ಕೋಲಾರ: ಡಿಜಿಟಲ್‌ ಮೀಟರ್‌ ಇಲ್ಲದೇ ‘ಆಟೊ’ಟೋಪ ಜೋರು

ಕೋಲಾರ: ಡಿಜಿಟಲ್‌ ಮೀಟರ್‌ ಇಲ್ಲದೇ ‘ಆಟೊ’ಟೋಪ ಜೋರು

ಕೋಲಾರ: ಡಿಜಿಟಲ್‌ ಮೀಟರ್‌ ಇಲ್ಲದೇ ‘ಆಟೊ’ಟೋಪ ಜೋರು

ಕೋಲಾರ: ನಗರದಲ್ಲಿ ಡಿಜಿಟಲ್‌ ಮೀಟರ್‌ ಇಲ್ಲದೇ ‘ಆಟೊ’ಟೋಪ ಜೋರಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ನಡೆಸುತ್ತಿರುವ ಹಾಗೂ ಅಧಿಕ ವಸೂಲಿ ಮಾಡುತ್ತಿರುವ ದೂರುಗಳು ಹೆಚ್ಚಾಗಿವೆ.

ಆಟೊಗಳಿಗೆ ಡಿಜಿಟಲ್‌ ಫೇರ್‌ ಮೀಟರ್ ಅಳವಡಿಕೆ ಮಾಡಬೇಕು ಎನ್ನುವುದು ಇಂದು, ನಿನ್ನೆಯ ಯೋಜನೆಯಲ್ಲ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು (ಆರ್‌ಟಿಒ) ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕೋಲಾರ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ಆಟೊಗಳಿಗೆ ಕಡ್ಡಾಯವಾಗಿ ಡಿಜಿಟಲ್‌ ಮೀಟರ್‌ ಅಳವಡಿಸುವಂತೆ ಆದೇಶ ಹೊರಡಿಸಿ ಏಳೆಂಟು ವರ್ಷಗಳೇ ಆಗಿದೆ. ಮೀಟರ್‌ ಅಳವಡಿಕೆಗೆ ಸಾಕಷ್ಟು ಕಾಲಾವಕಾಶ ಸಹ ನೀಡಿದ್ದೂ ಆಗಿದೆ. ಆದರೆ, ಈಗಲೂ ಹೆಚ್ಚಿನ ಆಟೊಗಳಿಗೆ ಡಿಜಿಟಲ್‌ ಮೀಟರ್‌ ಅಳವಡಿಸಿಲ್ಲ. ಅಳವಡಿಸಿದ್ದರೂ ಕಾರ್ಯನಿರ್ವಹಣೆ ಪ್ರಮಾಣ ‘ಶೂನ್ಯ’!

ಕೋಲಾರ ನಗರ ವ್ಯಾಪ್ತಿಯಲ್ಲಿ ನಗರ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಜನರು ಆಟೊಗಳನ್ನು ಅವಲಂಬಿಸಿದ್ದಾರೆ. ಬಾಡಿಗೆ ದರಕ್ಕಾಗಿ ಚಾಲಕರೊಂದಿಗೆ ಚೌಕಾಸಿ ಮಾಡುವುದು ಅವರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಜನರಿಗೆ ಸುರಕ್ಷಿತ ಹಾಗೂ ಸುಲಭ ಪ್ರಯಾಣದ ಸೇವೆ ಒದಗಿಸಬೇಕಿದ್ದ ಆಟೊ ಚಾಲಕರು ಜನರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಆರೋಪಗಳಿವೆ.

ನಗರ ವ್ಯಾಪ್ತಿಯ 20 ಕಿ.ಮೀ ವ್ಯಾಪ್ತಿಯಲ್ಲಿ ಆಟೊ ಸಂಚಾರಕ್ಕೆ ಅವಕಾಶ ಇದೆ. ಕನಿಷ್ಠ ಆಟೊ ಪ್ರಯಾಣ ದರ ₹ 32. ನಂತರ ಪ್ರತಿ ಕಿ.ಮೀ ₹ 16 ಇದೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಒಂದೂವರೆ ಪಟ್ಟು ಪ್ರಯಾಣ ದರ ಪಡೆಯಬೇಕೆಂಬ ನಿಯಮವಿದೆ. ಬೆಳಿಗ್ಗೆ 6 ರಿಂದ ರಾತ್ರಿ 10ರ ವರೆಗೆ ಸಾಮಾನ್ಯ ದರ ಅನ್ವಯವಾಗುತ್ತದೆ. ಆದರೆ, ಈ ಅವಧಿಯಲ್ಲಿ ಚಾಲಕರು ಹೆಚ್ಚುವರಿ ಹಣಕ್ಕೆ ಪ್ರಯಾಣಿಕರನ್ನು ಪೀಡಿಸುವುದು ಸಾಮಾನ್ಯ ಎಂಬ ದೂರುಗಳಿವೆ.

‘ನಗರದಲ್ಲಿ ಹೆಚ್ಚಿನ ಆಟೊಗಳಲ್ಲಿ ಡಿಜಿಟಲ್‌ ಫೇರ್‌ ಮೀಟರ್‌ ಇಲ್ಲ. ಕೆಲವರು ಇದ್ದರೂ ಮೀಟರ್ ಹಾಕಲ್ಲ. ಈ ಬಗ್ಗೆ ಹೇಳಿದರೂ ಜಗಳಕ್ಕೆ ಬರುತ್ತಾರೆ, ಹೆಚ್ಚು ಹಣ ಕೇಳುತ್ತಾರೆ. ಈ ಬಗ್ಗೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದ ಆಟೊ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಮೀಟರ್ ಅಳವಡಿಕೆ ಕಡ್ಡಾಯ ಎಂಬ ನಿಯಮವಿದ್ದರೂ ‘ಅವೈಜ್ಞಾನಿಕ ಬೆಲೆ ನಿಗದಿ’, ‘ಮೀಟರ್ ದುರಸ್ತಿಗೆ ಹೆಚ್ಚಿನ ದರ ಕೇಳುವುದು’... ಹೀಗೆ ವಿವಿಧ ಆರೋಪಗಳು ಮುನ್ನೆಲೆಗೆ ಬಂದು, ಮೀಟರ್ ಅಳವಡಿಕೆ ವಿಚಾರ ಹಿನ್ನೆಲೆಗೆ ಸರಿದಿದೆ.

