ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮುಂಬೈ, ದೆಹಲಿಯಲ್ಲಿ ಇಂದು ಪ್ರತಿಭಟನೆ
ನವದೆಹಲಿ / ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯಿಂದ ಮುಂಬೈನಲ್ಲಿ ಹಾಗೂ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದಿಂದ (ಎಐಎಸ್‌ಎ) ದೆಹಲಿಯಲ್ಲಿ ಇಂದು (ಅ.2)ರಂದು ಪ್ರತಿಭಟನೆಗಳು ನಿಗದಿಯಾಗಿವೆ.
ಸಿಜೆಪಿಯ ಪ್ರತಿಭಟನೆ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ. ಎಐಎಸ್‌ಎ ಪ್ರತಿಭಟನೆ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಿಗದಿಯಾಗಿದೆ. ಉಭಯ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ರಾಜ್ಯಸಭೆ ಸಂಸದ ಮನೋಜ್ ಝಾ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ದೆಹಲಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ನಡೆದಿದೆ ಎನ್ನಲಾದ ಅಕ್ರಮಕ್ಕೆ ಹೊಣೆ ಹೊತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಸಿಜೆಪಿ ಕರೆಕೊಟ್ಟಿರುವ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರಿಂದ, ‘ಜೈಲ್ ಭರೋ ಆಂದೋಲನ’ ಘೋಷಿಸಿದೆ. ದಾದರ್ ರೈಲು ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. 90 ಹೆಚ್ಚುವರಿ ರೈಲ್ವೆ ಹಾಗೂ ಆರ್‌ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಸಮ್ಮತಿ ನಿರಾಕರಿಸಿದ್ದು, ನವದೆಹಲಿ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಘೋಷಿಸಲಾಗಿದೆ. ಮೂರರಿಂದ ನಾಲ್ಕು ಸಾವಿರ ಮಂದಿ ಪ್ರತಿಭಟನಾಕಾರರು ಸೇರುವ ನಿರೀಕ್ಷೆ ಇದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಹಾಗೂ ಜಂತರ್ ಮಂತರ್ ಮಾರ್ಗ ಬದಲಾವಣೆ ಸೇರಿ ಒಟ್ಟು 11 ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿದೆ. ರಾಜೀವ್ ಚೌಕ್, ಮಂಡಿ ಹೌಸ್, ಐಎನ್‌ಎ, ನವದೆಹಲಿ ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೊ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ ಇರಲಿದೆ.
ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್, ಸೇವಾ ತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, ಐಎನ್‌ಎ, ಚಾವ್ರಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಮತ್ತು ನವದೆಹಲಿ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.