
ಜಿಬಿಎನಂತೆ ಪೊಲೀಸ್ ಇಲಾಖೆ ಆಗೋದು ಬೇಡ! ಬೆಂಗಳೂರು ಪೊಲೀಸ್ ವಿಭಜನೆಗೆ ವಿಪಕ್ಷ ನಾಯಕ ವಿವರಿಸಿದ್ದೇನು?
ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಪೊಲೀಸ್ ವ್ಯವಸ್ಥೆಯ ವಿಭಜನೆಗೆ ಮುಂದಾಗಿದ್ದು, ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲದೇ ಇಷ್ಟು ವರ್ಷಗಳ ಕಾಲ ರಾಜ್ಯದ ಆರ್ಥಿಕ ಹಕ್ಕುಗಳ ಬಗ್ಗೆ ಗಂಭೀರವಾಗಿ ಮಾತನಾಡದವರು ಈಗ GST ಸಭೆಗೆ ಹೋಗುತ್ತಿದ್ದಾರೆ. ಅಲ್ಲಿ ರಾಜ್ಯದ ಪರವಾಗಿ ಏನೇನು ಬೇಡಿಕೆ ಇಡುತ್ತಾರೆ, ಅವರ ಚಾಣಕ್ಯತನ ಏನು ಎಂಬುದನ್ನು ಕಾದು ನೋಡೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು GST ಸಭೆಗೆ ತೆರಳುತ್ತಿರುವ ಕುರಿತು ಪ್ರತಿಕ್ರಿಯಿಸಿದರು.
ಇಂದು ಮಂಗಳವಾರ ಕೇಂದ್ರದ ಬರ ಅಧ್ಯಯನ ತಂಡವನ್ನು ಭೇಟಿ ಮಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸುದ್ದಿಗಾರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. 'ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ಸರ್ಕಾರದ ನಿರ್ಧಾರ ಸರಿಯಲ್ಲ' ಎಂದರು.
ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ತನ್ನದೇ ಆದ ಗೌರವ ಮತ್ತು ಘನತೆ ಇದೆ. ವರ್ಷಗಳಿಂದ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಐದು ಕಮಿಷನರೇಟ್‌ಗಳಾಗಿ ವಿಭಜಿಸುವ ಅಗತ್ಯವೇನಿತ್ತು? ಇದು ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಲಿದೆ ಎಂದು ಹೇಳಿದರು.
ಜಿಬಿಎನಂತೆ ಪೊಲೀಸ್ ಇಲಾಖೆ ಆಗೋದು ಬೇಡ!
ಬೆಂಗಳೂರು ಈಗಾಗಲೇ ಐದು ಪಾಲಿಕೆಗಳಾಗಿ ವಿಭಜನೆಯಾದ ನಂತರ ಆಡಳಿತ ಮತ್ತು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೀಗ ಪೊಲೀಸ್ ಇಲಾಖೆಯನ್ನೂ ಇದೇ ರೀತಿಯಲ್ಲಿ ವಿಭಜಿಸುವ ಮೂಲಕ ಸರ್ಕಾರ ಮತ್ತೊಂದು ಗೊಂದಲ ಸೃಷ್ಟಿಸುತ್ತಿದೆ. ಬೆಂಗಳೂರು ಪೊಲೀಸ್ ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯವಾಗಲಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಈ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಮೊದಲು ಈ ತುಘಲಕ್ ನಿರ್ಧಾರವನ್ನು ಕೈಬಿಟ್ಟು, ಇರುವ ಕಮಿಷನರೇಟ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಮಹಾನಗರದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿದ್ದು ಸಾಕು. ಈಗ ಪೊಲೀಸ್ ವ್ಯವಸ್ಥೆಯನ್ನೂ ಹಾಳು ಮಾಡಬೇಡಿ. ಈ ವಿಭಜನೆಯಿಂದ ಬೆಂಗಳೂರು ಜನತೆಗೆ ಯಾವುದೇ ಪ್ರಯೋಜನವಿಲ್ಲ ಎಂದರು.
ಹಾಲಿನ ದರ ಏರಿಕೆ: ಕಾಂಗ್ರೆಸ್ ತನ್ನದೇ ಭರವಸೆ ಮರೆತಿದೆ
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನವನ್ನು ₹5ರಿಂದ ₹8ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳುತ್ತಾರೆ. ಹಾಗಿದ್ದರೆ ರೈತರಿಗೆ ನೀಡಬೇಕಾದ ಹೆಚ್ಚುವರಿ ₹3 ಪ್ರೋತ್ಸಾಹಧನ ಮೊದಲು ಕೊಡಿ. ಹಾಲಿನ ದರ ಏರಿಕೆ ಮಾಡುವ ಅಗತ್ಯವೇ ಇರುವುದಿಲ್ಲ. ರೈತರಿಗೆ ನೀಡಬೇಕಾದ ಹಣವನ್ನು ನೀಡದೆ, ಗ್ರಾಹಕರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದರು.
