ಹಳೇಬೀಡಿನಲ್ಲಿ ಬೀದಿನಾಯಿಗಳ ಉಪಟಳ, ಭಯದಲ್ಲಿ ದೇಗುಲ ಪ್ರವೇಶ

ಹಳೇಬೀಡಿನಲ್ಲಿ ಬೀದಿನಾಯಿಗಳ ಉಪಟಳ, ಭಯದಲ್ಲಿ ದೇಗುಲ ಪ್ರವೇಶ

ಹಳೇಬೀಡಿನಲ್ಲಿ ಬೀದಿನಾಯಿಗಳ ಉಪಟಳ, ಭಯದಲ್ಲಿ ದೇಗುಲ ಪ್ರವೇಶ

ಹಳೇಬೀಡು: ವಿಶ್ವ ಪರಂಪರೆಯ ಪ್ರವಾಸಿ ತಾಣವಾಗಿರುವ ಹಳೇಬೀಡಿನಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ಪ್ರವಾಸಿಗರು ಭಯದಲ್ಲಿ ಹೊಯ್ಸಳೇಶ್ವರ ದೇವಾಲಯ ಪ್ರವೇಶಿಸುವಂತಾಗಿದೆ.

ದೇವಾಲಯ ಪ್ರವೇಶ ದ್ವಾರದಲ್ಲಿ ದಿನವಿಡೀ ನೂರಾರು ನಾಯಿಗಳು ಗುಂಪು ಕಟ್ಟಿಕೊಂಡು ಕಚ್ಚಾಡುತ್ತಿರುತ್ತವೆ. ನಾಯಿ ಹಾವಳಿ ತಡೆಗಟ್ಟಲು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಪ್ರವಾಸಿಗರು ಕೈನಲ್ಲಿ ಇಟ್ಟುಕೊಂಡು ಬರುವ ತಿಂಡಿಯ ಕೈಚೀಲಗಳಿಗೆ ನಾಯಿಗಳು ಬಾಯಿ ಹಾಕುತ್ತಿವೆ. ಒಂದು ವೇಳೆ ಆಹಾರ ಪದಾರ್ಥ ಕೈನಲ್ಲಿದ್ದರೆ ನಾಯಿಯಿಂದ ಸಂರಕ್ಷಿಸಿಕೊಳ್ಳುವುದು ಸುಲಭ ಸಾಧ್ಯವಾಗಿಲ್ಲ. ತಿಂಡಿಗಳನ್ನು ನಾಯಿಗಳು ಕಿತ್ತೊಯ್ಯುತ್ತವೆ. ಕಚ್ಚಿದರೆ ಎಂಬ ಭಯ ಪ್ರವಾಸಿಗರನ್ನು ಕಾಡುತ್ತಿದೆ. ನಾಯಿಗಳ ಗುಂಪು ನೋಡಿ ಪ್ರವಾಸಿಗರು ಭಯಪಟ್ಟರೆ, ಜೋರಾಗಿ ಬೊಗಳುತ್ತ ಹಿಂಬಾಲಿಸುತ್ತವೆ.

ನಾಯಿಗಳ ಅರಚಾಟದಿಂದ ಪ್ರವಾಸಿಗರು ಜೀವ ಬಿಗಿಹಿಡಿದು ಹೊಯ್ಸಳೇಶ್ವರ ದೇವಾಲಯದ ವೀಕ್ಷಣೆ ಮಾಡಿ ಹೊರಬರುವಂತಾಗಿದೆ. ಸಾಕಷ್ಟು ಪ್ರವಾಸಿಗರು ತಮ್ಮ ವಾಹನದಲ್ಲಿ ಕುಳಿತು ಪ್ರಯಾಣ ಮುಂದುವರಿಸುವವರೆಗೂ ಭಯದಲ್ಲಿರುತ್ತಾರೆ ಎನ್ನುತ್ತಾರೆ ವಾಹನ ಪಾರ್ಕಿಂಗ್ ಗುತ್ತಿಗೆದಾರ ಭೈರೇಶ.

ಜೈನ ಬಸದಿ ಬಳಿಯೂ ನಾಯಿ ಹಾವಳಿ ಹೆಚ್ಚಾಗಿದೆ. ನಾಯಿಗಳು ಪ್ರವಾಸಿಗರ ಮೇಲೆರಗುತ್ತಿವೆ. ನಾಯಿಗಳು ಜೈನ ಬಸದಿಯ ಮುಂಭಾಗದ ರಸ್ತೆಯಲ್ಲಿ ಮೋಟಾರ್ ಬೈಕ್ ಸವಾರರನ್ನು ಅಟ್ಟಿಸಿಕೊಂಡು ಹೋಗುವುದು ಮಾಮೂಲಿಯಾಗಿದೆ.

ಗ್ರಾಮದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸ್ಥಳೀಯರಲ್ಲಿಯೂ ಆತಂಕ ಹೆಚ್ಚಾಗಿದೆ. ನಾಯಿಗಳು ಗುಂಪಾಗಿ ಓಡಾಡುವುದರಿಂದ ಜನರ ಸುರಕ್ಷತೆಯ ಕುರಿತು ಪ್ರಶ್ನೆಗಳು ಎದುರಾಗುತ್ತಿವೆ. ರಸ್ತೆಯಲ್ಲಿ ಕಚ್ಚಾಡುವ ನಾಯಿಗಳು ವಾಹನಗಳಿಗೆ ಅಡ್ಡಬಂದು ಅಪಘಾತ ತಂದೊಡ್ಡುತ್ತಿವೆ. ಹೊಯ್ಸಳೇಶ್ವರ ದೇವಾಲಯ, ಜೈನ ಬಸದಿ ಹಾಗೂ ದ್ವಾರಸಮುದ್ರ ಕೆರೆ ಸುತ್ತಮುತ್ತ ಒಂದು ಸಾವಿರ ಬೀದಿನಾಯಿಗಳು ಇರಬಹುದು ಎಂದು ಅಂದಾಜು ಮಾಡಲಾಗಿದೆ.

