
ತುಮಕೂರು | ಅಭಿವೃದ್ಧಿ ವರದಿ ಸಲ್ಲಿಕೆಗೆ ವಿಳಂಬ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು: ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮೂಲಸೌಕರ್ಯ ಒದಗಿಸುವ ಬಗ್ಗೆ ಮತ್ತು ಬಡ ಜನರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡ ನಿರ್ಣಯಗಳ ವಸ್ತುಸ್ಥಿತಿ ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
‘ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಸಭೆಯ ನಿರ್ಣಯಗಳನ್ನು ಜಾರಿಗೊಳಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಎರಡು ವರ್ಷಗಳಿಂದ ವಿಳಂಬ ಮಾಡುತ್ತಿದೆ’ ಎಂದು ಆಕ್ಷೇಪಿಸಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಕೆಲವೊಂದು ದಾಖಲೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ವಸ್ತುಸ್ಥಿತಿ ವರದಿ ಸಲ್ಲಿಕೆ ವಿಳಂಬವಾಗಿದೆ. ಸಂಬಂಧಪಟ್ಟ ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ನ್ಯಾಯಪೀಠ, ‘ವಿಚಾರಣೆಗೆ ಜಿಲ್ಲಾಧಿಕಾರಿ ಹಾಜರಾಗುವಂತೆ ಸೂಚಿಸಿದರೆ ಉಪ ವಿಭಾಗಾಧಿಕಾರಿ ಹಾಜರಾಗಿದ್ದಾರೆಯೇ? ಕೋರ್ಟ್ ಸೂಚಿಸಿದ ಅಧಿಕಾರಿಯೇ ಹಾಜರಾಗಬೇಕೇ ಹೊರತು ಮತ್ಯಾರೋ ಅಲ್ಲವಲ್ಲಾ’ ಎಂದು ಅಸಮಾಧಾನ ವ್ಯಕ್ತಪಡಿಸಿತು.
‘ವರದಿ ಸಲ್ಲಿಕೆಗೆ ಏಕೆ ಇಷ್ಟೊಂದು ವಿಳಂಬ ಮಾಡಲಾಗಿದೆ? ಕೋರ್ಟ್ ಆದೇಶವೆಂದರೆ ಸರ್ಕಾರಕ್ಕೆ ತಮಾಷೆಯೇ? ದೊಡ್ಡ ಮೊತ್ತದ ದಂಡ ವಿಧಿಸಲು ಇದೊಂದು ಅರ್ಹ ಪ್ರಕರಣ’ ಎಂದು ಕಿಡಿ ಕಾರಿತು.
‘ಕೋರ್ಟ್ ಆದೇಶ ಅನುಪಾಲನೆ ಮಾಡಲು ಸರ್ಕಾರಕ್ಕೆ ಏನು ಕಷ್ಟವಾಗುತ್ತಿದೆ? ಕೋರ್ಟ್ ಆದೇಶವನ್ನು ಇಷ್ಟೊಂದು ಹಗುರವಾಗಿ ಪರಗಣಿಸುತ್ತಿದ್ದೀರಾ? ಇದು ಸಾರ್ವಜನಿಕರ ಹಿತಾಸಕ್ತಿ ವಿಚಾರ. ಕೋರ್ಟ್ ಆದೇಶವನ್ನು ಲಘುವಾಗಿ ಪರಿಗಣಿಸಬೇಡಿ. ನಮ್ಮ ಆದೇಶವನ್ನು ಲಘುವಾಗಿ ಭಾವಿಸಿದರೆ, ಕಠಿಣ ಆದೇಶ ಆದೇಶ ಹೊರಡಿಸಬೇಕಾಗುತ್ತದೆ’ ಎಂದು ಎಚ್ಚರಿಸಿತು.