
Bengaluru Footpath: ರಸ್ತೆ ಗುಂಡಿ ತೋರಿಸಲು ಫಾರಿನರ್ ಬರಬೇಕಾ ಕೇಳ್ದಿದ್ದಾರೆ ನೆಟ್ಟಿಗರು, ಮುಜುಗರ ತಪ್ಪಿಸಲು ಜಿಬಿಎ ಸರ್ಕಸ್!
ಕೆನಡಾದ ಪ್ರಸಿದ್ಧ ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ವ್ಲಾಗರ್ ಕ್ಯಾಲೆಬ್ ಫ್ರೈಸೆನ್ (Caleb Friesen) ಅವರಿಗೆ ಬೆಂಗಳೂರು ನಗರದಲ್ಲಿ ಭಾರೀ ಡಿಮ್ಯಾಂಡ್ ಶುರುವಾಗಿದೆ. ಹೌದು ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದ ಅವ್ಯವಸ್ಥೆಯ ಬಗ್ಗೆ ಕ್ಯಾಲೆಬ್ ಫ್ರೈಸೆನ್ ವಿಡಿಯೋ ಮಾಡಿದ್ದರು. ಇದರ ಬೆನ್ನಲ್ಲೇ ಕ್ಯಾಲೆಬ್ ಫ್ರೈಸೆನ್ ವಿಡಿಯೋ ಮಾಡಿ ತೋರಿಸಿದ್ದ ಪಾದಚಾರಿ ಮಾರ್ಗ, ಸ್ಲ್ಯಾಬ್‌ಗಳ ದುರಸ್ತಿ ಹಾಗೂ ಪಾದಚಾರಿ ಮಾರ್ಗವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ದುರಸ್ತಿ ಮಾಡಲಾಗಿದೆ. ಆದರೆ ಬೆಂಗಳೂರಿನ ನಗರದಲ್ಲಿನ ರಸ್ತೆ ಗುಂಡಿಗಳನ್ನು ತೋರಿಸಲು ಫಾರಿನರ್ ಬರಬೇಕಾ ಅಂತ ನೆಟ್ಟಿಗರು ಕೇಳ್ದಿದ್ದಾರೆ. ಅಲ್ಲದೆ ಮುಜುಗರ ಮುಚ್ಚಿಕೊಳ್ಳಲು ಜಿಬಿಎ ಕ್ರಿಯೇಟಿವಿಟಿ ತೋರಿಸಿದೆ.!
ಕೆನಡಾ ಕ್ಯಾಲೆಬ್ ಫ್ರೈಸೆನ್ ಅವರು ಬೆಂಗಳೂರಿನ ಇಂದಿರಾನಗರದ 12 ನೇ ಮುಖ್ಯ ರಸ್ತೆಯಲ್ಲಿರುವ ಪಾದಚಾರಿ ಮಾರ್ಗಗಳಲ್ಲಿನ ಸಮಸ್ಯೆಗಳ ಬಗ್ಗೆ ವಿಡಿಯೋ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಈ ಮಾರ್ಗದಲ್ಲಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.
"ಬೇರೆ ಯಾವುದೇ ದೇಶದಲ್ಲಿ, ಈ ರೀತಿಯ ಪಾದಚಾರಿ ಮಾರ್ಗವು ಸ್ವೀಕಾರಾರ್ಹವಲ್ಲ' ಎಂದೂ ಅವರು ಹೇಳಿದ್ದರು. ಜಿಬಿಎ ಅಧಿಕಾರಿಗಳು ಕೂಡಲೇ ಈ ರಸ್ತೆ ದುರಸ್ತಿ, ಪಾದಚಾರಿ ಮಾರ್ಗಗಳನ್ನು ಸರಿಪಡಿಸಿದ್ದಾರೆ. ಆದರೆ, ಬೆಂಗಳೂರು ನಗರದ ಸಮಸ್ಯೆ ಪರಿಹಾರಕ್ಕೆ ವಿದೇಶಿಗರೊಬ್ಬರು ಬರಬೇಕಾಯಿತೇ ಅಂತ ಜನ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲು ನಾವು ಬಿಳಿ ಚರ್ಮ ಹೊಂದಿರಬೇಕೇ ಮತ್ತು ವಿಡಿಯೋ ಮಾಡಬೇಕೇ? ಎಂದು ಕೆಲವರು ಗಂಭೀರವಾಗಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಸ್ವಚ್ಛ ಮಾಡಲು ವಿದೇಶಿಗರೇ ಬರಬೇಕಾ?
