾಲನೆ ನೀಡಿದ್ದ ರಾಹುಲ್ ಗಾಂಧಿ, ‘ಬಿಡಿಬಿಡಿಯಾಗಿ ನಡೆಯುತ್ತಿರುವ ಹೋರಾಟಗಳು ಒಂದಾಗಬೇಕಿದೆ. ಸಂಸತ್ತಿನಲ್ಲಿ, ರಸ್ತೆಯಲ್ಲಿ ಅಥವಾ ನನಗೆಲ್ಲಿ ಸಾಧ್ಯವೋ ಅಲ್ಲೆಲ್ಲ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ‘ ಎಂದು ಭರವಸೆ ನೀಡಿದ್ದರು.
ಇದರ ಬೆನ್ನಲ್ಲೇ ‘ಸ್ವಯಂಘೋಷಿತ ಉದಾರವಾದಿ ವ್ಯವಸ್ಥೆ‘ಯು ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಅವರನ್ನು ಕುಗ್ಗಿಸಲು ಯತ್ನಿಸುತ್ತಿದೆ. ತಾವೇ ಪ್ರಜಾಪ್ರಭುತ್ವ ಮತ್ತು ಸಂವಿಧಾನದ 'ಗುತ್ತಿಗೆದಾರರು' ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಸಿಜೆಪಿ ನಾಯಕರಾದ ಅಶುತೋಷ್ ರಾಂಕಾ ಹಾಗೂ ಸೌರವ್ ದಾಸ್ ಹರಿದಾಯ್ದಿದ್ದಾರೆ.
ಬಿಜೆಪಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಮತ್ತು ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ತೀವ್ರ ವಾಗ್ದಾಳಿ ನಡೆಸುತ್ತಿವೆ. ಇದರ ಕ್ರೆಡಿಟ್ ಹಾಗೂ ನಾಯಕತ್ವ ಯಾರಿಗೆ ಸಿಗಬೇಕು ಎಂಬುದರ ಕುರಿತು ಈಗ ಸಂಘರ್ಷ ಏರ್ಪಟ್ಟಿದೆ.
ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ, ಶಿಕ್ಷಣ, ಪರೀಕ್ಷೆ, ಭೂಮಿ, ರೈತರ ಹಕ್ಕುಗಳು, ಮಹಿಳಾ ಹಕ್ಕುಗಳು ಹಾಗೂ ದಲಿತರು-ಒಬಿಸಿಗಳ ಸಮಸ್ಯೆಗಳಿಗಾಗಿ ಹೋರಾಡುತ್ತಿರುವವರನ್ನು ಒಗ್ಗೂಡಿಸಲು ರಾಹುಲ್ 'ಸತ್ಯಾಗ್ರಹ' ಡಿಜಿಟಲ್ ವೇದಿಕೆ ಆರಂಭಿಸಿದರು. ನಿನ್ನೆ ಸಂಜೆಯ ವೇಳೆಗೆ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಂದ 28,981 ಜನರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಶಿಕ್ಷಣ ವ್ಯವಸ್ಥೆ ಕುರಿತು 5,257 ಹಾಗೂ ಭ್ರಷ್ಟಾಚಾರದ ವಿರುದ್ಧ 5,138 ದೂರುಗಳು ದಾಖಲಾಗಿವೆ.
ಇನ್ನೊಂದೆಡೆ, ಜಂತರ್ ಮಂತರ್ ಪ್ರತಿಭಟನೆಯಲ್ಲಿ ಯಶಸ್ಸು ಕಂಡಿದ್ದ ಸಿಜೆಪಿ, ಇದು ರಾಜಕೀಯ ಪಕ್ಷಗಳಿಂದ ಮುಕ್ತವಾದ ವಿಕೇಂದ್ರೀಕೃತ ಚಳವಳಿ ಎಂದು ಪ್ರತಿಪಾದಿಸಿತ್ತು. ಜಂತರ್ ಮಂತರ್ ಯಶಸ್ಸಿನ ಹಿಂದೆ ಕಾಂಗ್ರೆಸ್ ಪಾತ್ರವೂ ಇದೆ ಎಂದು ಹೇಳಿರುವ ಕಾಂಗ್ರೆಸ್, ಸಿಜೆಪಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿತ್ತು. ಹಾಗೂ ಸಿಜೆಪಿ ಹಿಂದೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಬೆಂಬಲವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೇ ತಿಂಗಳಲ್ಲಿ ಸಿಜೆಪಿಯ 'ಕಾಕ್ರೋಚ್' ಅಭಿಯಾನ ವೈರಲ್ ಆಗುತ್ತಿದ್ದಂತೆ, ಭಾರತೀಯ ಯೂತ್ ಕಾಂಗ್ರೆಸ್ 'ಇಂಡಿಯನ್ ಯೂತ್ ಕಾಕ್ರೋಚಸ್' ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಿ, ‘ನಾವೇ ನಿಜವಾದ ಕಾಕ್ರೋಚ್‌ಗಳು‘ ಎಂದು ಬಿಂಬಿಸಿಕೊಳ್ಳಲು ಯತ್ನಿಸಿತ್ತು. ಇದು ಸಿಜೆಪಿಯ ಜನಪ್ರಿಯತೆ ಕಸಿಯುವ ಯತ್ನ ಎಂಬ ಚರ್ಚೆಯನ್ನೂ ಹುಟ್ಟುಹಾಕಿತ್ತು.
