ಸಜಾ ಕೈದಿಯ ಪತ್ನಿಗೆ ಡಿಐಜಿ ಲೈಂಗಿಕ ಶೋಷಣೆ
ಬೆಂಗಳೂರು: ನಕಲಿ ಆದೇಶ ಸೃಷ್ಟಿಸಿ, ಜೀವಾವಧಿ ಶಿಕ್ಷೆಯ ಅಪರಾಧಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದ ಹಾಗೂ ಸಜಾ ಕೈದಿಯ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಕಾರಾಗೃಹ ಇಲಾಖೆಯ ಡಿಐಜಿ ಸೋಮಶೇಖರ್ ಅವರನ್ನು ಹತ್ತು ದಿನ ಕಸ್ಟಡಿಗೆ ಪಡೆದಿರುವ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದಾರೆ.
ಅನಾಮಧೇಯ ಪತ್ರವೊಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರಿಗೆ ಬಂದಿತ್ತು. ಅದನ್ನು ಆಧರಿಸಿ, ತನಿಖೆ ನಡೆಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆಗ, ಡಿಐಜಿ ಸೋಮಶೇಖರ್ ಹಾಗೂ ಕಾರಾಗೃಹ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಎಸ್.ಶ್ರೀಕಾಂತ್ ಅವರ ಕೃತ್ಯ ಬಯಲಾಗಿದೆ ಎಂದು ಮೂಲಗಳು ಹೇಳಿವೆ.
ಬಳಿಕ ಕಾರಾಗೃಹದ ಪ್ರಭಾರ ಅಧೀಕ್ಷಕ ಕರ್ಣ ಬಿ. ಕ್ಷೇತ್ರಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ ಸಜಾ ಕೈದಿಯೂ ಸೇರಿ ಮೂವರನ್ನು ಬಂಧಿಸಲಾಗಿದೆ.
ಅಪಹರಣ, ಕೊಲೆ ಪ್ರಕರಣದಲ್ಲಿ ಶಂಕರ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಪತಿ ನೋಡಲು ಆಗಾಗ್ಗೆ ಜೈಲಿಗೆ ಭೇಟಿ ನೀಡುತ್ತಿದ್ದ ಶಂಕರ್ ಪತ್ನಿಯನ್ನು ಸೋಮಶೇಖರ್ ಹಾಗೂ ಎಸ್.ಶ್ರೀಕಾಂತ್ ಪರಿಚಯಿಸಿಕೊಂಡಿದ್ದಲ್ಲದೇ, ಇಬ್ಬರೂ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಸುಪ್ರೀಂ ಕೋರ್ಟ್ ಆದೇಶಿಸಿದಂತೆಯೇ ನಕಲಿ ಆದೇಶವನ್ನು ಸೃಷ್ಟಿಸುವಂತೆ ಸೋಮಶೇಖರ್, ಶ್ರೀಕಾಂತ್‌ಗೆ ಸೂಚಿಸಿದ್ದರು. ಅದೇ ಆದೇಶ ಆಧರಿಸಿ, ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಪದೇ ಪದೇ ವಿಡಿಯೊ ಕರೆ: ಶಂಕರ್ ಪತ್ನಿಗೆ ಡಿಐಜಿ ಪದೇ ಪದೇ ವಿಡಿಯೊ ಕರೆ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ. ವಿಡಿಯೊ ಕರೆಯಲ್ಲಿ ವಿವಸ್ತ್ರವಾಗುವಂತೆ ಡಿಐಜಿ ಹೇಳಿದ್ದಾರೆ. ಆ ವಿಡಿಯೊ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಕೃತ್ಯ ನಡೆದಾಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯಸ್ಥರಾಗಿದ್ದ ಸೋಮಶೇಖರ್ ಈಗ ಕಲಬುರಗಿ ಕಾರಾಗೃಹದ (ಉತ್ತರ ವಲಯ) ಡಿಐಜಿಯಾಗಿ ಕೆಲಸ ಮಾಡುತ್ತಿದ್ದರು.
ಜೈಲಿನಿಂದ ಬಿಡುಗಡೆಯಾದ ಮೇಲೆ ಶಂಕರ್ ಬೇರೆ ಮಹಿಳೆಯೊಂದಿಗೆ ಎರಡನೇ ಮದುವೆ ಆಗಿದ್ದಾನೆ ಎಂದು ಮೂಲಗಳು ಹೇಳಿವೆ.
ಅಪರಾಧಿ ಶಂಕರ್ ವಿರುದ್ಧ ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ತ್ವರಿತ ವಿಲೇವಾರಿ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ಕೆಳಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಅಪರಾಧಿ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದ. ತ್ವರಿತ ವಿಲೇವಾರಿ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನು ಮೇಲಿನ ನ್ಯಾಯಾಲಯಗಳು ಕಾಯಂಗೊಳಿಸಿ, ಆದೇಶಿಸಿದ್ದವು. ಬಳಿಕ, ನಕಲಿ ಆದೇಶ ಸೃಷ್ಟಿಸಿ ಬಿಡುಗಡೆ ಮಾಡಲಾಗಿತ್ತು.