ಕೆಜಿಎಫ್‌ನಲ್ಲಿ ಪಿಂಚಣಿದಾರರಿಂದ ಪೋಸ್ಟ್‌ಮ್ಯಾನ್‌ ಹಣ ವಸೂಲಿ!

ಕೆಜಿಎಫ್‌ನಲ್ಲಿ ಪಿಂಚಣಿದಾರರಿಂದ ಪೋಸ್ಟ್‌ಮ್ಯಾನ್‌ ಹಣ ವಸೂಲಿ!

ಕೆಜಿಎಫ್‌ನಲ್ಲಿ ಪಿಂಚಣಿದಾರರಿಂದ ಪೋಸ್ಟ್‌ಮ್ಯಾನ್‌ ಹಣ ವಸೂಲಿ!

ಕೆಜಿಎಫ್‌: ಪಿಂಚಣಿ ವಿತರಿಸುವಾಗ ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್‌ಗಳು ಪಿಂಚಣಿದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಹಲವು ವರ್ಷಗಳಿಂದಲೂ ಪಿಂಚಣಿದಾರರು ರಾಬರ್ಟಸನ್‌ಪೇಟೆಯ ಅಂಚೆ ಕಚೇರಿಯಲ್ಲಿ ಪಿಂಚಣಿ ಪಡೆಯುತ್ತಿದ್ದರು. ಆಯಾ ಬಡಾವಣೆಯ ಪೋಸ್ಟ್‌ಮ್ಯಾನ್‌ಗಳು ಅಂಚೆ ಕಚೇರಿ ಆವರಣದಲ್ಲಿಯೇ ಪಿಂಚಣದಾರರಿಗೆ ಹಣ ನೀಡುತ್ತಿದ್ದರು. ಪಿಂಚಣಿ ನೀಡುವಾಗ ಪ್ರತಿ ಪಿಂಚಣಿದಾರರಿಂದ ₹50ರಿಂದ ₹200 ವಸೂಲಿ ಮಾಡುತ್ತಾರೆ ಎಂಬ ದೂರು ಕೇಳಿಬಂದಿದ್ದವು.

ದೂರಿನ ಬೆನ್ನಿಗೆ ಎಚ್ಚೆತ್ತ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಪಿಂಚಣಿದಾರರ ಮನೆಗೆ ಹೋಗಿ ಪಿಂಚಣಿ ನೀಡುವುದು ಕಡ್ಡಾಯ ಎಂದು ಕಳೆದ ವಾರ ಸೂಚಿಸಿದ್ದರು.

ಇಲಾಖೆಯ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಬಹುತೇಕ ಪಿಂಚಣಿದಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಐದಾರು ಕಿ.ಮೀ ಸುತ್ತಳತೆಯ ಎಲ್ಲ ಪಿಂಚಣಿದಾರರು ಒಂದೆಡೆ ಸೇರಿ ಹಣ ಪಡೆಯುತ್ತಿದ್ದರು. ಅವರ ಜೊತೆಗೆ ಅವರ ಕುಟುಂಬದ ಸದಸ್ಯರು ಕೂಡ ಬರುತ್ತಿದ್ದರು. ಪಿಂಚಣಿ ಹಣವನ್ನು ನಿಖರವಾಗಿ ತಿಳಿದು, ಅವರೇ ಪಡೆದುಕೊಳ್ಳುತ್ತಿದ್ದರು.

ಪಿಂಚಣಿದಾರರು ತಾತ್ಕಾಲಿಕವಾಗಿ ಬೇರೆ ಸ್ಥಳದಲ್ಲಿ ಇದ್ದರೂ, ಪಿಂಚಣಿ ಪಡೆಯುವಾಗ ಅಂಚೆ ಕಚೇರಿಗೆ ಬಂದು ಹಣ ತೆಗೆದುಕೊಳ್ಳುತ್ತಿದ್ದರು. ಈಗ ಪೋಸ್ಟ್‌ಮ್ಯಾನ್‌ ಬರುವ ತನಕ ಇಲಾಖೆಗೆ ನೀಡಿದ ನಿರ್ದಿಷ್ಟ ವಿಳಾಸದಲ್ಲಿಯೇ ಕಾಯುತ್ತ ಕುಳಿತಿರಬೇಕು. ಅವರ ಜೊತೆಗೆ ಅವರ ಸಹಾಯಕರು ಕೂಡ ಇರಬೇಕಾದ ಅನಿವಾರ್ಯತೆ ಉಂಟಾಗಿದೆ.

ಬಡಾವಣೆಗೆ ಬಂದರೂ, ಮನೆ ಮನೆಗೆ ಬಾರದೆ, ಬಡಾವಣೆಯ ಯಾವುದೋ ಒಂದು ಭಾಗದಲ್ಲಿ ಕುಳಿತು ಅಲ್ಲಿಗೆ ಎಲ್ಲರನ್ನೂ ಕರೆಸಿಕೊಳ್ಳುತ್ತಾರೆ. ಅಲ್ಲಿ ಕೂಡ ಹಣ ವಸೂಲಿ ಮಾಡುತ್ತಾರೆ. ಅಂಚೆ ಕಚೇರಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಹಣ ವಸೂಲಿ ಮಾಡುತ್ತಿದ್ದ ಪೋಸ್ಟ್‌ಮ್ಯಾನ್‌ಗಳು ಇದೀಗ ದೂರದ ಬಡಾವಣೆಗಳಲ್ಲಿ ಹಣ ವಸೂಲಿ ಮಾಡುವುದು ಇನ್ನೂ ಸುಲಭ ಎಂದು ಪಿಂಚಣಿದಾರರು ಅವಲತ್ತುಕೊಂಡಿದ್ದಾರೆ.

ಅಂಚೆ ಕಚೇರಿಯಲ್ಲಿಯೇ ಹಣ ಕೊಡಿ. ಆದರೆ ಪಿಂಚಣಿ ಹಣದಲ್ಲಿ ಕಮಿಷನ್‌ ಹೆಸರಿನಲ್ಲಿ ಲಂಚ ಪಡೆಯಬೇಡಿ ಎಂಬುದು ಪಿಂಚಣಿದಾರರ ಅಳಲಾಗಿದೆ.

ಪಿಂಚಣಿ ವಿತರಣೆಯಿಂದ ಪೋಸ್ಟ್‌ಮ್ಯಾನ್‌ಗಳಿಗೆ ಹೆಚ್ಚಿನ ಹೊರೆ ಆಗುತ್ತಿದೆ. ಪತ್ರ ವಿತರಣೆ ಮಾಡುವುದು ಅವರ ಪ್ರಥಮ ಆದ್ಯತೆ. ಸ್ಪೀಡ್‌ ಪೋಸ್ಟ್‌ ಸೇರಿದಂತೆ ಇತರ ಪತ್ರ ವಿತರಣೆ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಅಂಚೆ ಕಚೇರಿ ಕೌಂಟರ್‌ಗಳಲ್ಲಿಯೇ ಪಿಂಚಣಿ ವಿತರಣೆ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ. ಅಂಚೆ ಕಚೇರಿಯಲ್ಲಿ ಹಣ ವಿತರಿಸುವಾಗ ಸಿ.ಸಿ.ಟಿವಿ ಕ್ಯಾಮೆರಾ ಮುಂಭಾಗದಲ್ಲಿಯೇ ವಿತರಿಸಬೇಕು ಎಂದು ಸಹ ಸೂಚಿಸಲಾಗಿದೆ. ಹಣ ವಸೂಲಿ ಮಾಡುವ ದೂರಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಂಚೆ ಅಧಿಕಾರಿಗಳು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