
‘ಮಲ್ಟಿಪ್ಲೆಕ್ಸ್ ಸೆಸ್’ ಆತುರವಿಲ್ಲ: ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ
ಬೆಂಗಳೂರು: ‘ಮಲ್ಟಿಪ್ಲೆಕ್ಸ್‌ಗಳಲ್ಲಿನ ಸಿನಿಮಾ ಟಿಕೆಟ್ ದರದ ಮೇಲೆ ಶೇ 2ರಷ್ಟು ಸೆಸ್ (ಉಪ ಕರ) ಸಂಗ್ರಹಣೆ ವಿಚಾರದಲ್ಲಿ ಆತುರದ ಕ್ರಮಕ್ಕೆ ಮುಂದಾಗುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತಂತೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಐಎ), ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತು ಷೇರುದಾರ ಪ್ರತೀಕ್ ಚೌಹಾಣ್ ಮತ್ತಿತರರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠ, ‘ಕಾಯ್ದೆಯ ಕಲಂ 9ರ ಪ್ರಕಾರ ಅರ್ಜಿದಾರರು ಪ್ರತಿ ತಿಂಗಳೂ ಸೆಸ್ ಸಂಗ್ರಹಿಸಿದ ವರದಿಯ ಅನುಪಾಲನೆ ಮಾಡಬೇಕು ಎಂದಿದೆ. ಈಗ ಕಾಯ್ದೆಯ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾರಣಆತುರದ ಕ್ರಮಕ್ಕೆ ಮುಂದಾಗಬಾರದು’ ಎಂದು ಹೇಳಿತು.ಇದಕ್ಕೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಭಾನುಪ್ರಕಾಶ್, ‘ಕಾಯ್ದೆ ಬುಧವಾರದಿಂದ ಜಾರಿಗೆ ಬಂದಿದೆ. ಮೂರ್ನಾಲ್ಕು ದಿನಗಳ ಕಾಲಾವಕಾಶ ನೀಡಿದರೆ ಆಕ್ಷೇಪಣೆ ಸಲ್ಲಿಸಲಾಗುವುದು’ ಎಂದರು. ವಿಚಾರಣೆಯನ್ನು ಅ. 26ಕ್ಕೆ ಮುಂದೂಡಲಾಗಿದೆ.