
ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯದಿದ್ದರೆ ಮುತ್ತಿಗೆ: ಪಾಟೀಲ
ಕಲಬುರಗಿ: ‘ಚಿತ್ತಾಪುರ ತಾಲ್ಲೂಕಿನ ಚಾಮನೂರ–ನರಿಬೋಳ ರಸ್ತೆಯಲ್ಲಿರುವ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಅ.5ರೊಳಗೆ ಟೆಂಡರ್ ಕರೆಯದಿದ್ದರೆ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಪಿಡಬ್ಲ್ಯೂಡಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು’ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಎಚ್ಚರಿಸಿದರು.
‘ರಾಜಕಾರಣಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ 9 ವರ್ಷಗಳಿಂದ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಜಿಲ್ಲಾಡಳಿತ ಮತ್ತು ಸಚಿವ ಡಾ.ಅಜಯ್‌ಸಿಂಗ್ ನೀಡಿದ ಭರವಸೆಯಂತೆ ಕಳೆದ ವರ್ಷವೇ ಸೇತುವೆ ಪೂರ್ಣಗೊಂಡು ಉದ್ಘಾಟನೆ ಆಗಬೇಕಿತ್ತು. ಆದರೆ, ಕಳೆದ ವರ್ಷ ಪ್ರವಾಹ ಬಂದಾಗ, ಅರ್ಧ ಪೂರ್ಣಗೊಂಡಿದ್ದ ಸೇತುವೆಯೂ ನೀರಿನಲ್ಲಿ ಕೊಚ್ಚಿಹೋಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಸೇತುವೆ ನಿರ್ಮಾಣವಾಗದ ಕಾರಣ ಪ್ರತಿನಿತ್ಯ ಓಡಾಡುವ ಸಾರ್ವಜನಿಕರು, ರೈತರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಹೆರಿಗೆ ಸೇರಿದಂತೆ ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಪರದಾಡುವಂತಾಗುತ್ತದೆ’ ಎಂದರು.
‘ಕಾಮಗಾರಿಗಾಗಿ ರೈತರ ಜಮೀನು ಸ್ವಾಧೀನ ಮತ್ತು ರೈತರಿಗೆ ಪರಿಹಾರದ ಹಣ ಪಾವತಿಯೂ ಆಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಗಾಗಿ ಚಾಮನೂರು ಗ್ರಾಮದ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡು ಹಸ್ತಾಂತರಿಸುವಂತೆ ಪತ್ರ ಬರೆದಿರುವುದು ಆಶ್ಚರ್ಯದ ಸಂಗತಿ’ ಎಂದು ದೂರಿದರು. ಪ್ರಮುಖರಾದ ಲಕ್ಷ್ಮೀಕಾಂತ ಸ್ವಾದಿ, ಮಹೇಶ ಕೆಂಭಾವಿ, ಮಂಜುನಾಥ ಹಾಜರಿದ್ದರು.