ಬೆಂಗಳೂರು ನಗರವನ್ನು ಸ್ವಚ್ಛ ಮಾಡುವುದಕ್ಕೆ ವಿದೇಶಿಗರೇ ಬರಬೇಕಾ ಅಂತ ಹಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನು ನೀವು ಮೊದಲೇ ಏಕೆ ಸರಿಪಡಿಸಲಿಲ್ಲ, ವಿದೇಶಿಗರು ತೋರಿಸಿದ ಜಾಗವನ್ನು ಮಾತ್ರ ಏಕೆ ಸರಿಡಪಿಸಲಾಯಿತು, ಉಳಿದ ಜಾಗದಲ್ಲಿ ಸರಿ ಮಾಡಿಲ್ಲ ಯಾಕೆ ಅಂತಲೂ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಜಿಬಿಎ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ಈಗ ಸರಳವಾಗಿ ಅರ್ಥವಾಗಿದೆ. ಜನ ಸಾಮಾನ್ಯರು ಎಷ್ಟೇ ಬಾರಿ ಜಿಬಿಎ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸಲ್ಲ. ಆದರೆ, ವಿದೇಶಿಗರು ಒಂದೇ ಒಂದು ವಿಡಿಯೋ ಮಾಡಿದರೆ ಸಾಕು ಎಲ್ಲವನ್ನೂ @gba_office ಅಧಿಕಾರಿಗಳು ಸರಿ ಮಾಡುತ್ತಾರೆ. ಜನ ಸಾಮಾನ್ಯರು, ಬೆಂಗಳೂರಿನಲ್ಲೇ ಇರುವವರ ಮಾತಿಗೆ ಬೆಲೆ ಇಲ್ಲವೇ ಅಂತಲೂ ಜನ ಪ್ರಶ್ನಿಸುತ್ತಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇಷ್ಟುಬೇಗ ಸಮಸ್ಯೆಗೆ ಸ್ಪಂದಿಸಿರುವುದು ನೋಡಿ ತುಂಬಾ ಸಂತೋಷವಾಯಿತು. ಕಾಮೆಂಟ್‌ಗಳಲ್ಲಿ ಹಲವರು ಹೇಳಿರುವಂತೆ, ನಗರ ಅಧಿಕಾರಿಗಳು ಯಾರಾದರೂ ದೂರು ನೀಡಿದ ನಂತರ ಸಮಸ್ಯೆ ಪರಿಹರಿಸುವ ಬದಲು, ಸಮಸ್ಯೆ ಎದುರಾಗುವ ಮೊದಲೇ ಕ್ರಮ ಕೈಗೊಂಡರೆ ಇನ್ನೂ ಉತ್ತಮವಾಗಿರುತ್ತದೆ ಎಂದು ನನಗೂ ಅನಿಸುತ್ತದೆ. ಆದರೆ, ಸಮಸ್ಯೆ ಇರುವ ಸ್ಥಳಗಳನ್ನು ಸರಿಪಡಿಸಲು ಅವರು ತೋರಿಸುತ್ತಿರುವ ಪ್ರಯತ್ನ ಮತ್ತು ನಿರಂತರ ಕೆಲಸವನ್ನು ನಾನು ಖಂಡಿತವಾಗಿ ಪ್ರಶಂಸಿಸುತ್ತೇನೆ ಎಂದು ಕ್ಯಾಲೆಬ್ ಫ್ರೈಸೆನ್ ಅವರು ಹೇಳಿದ್ದಾರೆ.
