
ಬ್ರಿಮ್ಸ್: ವರ್ಣರಂಜಿತ ಯುವಜನೋತ್ಸವ
ಬೀದರ್: ನಗರದ ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮವು ಮಂಗಳವಾರ ವರ್ಣರಂಜಿತವಾಗಿ ನಡೆಯಿತು.
ಯುವ ಜನೋತ್ಸವದಲ್ಲಿ ನೃತ್ಯ, ವರ್ಣಚಿತ್ರ ಸ್ಪರ್ಧೆ, ಜಾನಪದ ಗೀತೆ, ಬೀದಿ ನಾಟಕ ಹಾಗೂ ಕವಿತೆ/ಲೇಖನ ಬರೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸುವರ್ಣ ಅವಕಾಶ ಪಡೆಯಲಿದ್ದಾರೆ.
ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೀದರ್, ಮೇರಾ ಯುವ ಭಾರತ, ಎನ್ಎಸ್ಎಸ್ ಘಟಕ ಮತ್ತು ಬ್ರಿಮ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಯುವಜನತೆಯ ಪ್ರತಿಭಾ ಪ್ರದರ್ಶನಕ್ಕೆ ಯುವ ಜನೋತ್ಸವವು ಉತ್ತಮ ವೇದಿಕೆಯಾಗಿದೆ. ದೈನಂದಿನ ಜೀವನದ ಮಾನಸಿಕ ಒತ್ತಡವನ್ನು ನಿವಾರಿಸಲು ಮತ್ತು ಹೊಸ ಉಲ್ಲಾಸ ಪಡೆಯಲು ಸಾಂಸ್ಕೃತಿಕ ಹಾಗೂ ಪುನಶ್ಚೇತನ ಚಟುವಟಿಕೆಗಳು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್ ಮಾತನಾಡಿ, ಯುವ ಜನೋತ್ಸವವು ಜಿಲ್ಲೆಯ ಉದಯೋನ್ಮುಖ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೊರೆತಿರುವ ಅತ್ಯುತ್ತಮ ಅವಕಾಶ ಎಂದರು.
ಜಿಲ್ಲಾ ಮಟ್ಟದಿಂದ ಆಯ್ಕೆಯಾಗುವ ಸ್ಪರ್ಧಿಗಳು ವಿಭಾಗೀಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೆ ಬೆಳೆಯಲು ಈ ಕಾರ್ಯಕ್ರಮ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ, ಸಾರ್ವಜನಿಕರು ಮತ್ತು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಅಭಿನವ ಜೈನ್, ಸಂಘ ಸಂಸ್ಥೆಗಳ ಪ್ರಮುಖರಾದ ರಾಜಶೇಖರ ಪಸಾರೆ, ಓಂಪ್ರಕಾಶ್ ರೊಟ್ಟೆ, ವಿರೂಪಾಕ್ಷ ಗಾದಗಿ, ಶಿವಕುಮಾರ ಸ್ವಾಮಿ, ಸುನೀಲ್ ಭಾವಿಕಟ್ಟಿ, ರಘುವೀರ ವಾಡೆಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ, ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಉಪಸ್ಥಿತರಿದ್ದರು.