ನಾಯಿಗಳ ನಿಯಂತ್ರಣಕ್ಕೆ ಸಮಗ್ರ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು. ಅಹಿತಕರ ಘಟನೆ ಸಂಭವಿಸುವ ಮೊದಲೇ ಅಧಿಕಾರಿ ವರ್ಗ ತುರ್ತು ಕ್ರಮ ತೆಗೆದುಕೊಳ್ಳಬೇಕು. ಗ್ರಾಮದಲ್ಲಿ ಬೀದಿನಾಯಿ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವುಗಳಿಗೂ ಸುರಕ್ಷತೆ ಇಲ್ಲದಂತಾಗಿದೆ. ಬಸ್‌, ಕಾರು, ಲಾರಿಗಳ ಚಕ್ರಕ್ಕೆ ಸಿಕ್ಕಿ ಕೆಲ ನಾಯಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ನಾಯಿ ಮರಿಗಳ ಪಾಡು ಹೇಳಲು ಅಸಾಧ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

ವಿವಿಧೆಡೆಯಿಂದ ಹಳೇಬೀಡಿಗೆ ನಾಯಿ ಸಾಗಾಟ

ಕಾಟ ತಾಳಲಾರದೇ ವಿವಿಧ ಊರಿನಿಂದ ಸೆರೆಹಿಡಿದ ನಾಯಿಗಳನ್ನು ಹಳೇಬೀಡಿಗೆ ತಂದು ಬಿಡುತ್ತಿದ್ದಾರೆ. ದ್ವಾರಸಮುದ್ರ ಕೆರೆಏರಿ, ಬೇಲೂರು, ಹಗರೆ, ಜಾವಗಲ್ ರಸ್ತೆಗಳಿಗೆ ಹೊಸ ನಾಯಿಗಳ ಪ್ರವೇಶ ಆಗುತ್ತಿದೆ. ಹೀಗೆ ಹಳೇಬೀಡಿಗೆ ಬಂದಿರುವ ನಾಯಿಗಳಲ್ಲಿ ಅರ್ಧದಷ್ಟು ಹೊಯ್ಸಳೇಶ್ವರ ದೇವಾಲಯ ಸೇರಿವೆ ಎನ್ನುತ್ತಾರೆ ಜನ.

ಬೇಲೂರು ರಸ್ತೆಯ ಕಲ್ಲಳ್ಳಿ ಗುಡ್ಡಕ್ಕೆ ಬಿಟ್ಟಿರುವ ಪರ ಊರಿನ ನಾಯಿಗಳಲ್ಲಿ ಸಾಕಷ್ಟು ನಾಯಿಗಳು ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ ಸೇರಿವೆ. ಒಮ್ಮೊಮ್ಮೆ ನಾಯಿಗಳು ವಿದ್ಯಾರ್ಥಿಗಳ ಮೇಲೆರಗುತ್ತಿವೆ. ಡಿಗ್ರಿ ಕಾಲೇಜು ಬಳಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಾಗೂ ಪಾದಚಾರಿಗಳನ್ನು ನಾಯಿಗಳು ಅಟ್ಟಾಡುತ್ತಿವೆ ಎನ್ನುತ್ತಾರೆ ವಿದ್ಯಾರ್ಥಿ ಮನೋಜ್.

ನಾಯಿ ಸೆರೆ ಹಿಡಿದು ಹೊರಸಾಗಿಸಿದರೂ ಸಾಕಷ್ಟು ನಾಯಿ ಪುನಃ ಹಿಂದಿರುಗುತ್ತವೆ. ಸಂತಾನ ಶಕ್ತಿಹರಣ ಚಿಕಿತ್ಸೆ ಕೊಡಿಸಬಹುದು. ಆದರೆ ಹೊಸದಾಗಿ ನಿರಂತರವಾಗಿ ನಾಯಿಗಳನ್ನು ತಂದು ಬಿಡುವುದರಿಂದ ಕೆಲಸ ಪರಿಪೂರ್ಣ ಆಗುವುದಿಲ್ಲ. ಬೀದಿನಾಯಿ ಹಾವಳಿ ತಡೆಗಟ್ಟುವುದು ದೊಡ್ಡ ಸಮಸ್ಯೆ ಆಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸಿಬ್ಬಂದಿ.

ದೇವಾಲಯ ಒಳ ಪ್ರವೇಶಿಸುವಾಗ ಬೋಗುಳುತ್ತ ಹಿಂಬಾಲಿಸಿದ ಬೀದಿನಾಯಿಗಳು ಹೊರಬರುವಾಗಲು ಬೊಗಳುತ್ತ, ದಾಳಿ ಮಾಡುವಂತೆ ಹಿಂದೆ ಬಂದವು ಎಂದು ಶಿವಮೊಗ್ಗದ ಪ್ರವಾಸಿಗ ನಾಗರಾಜು ಬೇಸರ ವ್ಯಕ್ತಪಡಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