
ಶಿಕ್ಷಕರ ಪ್ರಯತ್ನಕ್ಕೆ ಪ್ರಯತ್ನಗಳಿಗೆ ಸಹಕಾರ ನೀಡಲು ಸದಾ ಸಿದ್ಧ: ವಸಂತ ನಾಯಕ
ಅಂಕೋಲಾ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಪರಿಶ್ರಮ ಹಾಗೂ ಶಿಕ್ಷಣದ ಕನಸಿನ ಫಲವಾಗಿ ರೂಪುಗೊಂಡ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯವು ಜಿಲ್ಲೆಯ ಅನೇಕ ಪ್ರತಿಭಾನ್ವಿತರನ್ನು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರ ಪ್ರಯತ್ನಗಳಿಗೆ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ ಎಂದು ಶೆಟಗೇರಿ ವಿದ್ಯಾಲಯದ ಅಧ್ಯಕ್ಷ ವಸಂತ ನಾಯಕ ಜಮಗೋಡ ಹೇಳಿದರು.
ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಹಾಗೂ ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಕ್ರಾಂತಿ ಮೈದಾನದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕಿ ಲತಾ ನಾಯಕ ಮಾತನಾಡಿ, ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಇದೇ ಮೈದಾನದಲ್ಲಿ ಬಾಲ್ಯದಲ್ಲಿ ಆಟವಾಡಿದ ನೆನಪುಗಳಿವೆ. ಇಂದು ಇದೇ ಮೈದಾನದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಯುವುದಕ್ಕೆ ಅಧ್ಯಕ್ಷತೆ ವಹಿಸಿರುವುದು ಸಂತಸ ತಂದಿದೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರ ಸಹಕಾರ ಸ್ಮರಣೀಯ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಡಯಟ್ ಪ್ರಾಂಶುಪಾಲ ಎನ್.ಆರ್. ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ರಾಜ್ಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಗಿರೀಶ ನಾಯಕ, ರಾಜೇಶ ನಾಯಕ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯಕ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಂಜುನಾಥ ಎನ್., ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪ್ರಕಾಶ ನಾಯ್ಕ, ಮಹೇಶ ಶೆಟ್ಟಿ ಹಾಗೂ ವೆಂಕಟೇಶ ನಾಯಕ ಇದ್ದರು.