₹25,000 ಕೇಳಿದ್ದೇವೆ, ₹2,500 ಕೊಡಲಾಗುತ್ತಿಲ್ಲ
ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ₹2,500 ಪರಿಹಾರ ನೀಡುವುದಾಗಿ ಹೇಳಿದೆ. ಆದರೆ ಅದನ್ನೂ ಇದುವರೆಗೆ ಸರಿಯಾಗಿ ನೀಡಿಲ್ಲ. ಹಿಂದೆ ಪ್ರತಿ ತಾಲೂಕಿಗೆ ₹1 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರೂ ಆ ಹಣವೂ ಬಿಡುಗಡೆಯಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆಗೂ ಅಗತ್ಯ ಹಣ ನೀಡಿಲ್ಲ. ನಾವು ಒಂದು ಎಕರೆಗೆ ₹25,000 ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ ರಾಜ್ಯ ಸರ್ಕಾರ ಅದರ ಒಂದು ಭಾಗವನ್ನೂ ನೀಡಿಲ್ಲ. ರೈತರಿಗೆ ನೀಡಬೇಕಾದ ಪರಿಹಾರದ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆರ್ಥಿಕ ಇಲಾಖೆ ಪಾಪರ್ ಆಗಿರುವುದರಿಂದ ಸರ್ಕಾರ ಹೆಚ್ಚಿನ ಪರಿಹಾರ ಕೊಡುವುದು ಅನುಮಾನ. ತಲಾ ₹2500 ಪರಿಹಾರವೆಂದರೆ ಒಟ್ಟು ₹1800 ಕೋಟಿ ಆಗುತ್ತದೆ. ಅಷ್ಟು ಹಣ ರಾಜ್ಯ ಸರ್ಕಾರದ ಬಳಿ ಇಲ್ಲ ಎಂದು ಲೇವಡಿ ಮಾಡಿದರು.
2021-22ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದ ನೆರವಿಗಾಗಿ ಕಾಯದೆ, ತನ್ನದೇ ಸಂಪನ್ಮೂಲದಿಂದ NDRF ನಿಯಮಗಳಿಗಿಂತ ಹೆಚ್ಚಿನ ಪರಿಹಾರವನ್ನು ರೈತರಿಗೆ ನೀಡಿತ್ತು. ಅದೇ ರೀತಿಯ ಪರಿಹಾರವನ್ನು ಈಗಿನ ಕಾಂಗ್ರೆಸ್ ಸರ್ಕಾರವೂ ನೀಡಬೇಕು. ಬಿಜೆಪಿ ಸರ್ಕಾರ ಎಷ್ಟು ಪರಿಹಾರ ನೀಡಿತ್ತು ಎಂಬುದನ್ನು ವಿಧಾನಸಭೆಯಲ್ಲೂ ಚರ್ಚಿಸಲು ಕಾಂಗ್ರೆಸ್ ಸರ್ಕಾರ ಸಿದ್ಧವಿಲ್ಲ. ಆ ಸತ್ಯ ಹೊರಬಂದರೆ ತಮ್ಮ ವೈಫಲ್ಯ ಬಯಲಾಗುತ್ತದೆ ಎಂಬ ಭಯ ಕಾಂಗ್ರೆಸ್‌ಗೆ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ ಹಣಕಾಸಿನ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ರೈತರಿಗೆ ಪರಿಹಾರ ನೀಡಲು ಹಣವಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ. ಆದರೆ ಜನರ ಮೇಲೆ ಒಂದರ ಹಿಂದೆ ಒಂದರಂತೆ ತೆರಿಗೆ ಮತ್ತು ಬೆಲೆ ಏರಿಕೆಯ ಹೊರೆ ಹಾಕಲಾಗುತ್ತಿದೆ ಎಂದು ಹೇಳಿದರು.
ಬಸ್ ದರ ಏರಿಕೆ, ಮನೆ ತೆರಿಗೆ, ವಿದ್ಯುತ್ ಶುಲ್ಕ ಸೇರಿದಂತೆ ವಿವಿಧ ರೀತಿಯಲ್ಲಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ. ಕುಟುಂಬದಲ್ಲಿ ಮಹಿಳೆಯರಿಗೆ ಉಚಿತ ನೀಡಿ, ಉಳಿದ ಸದಸ್ಯರಾದ ಗಂಡಸರಿಗೆ ತೆರಿಗೆ ಹಾಕುತ್ತಾರೆ. ಒಂದು ಕುಟುಂಬದಿಂದ ತಿಂಗಳಿಗೆ ₹6000 ವಸೂಲಿ ಮಾಡಿದರೆ, ಒಂದು ಭಾಗ ಮುಖ್ಯಮಂತ್ರಿಗೆ, ಮತ್ತೊಂದು ಭಾಗ ರಾಹುಲ್ ಗಾಂಧಿಗೆ ಹಾಗೂ ಕೊನೆ ಭಾಗವನ್ನು ಗೃಹಲಕ್ಷ್ಮಿ ಮೂಲಕ ನೀಡಲಾಗುತ್ತದೆ. ಒಂದು ಕೈಯಲ್ಲಿ ಹಣ ಪಡೆದು ಮತ್ತೊಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಣ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ಮಾದರಿಯಾಗಿದೆ ಎಂದು ಆರೋಪಿಸಿದರು.