ಆಟೊ ಚಾಲಕರದ್ದೂ ಹಲವಾರು ಸಮಸ್ಯೆಗಳಿವೆ. ಕೆಲವರು ಬಾಡಿಗೆ ಪಡೆದು ಆಟೊ ಓಡಿಸುತ್ತಾರೆ, ಕೆಲವರು ಸ್ವಂತ ಆಟೊ ಹೊಂದಿದ್ದಾರೆ. ಇನ್ನು ಕೆಲವರು ಬೇರೆ ಕೆಲಸ ಮಾಡುತ್ತಾ ಹೆಚ್ಚುವರಿ ದುಡಿಮೆಗಾಗಿ ರಾತ್ರಿ ವೇಳೆ ಆಟೊ ಓಡಿಸುತ್ತಾರೆ. ಅವರ ಜೀವನವೂ ಕಷ್ಟವಿದೆ.

‘ಬಡಾವಣೆಗಳಲ್ಲಿ ಗುಂಡಿಬಿದ್ದ ರಸ್ತೆ, ಕೆಸರು ರಸ್ತೆಗಳಲ್ಲಿ ಆಟೊ ಓಡಿಸುವುದು ದೊಡ್ಡ ಸಮಸ್ಯೆ. ಜೊತೆಗೆ ಪದೇಪದೇ ಕಾಮಗಾರಿ ಕಾರಣ ಸುತ್ತಿಬಳಸಿ ಬರಬೇಕಾಗುತ್ತದೆ. ಹೊಟ್ಟೆಪಾಡಿಗಾಗಿ ಆಟೊವೇ ನಮಗೆ ಗತಿ. ಈಗಂತೂ ಎಲ್ಲಾ ವಸ್ತುಗಳ ದರ ಹೆಚ್ಚಿದೆ. ಆಟೊ ದುರಸ್ತಿ ಬಂದರೆ ವಾರದ ದುಡಿಮೆಯೂ ಸಾಲದು. ಹೆಚ್ಚಿಗೆ ಬಾಡಿಗೆ ಕೇಳುವಂತಿಲ್ಲ. ಕೇಳದಿದ್ದರೆ ಕುಟುಂಬ ನಿರ್ವಹಣೆ ಆಗದು. ತ್ರಿಶಂಕು ಸ್ಥಿತಿ ನಮ್ಮದಾಗಿದೆ. ಸರ್ಕಾರದಿಂದೂ ಸೌಲಭ್ಯ ದೊರೆಯುತ್ತಿಲ್ಲ’ ಎಂದು ಚಾಲಕರ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ.

ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ನೇತೃತ್ವದಲ್ಲಿ ಶನಿವಾರ (ಅ.3) ಆರ್‌ಟಿಒ ಹಾಗೂ ಆಟೊ ಚಾಲಕರ ಸಭೆ ಇದೆ. ಹಲವಾರು ಸಮಸ್ಯೆಗಳು ಚರ್ಚೆ ಆಗಲಿವೆ. ಡಿಜಿಟಲ್‌ ಮೀಟರ್‌ ಅಳವಡಿಕೆ ಸಂಬಂಧವೂ ವಿಷಯ ಪ್ರಸ್ತಾಪವಾಗಲಿದೆ ಎಂದು ರಾಜ್ಯ ಅಟೊ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ತಿಳಿಸಿದರು.

ಬೈಕ್ ಟ್ಯಾಕ್ಸಿಗೆ ತಡೆಯೊಡ್ಡ‌ಲು ಮನವಿ

ಕೋಲಾರ ನಗರದಾದ್ಯಂತ ಯಾವುದೇ ಅನುಮತಿ ಇಲ್ಲದೆ ಕಾನೂನುಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬುದು ತ್ರಿಚಕ್ರ ವಾಹನ ಚಾಲಕರ ಸಂಘ, ತಾಲ್ಲೂಕು ಸಂಯೋಜಿತ ಕರ್ನಾಟಕ ರಾಜ್ಯ ಅಟೊ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ, ಕರ್ನಾಟಕ ಕಮರ್ಷಿಯಲ್ ವೆಹಿಕಲ್ ಆಪರೇಟರ್ ವೆಲ್‍ಫೇರ್ ಸೊಸೈಟಿಯ ಒತ್ತಾಯವಾಗಿದೆ. ಈಚೆಗೆ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ನಿಯಮಬಾಹಿರವಾಗಿ ಸಂಚರಿಸುತ್ತಿರುವ ಈ ವಾಹನಗಳಿಂದಾಗಿ ಪರವಾನಗಿ ಪಡೆದು ಆಟೋ ನಂಬಿ ಜೀವನ ನಡೆಸುತ್ತಿರುವ ನೂರಾರು ಚಾಲಕರಿಗೆ ತೀವ್ರ ಧಕ್ಕೆಯಾಗಿದೆ ಎಂಬುದು ಆಟೊ ಚಾಲಕರ ವಾದವಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