
ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರಲಾಗುವುದು: ಶ್ರೇಯಸ್ ಪಟೇಲ್
ಸಕಲೇಶಪುರ: ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ತಾಲ್ಲೂಕಿನ ಹೊಸೂರು ಸಮೀಪ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುರುವಾರ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದಿಂದ ನಡೆದ 12ನೇ ವರ್ಷದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಮಾತನಾಡಿದರು.
ಮಲೆನಾಡಿನಲ್ಲಿಯೇ ಈ ಬಾರಿ ಶೇ 60 ಮಳೆ ಕಡಿಮೆ ಆಗಿರುವ ಪರಿಣಾಮ ಕಾಫಿ ಹಾಗೂ ಕಾಳುಮೆಣಸಿಗೆ ಅಪಾರ ಹಾನಿ ಉಂಟಾಗಿದೆ. ಈ ಬಗ್ಗೆ ಈಗಾಗಲೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿಶೇಷ ಪ್ಯಾಕೇಜ್‌ಗೆ ಒತ್ತಾಯ ಮಾಡಲಾಗಿದೆ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಕೊಡಗು, ಹಾಸನ, ಚಿಕ್ಕಮಗಳೂರು ಮಲೆನಾಡಿನ ಈ ಭಾಗದ ಕಾಫಿ ಬೆಳೆಗಾರರು ಲಕ್ಷಾಂತರ ಜನ ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಕಾಫಿ ಬೆಳೆಗಾರರ ವಿಷಯದಲ್ಲಿ ಸರ್ಕಾರ ಮೃದುಧೋರಣೆ ಹೊಂದಬೇಕು. ಕೇಂದ್ರ ಸರ್ಕಾರದ ಮೇಲೆ ಮಾತ್ರ ಬೆಟ್ಟು ಮಾಡದೆ, ರಾಜ್ಯ ಸರ್ಕಾರ ಕೂಡ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ, ಜಿಲ್ಲಾ ಪ್ಲಾಂಟರ್ಸ್ ಸಂಘ 49 ವರ್ಷ ಪೂರ್ಣಗೊಳಿಸಿದೆ. ಸಂಘದ ಹಿಂದಿನ ಪದಾಧಿಕಾರಿಗಳ ಶ್ರಮದ ಪರಿಣಾಮ ಸಂಘದಿಂದ ಬೆಳೆಗಾರರಿಗೆ ಸಾಕಷ್ಟು ಉಪಯೋಗ ಆಗಿದೆ ಎಂದರು.
25 ವಿವಿಧ ಕಂಪನಿಗಳ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. 8 ಸಾವಿರ ಕಪ್ ಕಾಫಿಯನ್ನು ಕುಂಬರಡಿ ಕಾಫಿಯ ಅಶೋಕ್ ಉಚಿತವಾಗಿ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
2022ರ ಮಿಸಸ್ ಇಂಡಿಯಾ ವಿಜೇತೆ ಹೇಮಾ ನಿರಂಜನ್, 2026ರ ಮಿಸ್ ಇಂಡಿಯಾದ ರನ್ನರ್ ಕುಮಾರಿ ಸಚಿಸ್ಮಯ, ರಾಜ್ಯ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಬಿ.ಎಂ. ನಾಗರಾಜ್, ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಟಿ.ಪಿ ಸುರೇಂದ್ರ, ಎಚ್‌ಡಿಪಿಎ ಟ್ರಸ್ಟ್ ಅಧ್ಯಕ್ಷ ಕೆ.ಎನ್. ಸುಬ್ರಹ್ಮಣ್ಯ, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್, ಸಿ.ಎಸ್. ಮಹೇಶ್, ನಂದಿತಾ ಧರ್ಮರಾಜ್ ಇದ್ದರು.