
ಹಂಪಾಪುರ | ರೈತರಿಗೆ ಕೊಂಚ ನೆಮ್ಮದಿ ತಂದ ಭಾರಿ ಮಳೆ
ಹಂಪಾಪುರ: ಹೋಬಳಿ ಸೇರಿದಂತೆ ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ ಸೋಮವಾರ ಸಂಜೆ ಭಾರಿ ಮಳೆಯಾಗಿದ್ದು, ಹಲವು ಗ್ರಾಮಗಳಲ್ಲಿ ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ. ರೈತರು ಮಳೆಯ ಆಗಮನದಿಂದ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿತ್ತು. ಮಳೆಯನ್ನೇ ಆಶ್ರಯಿಸಿದ್ದ ಹಲವು ಬೆಳೆಗಳು ನೀರಿನ ಕೊರತೆಯಿಂದ ಒಣಗಿದ್ದವು. ಮತ್ತೊಂದೆಡೆ, ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟವೂ ಕುಸಿದಿದ್ದು, ರೈತರು ಆತಂಕಕ್ಕೊಳಗಾಗಿದ್ದರು.
ಮಳೆಯಿಂದ ಜಮೀನುಗಳಿಗೆ ನೀರು ಹರಿದು, ಒಣಗುತ್ತಿದ್ದ ಬೆಳೆಗಳಿಗೆ ತಾತ್ಕಾಲಿಕವಾಗಿ ತೇವಾಂಶ ದೊರೆತಂತಾಗಿದೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾದರೆ ಬೋರ್‌ವೆಲ್‌ಗಳ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆ ರೈತರಲ್ಲಿದೆ.
ಬೆಳೆ ಹಾನಿ: ಅಪಾರ ಗಾಳಿ ಮಳೆಯಿಂದಾಗಿ ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದ ಶಿವಕುಮಾರ್ ಅವರ ತೊಗರಿ ಹಾಗೂ ದಿಲೀಪ್ ಅವರು ನೀರಾವರಿಗೆ ಬಿತ್ತನೆ ಮಾಡಿದ್ದ ರಾಗಿ ಸಂಪೂರ್ಣ ನೆಲಕಚ್ಚಿದೆ.