ಕೋಲಾರ: ಮತಪಟ್ಟಿಯಿಂದ ಹೆಸರು ತೆಗೆದಿದ್ದಕ್ಕೆ ಕಾಂಗ್ರೆಸ್ ಆಕ್ರೋಶ

ಕೋಲಾರ: ಮತಪಟ್ಟಿಯಿಂದ ಹೆಸರು ತೆಗೆದಿದ್ದಕ್ಕೆ ಕಾಂಗ್ರೆಸ್ ಆಕ್ರೋಶ

ಕೋಲಾರ: ಮತಪಟ್ಟಿಯಿಂದ ಹೆಸರು ತೆಗೆದಿದ್ದಕ್ಕೆ ಕಾಂಗ್ರೆಸ್ ಆಕ್ರೋಶ

ಕೋಲಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಅವೈಜ್ಞಾನಿಕವಾಗಿದ್ದು, ಮತದಾರರ ಹೆಸರನ್ನು ಅಕ್ರಮವಾಗಿ ಅಳಿಸಿ ಹಾಕಲಾಗುತ್ತಿದೆ. ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದನ್ನು ಖಂಡಿಸಿ ಅ.5ರ ಸೋಮವಾರ ಜಿಲ್ಲಾ ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎಸ್‌ಐ‌ಆರ್‌ ನೆಪದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಮತಗಳನ್ನು ಮತಪಟ್ಟಿಯಿಂದ ಕಸಿಯುವ ತಂತ್ರವನ್ನು ಬಿಜೆಪಿ ರೂಪಿಸಿದೆ. ಇದಕ್ಕಾಗಿಯೇ ಜ್ಞಾನೇಶ್ ಕುಮಾರ್ ಅವರನ್ನು ನೇಮಿಸಿಕೊಂಡಿದೆ. ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿರುವ ಅವರ ಆಯ್ಕೆ ಪ‍್ರಕ್ರಿಯೆಯೇ ದೋಷಪೂರಿತವಾಗಿದೆ’ ಎಂದು ದೂರಿದರು.

ಬಿಹಾರ, ಪಶ್ಚಿಮ ಬಂಗಾಳದಲ್ಲಿ ಅರ್ಹ ಮತದಾರರ ಹೆಸರನ್ನು ಅಳಿಸಿ ಹಾಕುವ ಮೂಲಕ ಮತದಾನದ ಹಕ್ಕು ಕಸಿದಿದ್ದಾರೆ. ಈ ವಿಚಾರದಲ್ಲಿ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತದಾರರ ಹೆಸರು ಅಳಿಸಿ ಹಾಕುವ ಕ್ರಮ ಸಮಂಜಸವಾಗಿಲ್ಲ ಎಂಬುದಾಗಿ ಇವರು ಸಲಹೆ ನೀಡಿದ್ದಾರೆ. ಆದರೆ, ಬಿಜೆಪಿ ಏಜೆಂಟ್ ಅಗಿರುವ ಜ್ಞಾನೇಶ್ ಕುಮಾರ್ ಆ ಸಲಹೆ ನಿರ್ಲಕ್ಷಿಸಿದ್ದು, ಈ ಅಧಿಕಾರಿಗಳನ್ನೇ ಎಸ್‌ಐಆರ್‌ನಿಂದ ಹೊರಗಿಟ್ಟಿದ್ದಾರೆ. ಈಗ ಕರ್ನಾಟಕದಲ್ಲೂ ಅದೇ ಕೃತ್ಯ ನಡೆಯುತ್ತಿದೆ ಎಂದು ಆರೋಪಿಸಿದರು.

