
ಕ್ಯಾನ್ಸರ್ ಔಷಧ: ಶೇ 70ರಷ್ಟು ಬೆಲೆ ತಗ್ಗುವ ಸಾಧ್ಯತೆ
ನವದೆಹಲಿ (ಪಿಟಿಐ): ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು (ಎನ್‌ಪಿಪಿಎ) 137 ನಿಗದಿತವಲ್ಲದ ಕ್ಯಾನ್ಸರ್ ಚಿಕಿತ್ಸಾ ಔಷಧಗಳ ಲಾಭಾಂಶವನ್ನು ಶೇ 30ಕ್ಕೆ ಮಿತಿಗೊಳಿಸಿದೆ.
ಈ ಆದೇಶವು ನವೆಂಬರ್ 9ರಿಂದ ಜಾರಿಗೆ ಬರಲಿದೆ. ಇದರಿಂದ ಜೀವರಕ್ಷಕ ಔಷಧಗಳ ಚಿಲ್ಲರೆ ಬೆಲೆಯು ಅವುಗಳ ಸದ್ಯದ ಬೆಲೆ ಶ್ರೇಣಿ ಆಧರಿಸಿ ಶೇ 70ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ (ಡಿಜಿಎಚ್‌ಎಸ್) ಅಡಿಯಲ್ಲಿ ರಚಿಸಲಾದ ತಜ್ಞರ ಸಮಿತಿ ನೀಡಿದ ಶಿಫಾರಸುಗಳ ಆಧಾರದ ಮೇಲೆ ಔಷಧಗಳ ಲಾಭಾಂಶಕ್ಕೆ ಮಿತಿ ಹೇರಲಾಗಿದೆ.
ಔಷಧ ತಯಾರಕರು ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಷ್ಕೃತ ದರಪಟ್ಟಿ ಪ್ರಕಟಿಸಬೇಕು, ಈ ಬಗ್ಗೆ ಆಸ್ಪತ್ರೆಗಳಲ್ಲಿ ಹಾಗೂ ಔಷಧ ಅಂಗಡಿಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡುವುದು ಕಡ್ಡಾಯವಾಗಿದೆ. ಗ್ರಾಹಕರು ಎನ್‌ಪಿಪಿಎ ವೆಬ್‌ಸೈಟ್ ಮತ್ತು ’ಫಾರ್ಮಾ ಸಹಿ ದಾಮ್’ ಮೊಬೈಲ್ ಅಪ್ಲಿಕೇಷನ್ ಮೂಲಕ ನವೀಕರಿಸಿದ ಔಷಧ ದರಗಳನ್ನು ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Tags
Nation