
ಮಡಿಕೇರಿ ದಸರೆಯಲ್ಲಿ ‘ಮಣಿಕಂಠನಿಂದ ಮಹಿಷಿ ಸಂಹಾರ’ ಪ್ರದರ್ಶನ
ಮಡಿಕೇರಿ: ‘ಬೆಳಕಿನ ದಸರೆ’ಯಲ್ಲಿ ಪೇಟೆ ಶ್ರೀರಾಮಮಂದಿರ, ದೇಚೂರು ರಾಮಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ ದೇಗುಲ, ಕಂಚಿಕಾಮಾಕ್ಷಮ್ಮ ಮುತ್ತುಮಾರಿಯಮ್ಮ ಬಾಲಮಂಡಳಿಯ ನಂತರ 6ನೇಯದಾಗಿ ಮಂಟಪಗಳನ್ನು ಹೊರಡಿಸಲು ಆರಂಭಿಸಿದ್ದು ಇಲ್ಲಿನ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿ. ಈಗ ಈ ಸಮಿತಿಯು ತನ್ನ 53ನೇ ವರ್ಷದ ಪ್ರಸ್ತುತಿಗೆ ಭವ್ಯ ಮಂಟಪ ನಿರ್ಮಾಣದಲ್ಲಿ ತೊಡಗಿದೆ.
ಈ ಬಾರಿ ಕೇರಳದ ವಾದ್ಯಗೋಷ್ಠಿ, ಚೆಂಡೆ ವಾದ್ಯ, ನಾದಸ್ವರ ಹಾಗೂ ಮತ್ತಿತ್ತರೆ ಕಲಾತಂಡಗಳನ್ನೂ ಕರೆಸಲು ನಿರ್ಧರಿಸಿದ್ದು, ಈ ಮಂಪಟದ ಮೆರವಣಿಗೆಗೆ ಸಾಂಸ್ಕೃತಿಕ ರಂಗು ಇರಲಿದೆ.
‘ಮಣಿಕಂಠನಿಂದ ಮಹಿಷಿಯ ಸಂಹಾರ’ ಎಂಬ ಕಥಾನಕವನ್ನು ಸಮಿತಿಯು ಪ್ರಸ್ತುತಪಡಿಸಲಿದೆ. ಇದಕ್ಕಾಗಿ ಮೈಸೂರು ಸಮೀಪದ ಉದ್ಭೂರಿನಲ್ಲಿ ಮಹದೇವಪ್ಪ ಅಂಡ್ ಸನ್ಸ್ ಅವರು 24 ಕಲಾಕೃತಿಗಳ ರಚನೆಯಲ್ಲಿ ತೊಡಗಿದ್ದಾರೆ.
‘ಇವೆಂಟ್ ಟೆಕ್ ಅವರ ಸ್ಟುಡಿಯೊ, ಧ್ವನಿವರ್ಧಕ, ಮಂಜುನಾಥ್, ಕಲಾಸಾಗರ ಅವರಿಂದ ಕಲಾಕೃತಿಗಳ ವಸ್ತ್ರ, ಬಣ್ಣ, ಅಬ್ದುಲ್ ಖಾದರ್ ಅವರ ವಸ್ತ್ರವಿನ್ಯಾಸ, ಸಂಸ್ಥೆಯ ಅವಿನ್ ಅವರಿಂದ ಟ್ರಾಕ್ಟರ್ ಸೆಟ್ಟಿಂಗ್ಸ್, ಎ.ಆರ್.ಮಂಜುನಾಥ್ ಅವರ ಚಲನವಲನಗಳಿದ್ದು, ದಿಂಡಿಗಲ್‌ನಿಂದ ಆರ್ಚ್ ಬೋರ್ಡ್ ತರಿಸಲಾಗುತ್ತಿದೆ. ಅಂದಾಜು ₹ 30 ಲಕ್ಷ ವ್ಯಯಿಸಲಾಗುತ್ತಿದೆ’ ಎಂದು ಸಮಿತಿ ಅಧ್ಯಕ್ಷ ಸಿ.ಪಿ.ಹೇಮಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳೆದ ವರ್ಷ ಈ ಸಮಿತಿಯು ‘ಶಿವಪುರಾಣದಿಂದ ಆಯ್ದ ಕಥಾಭಾಗ ಪರಶಿವನಿಂದ ಜಲಂಧರನ ವಧೆ’ ಕಥಾ ಪ್ರಸಂಗವು ವೈಭವಯುತವಾಗಿ ಮೂಡಿ ಬಂದಿತ್ತು. ಇದಕ್ಕೂ ಹಿಂದಿನ ವರ್ಷಗಳಲ್ಲಿ ಕದಂಬ ಕೌಶಿಕೆ, ಅಂಧಕಾಸುರನ ವಧೆ ಕಥಾಪ್ರಸಂಗಗಳು ಸಹ ಜನಮನ ಸೂರೆಗೊಂಡಿದ್ದವು.