ಹಿರಿಯ ನಾಗರಿಕರು ಸಮಾಜದ ಅನುಭವದ ಕಣಜಗಳು ಮತ್ತು ಮಾರ್ಗದರ್ಶಕರು

ಹಿರಿಯ ನಾಗರಿಕರು ಸಮಾಜದ ಅನುಭವದ ಕಣಜಗಳು ಮತ್ತು ಮಾರ್ಗದರ್ಶಕರು

ಹಿರಿಯ ನಾಗರಿಕರು ಸಮಾಜದ ಅನುಭವದ ಕಣಜಗಳು ಮತ್ತು ಮಾರ್ಗದರ್ಶಕರು

ಹಾಸನ: ಹಿರಿಯ ನಾಗರಿಕರು ನಮ್ಮ ಸಮಾಜದ ಅನುಭವದ ಕಣಜಗಳು ಮತ್ತು ಮಾರ್ಗದರ್ಶಕರು. ಅವರ ಪರಿಶ್ರಮ, ತ್ಯಾಗ ಮತ್ತು ಜ್ಞಾನದ ಮೇಲೆ ಇಂದಿನ ಸಮಾಜ ನಿರ್ಮಾಣವಾಗಿದ್ದು, ಹಿರಿಯರನ್ನು ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ. ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆಯ ನಾಗರಿಕರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಮನುಷ್ಯ ಹುಟ್ಟುತ್ತಲೇ ಬಾಲ್ಯದಿಂದ ಒಂದೊಂದು ಹಂತ ದಾಟುತ್ತ ಜವಾಬ್ದಾರಿಗಳನ್ನು ಹೆಚ್ಚಿಸಿಕೊಂಡು ತನ್ನ ತಂದೆ– ತಾಯಿಯನ್ನೇ ಕಡೆಗಣಿಸುತ್ತ ತನ್ನದೇ ಆದ ಪ್ರತ್ಯೇಕ ಕುಟುಂಬವನ್ನು ರಚನೆ ಮಾಡಿಕೊಳ್ಳುತ್ತಾನೆ. ಹಿರಿಯ ನಾಗರಿಕರಿಗೆ ಒಂಟಿತನ ಕಾಡದಂತೆ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು. ವಯಸ್ಸು ಹೆಚ್ಚಾದಂತೆ ಆಶ್ರಯದ ಅವಶ್ಯಕತೆ ಹೆಚ್ಚಾಗಿರುತ್ತದೆ. ಸರ್ಕಾರವು ತಂದೆ– ತಾಯಿಯರ ಹಾಗೂ ಹಿರಿಯ ನಾಗರಿಕರ ಪಾಲನೆ ಪೋಷಣೆ ಶ್ರೇಯೋಭಿವೃದ್ಧಿಗೆ 2007ರಲ್ಲಿ ಅಧಿನಿಯಮವನ್ನು ಜಾರಿಗೆ ತರುವ ಮೂಲಕ ಹಿರಿಯ ನಾಗರಿಕರಿಗೆ ಗೌರವ ನೀಡುವಂತೆ ತಿಳಿಸಿದೆ ಎಂದರು.

ಸ್ವತಃ ತಾವೇ ದುಡಿದು ನಿರ್ಮಿಸಿದ ಮನೆಯನ್ನು ಬಿಟ್ಟು ಸಾಕಷ್ಟು ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದು, ದುಃಖಕರ ಸಂಗತಿಯಾಗಿದೆ. ಮಕ್ಕಳಿಂದ ಹಿರಿಯ ನಾಗರಿಕರಿಗೆ ಜೀವನ ನಿರ್ವಹಣೆ ಪಡೆಯುವ ಹಕ್ಕು ಅಂದರೆ ಸ್ವಂತ ಆದಾಯ ಅಥವಾ ಆಸ್ತಿಯಿಂದ ಜೀವನ ನಡೆಸಲು ಸಾಧ್ಯವಾಗದ ಹಿರಿಯ ನಾಗರಿಕರು ತಮ್ಮ ಮಕ್ಕಳಿಂದ ನಿರ್ವಹಣೆ ಕೇಳಬಹುದು ಎಂದು ತಿಳಿಸಿದರು.

ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಯಾರಿಗಾದರೂ ವರ್ಗಾಯಿಸಿದ ನಂತರ, ಆ ವ್ಯಕ್ತಿ ಅವರನ್ನು ನೋಡಿಕೊಳ್ಳದಿದ್ದರೆ, ಕೆಲವು ಸಂದರ್ಭಗಳಲ್ಲಿ ಆ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸುವ ಅವಕಾಶ ಕಾನೂನಿನಲ್ಲಿ ಇದೆ. ಪ್ರತಿಯೊಬ್ಬರೂ ಹಿರಿಯ ನಾಗರಿಕರಿಗೆ ಕಾನೂನಿನ ಹಕ್ಕುಗಳನ್ನು ನೆನಪಿಸಬೇಕು ಎಂದು ತಿಳಿಸಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ಗಂಗಮ್ಮ ಬಿ.ಸಿ, ನಿವೃತ್ತ ನೌಕರರ ಸಂಘದ ಅನಂತರಾಮ್, ನಿವೃತ್ತ ನೌಕರರ ಸಂಘದ ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಯೋಗೀಶ್ ಎಂ.ಎಂ. ಉಪಸ್ಥಿತರಿದ್ದರು.

‘ಹಿರಿಯರಿಗೆ ಗೌರವ, ಸುರಕ್ಷತೆ ನೀಡಿ’

ಹಿರಿಯ ನಾಗರಿಕರಿಗೆ ಕಾನೂನುಗಳಲ್ಲಿ ನೀಡಿರುವ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ, ಕುಟುಂಬ ಮತ್ತು ಸಮಾಜವು ಅವರಿಗೆ ಪ್ರೀತಿ, ಗೌರವ ಮತ್ತು ಸುರಕ್ಷತೆ ನೀಡಬೇಕು ಎಂದು ಹಾಸನ ತಹಶೀಲ್ದಾರ್ ಗೀತಾ ತಿಳಿಸಿದರು.

ಹುಟ್ಟಿನಿಂದ ಮರಣದವರೆಗೆ ಎಲ್ಲ ಪ್ರಮಾಣಪತ್ರಗಳು ಕಂದಾಯ ಇಲಾಖೆಯಲ್ಲಿ ಸಿಗುವುದರ ಜೊತೆಗೆ ಹಿರಿಯ ನಾಗರಿಕರಿಗೆ ಪಿಂಚಣಿ, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ಪಡೆಯಲು ಅವರಿಗೆ ಸಹಾಯವಾಗಿದೆ ಎಂದರು.

60 ವರ್ಷ ಮೇಲಿನ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯಗಳು ದೊರಕುತ್ತವೆ. ಸೌಲಭ್ಯಗಳನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