
ಸೇಡಂ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ
ಸೇಡಂ: ನಗರದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸಪ್ಪಣ್ಣಾರ್ಯ ಶಿವಯೋಗಿಗಳ 109ನೇ ಪುಣ್ಯರಾಧನೆ ನಿಮಿತ್ತ ಶುಕ್ರವಾರ ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು.
ಸಾಮೂಹಿಕ ಇಷ್ಟಲಿಂಗ ಪೂಜೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡು ಬೆಳಿಗ್ಗೆ 11 ಗಂಟೆವರೆಗೆ ನಡೆಯಿತು. ಭಕ್ತಿಯ ಹಾಡು, ಭಜನೆ, ಮಂತ್ರಗಳ ಪಠಗಳ ಮೂಲಕ ನಡೆದ ಇಷ್ಟಲಿಂಗ ಪೂಜೆಯಲ್ಲಿ ನೂರಾರು ಭಕ್ತರು ಜಗದ್ಗುರುಗಳ ಸಮ್ಮುಖದಲ್ಲಿ ಲಿಂಗ ಪೂಜೆ ಮಾಡುವ ಮೂಲಕ ಭಕ್ತಿ ಪರಾಕಷ್ಟೆಗೆ ಸಾಕ್ಷಿಯಾದರು.
ಲಿಂಗದೀಕ್ಷೆ ಸ್ವೀಕರಿಸಿದ 200ಕ್ಕೂ ಅಧಿಕ ಭಕ್ತರು: ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಅಧಿಕ ಭಕ್ತರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಪಡೆದರು. ಚಿಕ್ಕ ಮಕ್ಕಳಿಂದ ಒಳಗೊಂಡು ಹಿರಿಯರು ಜಾತಿ-ಮತವೆನ್ನದೆ ಲಿಂಗದೀಕ್ಷೆ ಪಡೆದು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸೇಡಂನ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ತೊಟ್ನಳ್ಳಿಯ ಡಾ.ತ್ರಿಮೂರ್ತಿ ಶಿವಾಚಾರ್ಯ, ಪಂಚಾಕ್ಷರಿ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಕೊಟ್ಟುರೇಶ್ವರ ಶಿವಾಚಾರ್ಯ, ಕೇದಾರಲಿಂಗ ದೇವರು, ಬಸವರಾಜ ಪಾಟೀಲ್ ಸೇಡಂ ಸೇರಿದಂತೆ ನೂರಾರು ಭಕ್ತರು ಇದ್ದರು.