ಸ್ವಯಂಘೋಷಿತ ಉದಾರವಾದಿಗಳು ಎಂದ ಸಿಜೆಪಿ
‘ಅಭೀಜಿತ್ ದಿಪ್ಕೆ ಬಹುದಿನಗಳ ನಂತರ ಲಕ್ಷಾಂತರ ಭಾರತೀಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಸಹಿಸದ ಸ್ವಯಂಘೋಷಿತ ಉದಾರವಾದಿ ವ್ಯವಸ್ಥೆ ಅವರ ವಿರುದ್ಧ ಸಕ್ರಿಯವಾಗಿದೆ. ಟ್ವಿಟರ್‌ಗೆಷ್ಟೇ ಸೀಮಿತವಾಗಿರುವ ಈ ವರ್ಗ, ತಾವೇ ಪ್ರಜಾಪ್ರಭುತ್ವದ ಏಕೈಕ ರಕ್ಷಕರೆಂದು ಭಾವಿಸಿದೆ‘ ಎಂದು ಅಶುತೋಷ್ ರಾಂಕಾ ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
‘ಇತರರನ್ನು ವಿಭಜಿಸಿ ಆಳಲು ಸಾಧ್ಯವಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಇಷ್ಟು ವರ್ಷಗಳ ಅವರ ವೈಫಲ್ಯವೇ ಇಂದು ಯುವಕರು ಬೀದಿಗೆ ಇಳಿಯಲು ಕಾರಣ. ನಮ್ಮ ಬಗ್ಗೆ ಮಾತನಾಡುವುದನ್ನು ಬಿಟ್ಟು ಯುವಕರಿಗೆ ಹೇಗೆ ಬೆಂಬಲ ನೀಡಬೇಕೋ ಅದನ್ನು ನೋಡಿಕೊಳ್ಳಲಿ‘ ಎಂದು ಸೌರವ್ ದಾಸ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ದಿಪ್ಕೆ, ‘ಪ್ರತಿಷ್ಠಿತ ರಾಜಕೀಯ ಪಕ್ಷಗಳ ಇಂತಹ ಜಗಳಗಳಿಂದ ಯುವಜನತೆ ಬೇಸತ್ತಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಪ್ರಾಬಲ್ಯ ಮುಖ್ಯವೇ ಹೊರತು ಜನರಲ್ಲ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರ ತಿರುಗೇಟು...
ಸಿಜೆಪಿ ನಾಯಕರ ಟೀಕೆಗೆ ಕಾಂಗ್ರೆಸ್ ನಾಯಕ ವಿಜಯ್ ತೊಟ್ಟತ್ತಿಲ್ ತಿರುಗೇಟು ನೀಡಿದ್ದು, ‘ಎನ್‌ಎಸ್‌ಯುಐ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಪೊಲೀಸರು, ಸಿಜೆಪಿ ಪ್ರತಿಭಟನಾಕಾರರಿಗೆ ಮುಂಬೈನಲ್ಲಿ ಮುಕ್ತವಾಗಿ ಓಡಾಡಲು ಏಕೆ ಬಿಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದಾಸ್, ‘ಪರರ ಮೇಲೆ ಗೂಬೆ ಕೂರಿಸುವ ಬದಲು ಕಾಂಗ್ರೆಸ್ ತನ್ನ ತಂತ್ರಗಾರಿಕೆಯನ್ನು ಮರುಪರಿಶೀಲಿಸಲಿ‘ ಎಂದಿದ್ದಾರೆ.
‘ಕಾಂಗ್ರೆಸ್ ತನ್ನ ಬೆಂಬಲಿಗರನ್ನು ನಿಯಂತ್ರಿಸಬೇಕು. ಸಿಜೆಪಿ, ಐಸಾ ಹಾಗೂ ಕಾಂಗ್ರೆಸ್ ಹೋರಾಡುತ್ತಿರುವುದು ಒಂದೇ ಶತ್ರುವಿನ ವಿರುದ್ಧ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸುವುದು ಸರಿಯಲ್ಲ‘ ಎಂದು ಕಾಂಗ್ರೆಸ್‌ನ ತುಷಾರ್ ಗಾಂಧಿ ಸಲಹೆ ನೀಡಿದ್ದಾರೆ.
ಎಎಪಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಎಡಪಕ್ಷಗಳು ಹಾಗೂ ಶಿವಸೇನಾ (ಉದ್ಧವ್) ಸಿಜೆಪಿ ಚಳವಳಿಗೆ ಬೆಂಬಲ ಸೂಚಿಸಿವೆ. ಇನ್ನೊಂದೆಡೆ ರಾಹುಲ್ ಗಾಂಧಿ 'ಸತ್ಯಾಗ್ರಹ' ಡಿಜಿಟಲ್ ವೇದಿಕೆ ಮೂಲಕ ಎಲ್ಲ ಹೋರಾಟಗಳನ್ನು ಒಂದೇ ಕಡೆಗೆ ತರಲು ಶ್ರಮಿಸುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳ ಅಂಗಳದಲ್ಲಿ ನಾಯಕತ್ವ ಹಾಗೂ ಕ್ರೆಡಿಟ್‌ಗಾಗಿ ನಡೆಯುತ್ತಿರುವ ಈ ಸಂಘರ್ಷ ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.