ನಮ್ಮ ರಾಜ್ಯದಲ್ಲಿ ಫಾರಂ 7ಅನ್ನು ಅವರೇ ಸೃಷ್ಟಿಸಿಕೊಂಡು, ಜನರೇ ಕೊಟ್ಟಂತೆ ಬಿಂಬಿಸಿ ಬೇಕಾದವರ ಮತಗಳನ್ನು ಅಳಿಸಿ ಹಾಕುತ್ತಿದ್ದಾರೆ. ಯಾವುದೇ ದಾಖಲಾತಿ ಇಲ್ಲದೆ ನೀಡಿದರೂ ಅದನ್ನು ಸ್ವೀಕರಿಸುವಂತೆ ಬಿ‌ಎಲ್‌ಒಗಳನ್ನು ಅಮಿಷಕ್ಕೆ ಒಳಪಡಿಸಿದ್ದಾರೆ. ಹೀಗಾಗಿ, ಮೊದಲು ಜ್ಞಾನೇಶ್ ಕುಮಾರ್ ಅವರನ್ನು ಕಿತ್ತೊಗೆಯಬೇಕು. ಶನಿವಾರ ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ಸಮಿತಿ ರಚಿಸಲಾಗುವುದು. ಸೋಮವಾರ ಬೆಳಗ್ಗೆ ಕಾಂಗ್ರೆಸ್‌ ಕಚೇರಿಯಿಂದ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗಾಂಧಿವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ‌ಎಂದರು.

ಎಸ್‌ಟಿ ಘಟಕದ ಅಧ್ಯಕ್ಷ ಅಂಬರೀಷ್ ಮಾತನಾಡಿ, ‘ರಾಹುಲ್ ಗಾಂಧಿ ಎಸ್‌ಐಆರ್‌ ಕುರಿತು ಮಾತ್ರವಲ್ಲದೇ; ಈ ಹಿಂದೆ ಸಿಎಎ ಹಾಗೂ ಎನ್‌ಆರ್‌ಸಿ ವೇಳೆ ಅಲ್ಪಸಂಖ್ಯಾತರನ್ನು ಹೊರಗಿಡುವ ಪ್ರಯತ್ನದ ವಿರುದ್ಧವೂ ಹೋರಾಡಿದ್ದರು. ರಾಜ್ಯದಲ್ಲಿ 1.3 ಕೋಟಿ ಮತದಾರರನ್ನು ಹೊರಗಿಡಲು ಯತ್ನಿಸಲಾಗುತ್ತಿದೆ. ‌ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮತದಾನದ ಹಕ್ಕು ಸಿಗಬೇಕು ಎಂಬುದು ಕಾಂಗ್ರೆಸ್‌ನ ಧ್ಯೇಯೋದ್ದೇಶ. ಆದರೆ, ಬಿಜೆಪಿ ತದ್ವಿರುದ್ಧವಾಗಿ ಆಡಳಿತ ನಡೆಸುತ್ತಿರುವುದು ದಬ್ಬಾಳಿಕೆಯ ಪರಮಾವಧಿಯಾಗಿದೆ’ ಎಂದು ಕಿಡಿಕಾರಿದರು.

ಮುಸ್ಲಿಂ ಸಮುದಾಯದ ಕೋಟ್ಯಂತರ ನೈಜ ಮತದಾರರನ್ನು ತೆಗೆದು ಹಾಕಿರುವ ಕ್ರಮವು ಜಾತ್ಯತೀತ ದೇಶಕ್ಕೆ ಮಾಡಿದ ಅಪಮಾನವಾಗಿದೆ. ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್‌ ಅಫ್ಸರ್‌, ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ವೈ.ಶಿವಕುಮಾರ್, ಷಂಷೀರ್, ಸಂಗೀತಾ, ಕೆ.ಜಯದೇವ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮಹೇಶ್‌ ಉಪಸ್ಥಿತರಿದ್ದರು.

‘ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ದೂರು ನೀಡುತ್ತೇವೆ’

ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜಕೀಯ ಭಾಷಣ ಮಾಡಿದ್ದಾರೆ. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಜಿಲ್ಲಾ ಸಮಿತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮ್ಯಾಕಲ ನಾರಾಯಣಸ್ವಾಮಿ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