ನಾನು ಇದನ್ನು ಈ ಹಿಂದೆಯೂ ಹೇಳಿದ್ದೇನೆ, ಮುಂದೆಯೂ ಹೇಳುತ್ತೇನೆ. ನನ್ನ ಚರ್ಮದ ಬಣ್ಣ ಮತ್ತು ರಾಷ್ಟ್ರೀಯತೆ ನನ್ನ ವಿಷಯಗಳು ಹೆಚ್ಚು ಜನರನ್ನು ತಲುಪಲು, ವೈರಲ್ ಆಗಲು ಒಂದು ರೀತಿಯ 'ಮಸಾಲೆ'ಯಂತೆ ಕೆಲಸ ಮಾಡುತ್ತವೆ. ಆದರೆ ಪ್ರತಿಯೊಬ್ಬ ಕಂಟೆಂಟ್ ಕ್ರಿಯೇಟರ್ ತಮ್ಮದೇ ಆದ ರೀತಿಯಲ್ಲಿ ಜನರ ಗಮನ ಸೆಳೆಯಬಹುದು. ಉದಾಹರಣೆಗೆ, ಬಾದಲ್ ನಂಜುಂಡಸ್ವಾಮಿ ಚಂದ್ರನ ಮೇಲಿನ ಕುಳಿಗಳಂತೆ ಕಾಣುವ ಗುಂಡಿಗಳನ್ನು ತೋರಿಸಲು ಗಗನಯಾತ್ರಿಯ ವೇಷ ಧರಿಸಿದ್ದರು. ಕಾಕ್ಸ್ ಟೌನ್ ನಿವಾಸಿಗಳು ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು 'ಗುಂಡಿ ಪೂಜೆ' ರೀತಿಯ ವಿಭಿನ್ನ ಪ್ರಯತ್ನ ಮಾಡಿದ್ದರು.
ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲು ಸೃಜನಾತ್ಮಕವಾಗಿ ತೋರಿಸಲು ಹಲವು ಮಾರ್ಗಗಳಿವೆ. ಆದರೆ, ಅವುಗಳನ್ನು ಬಳಸುವವರು ತುಂಬಾ ಕಡಿಮೆ. ತೆರಿಗೆ ಪಾವತಿಸಿ, ಮತ ಹಾಕಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದು ಸಾಕಾಗುವುದಿಲ್ಲ.
ನೀವು ನಿಜವಾಗಿಯೂ ಸಕಾರಾತ್ಮಕ ಬದಲಾವಣೆ ಬಯಸಿದರೆ, ಎರಡು ವಿಷಯಗಳನ್ನು ಮಾಡಬೇಕು:
1. ಈಗಿರುವ ವ್ಯವಸ್ಥೆಯಿಂದ ನೀವು ತೃಪ್ತರಾಗಿಲ್ಲ ಎಂಬುದನ್ನು ಗೌರವಯುತವಾಗಿ ಮತ್ತು ಶಾಂತಿಯುತವಾಗಿ ತಿಳಿಸಬೇಕು.
2. ಒಳ್ಳೆಯ ಬದಲಾವಣೆ ತರಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಬೇಕು ಅಂತಲೂ ಅವರು ಹೇಳಿದ್ದಾರೆ. ವೀರೇಂದ್ರ ಸೂರ್ಯವಂಶಿ ಈ ವಿಡಿಯೋ ಲೈವ್ ಪ್ರಸಾರವಾಗುವ ಮೊದಲು ಮತ್ತು ನಂತರ ಹಲವು ಕರೆಗಳನ್ನು ಮಾಡಿ, GBA ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅರುಣ್ ಪೈ ಕೂಡ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಡಲು ಸ್ವಯಂಸೇವಕರನ್ನು ಒಗ್ಗೂಡಿಸುತ್ತಿದ್ದಾರೆ. ಇದರಿಂದ ಮುಂದೆ ಇಂತಹ ಸ್ಥಳಗಳನ್ನು ಮತ್ತೆ ನಿರ್ಲಕ್ಷಿಸುವುದನ್ನು ತಡೆಯಲು ಸಹಾಯವಾಗುತ್ತದೆ ಎಂದಿದ್ದಾರೆ. ಭಾರತ ತನ್ನಿಂದ ತಾನೇ ಸುಧಾರಿಸುವುದಿಲ್ಲ. ಬದಲಾವಣೆ ತರಲು ನಮ್ಮೆಲ್ಲರ ಪ್ರಯತ್ನವೂ ಅಗತ್ಯ ಅಂತಲೂ ಕೆನಡಾದ ಪ್ರಜೆ ಹೇಳಿದ್ದಾರೆ.
View this post on Instagram
A post shared by Arun Pai (@arunpai.theblrwalksguy)