
ನಮೂನೆ–7 ಸಲ್ಲಿಸಿದ ದೂರುದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ: ಕೆ.ನೀಲಾ
ಕಲಬುರಗಿ: ‘ದಾಖಲಾತಿ ಇಲ್ಲದೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಮೂನೆ–7 ಸಲ್ಲಿಸಿದ ದೂರುದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ.ನೀಲಾ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಪಿಐಎಂ ರಾಜ್ಯ ಸಮಿತಿಯ ನಿಯೋಗವು ಅ.1ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಏಣಕೂರು ಗ್ರಾಮಕ್ಕೆ ಭೇಟಿ ನೀಡಿ ನಮೂನೆ–7 ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಿದೆ. ಪಕ್ಷದ ಬೀದರ್ ಜಿಲ್ಲಾ ಸಂಘಟನಾ ಸದಸ್ಯರಾದ ಶಶಿಕಾಂತ ಡಾಂಗೆ, ಪ್ರಭು ಸಂತೋಷಕರ್ ಮತ್ತು ಗೌಸೋದ್ದಿನ್ ನಿಯೋಗದಲ್ಲಿದ್ದರು’ ಎಂದರು.
‘ಏಣಕೂರು ಗ್ರಾಮದಲ್ಲಿ ಸೆ. 22ರಂದು ಸುಮಾರು 266 ಮುಸ್ಲಿಂ ಮತದಾರರ ಹೆಸರಿಗೆ ಮೂವರು ವ್ಯಕ್ತಿಗಳು ಆಕ್ಷೇಪಣೆ ವ್ಯಕ್ತಪಡಿಸಿ ಬಿಎಲ್‌ಒ ಅವರಿಗೆ ನಮೂನೆ–7ನ್ನು ಕೊಟ್ಟಿದ್ದಾರೆ. ಅದರಲ್ಲಿ ಬೂತ್ ನಂಬರ್ 252ರಲ್ಲಿ 65 ಜನರ ಮತ್ತು 251ರ ಬೂತ್‌ನಲ್ಲಿ ಇಬ್ಬರ ನಮೂನೆ –7ನ್ನು ಅಪ್‌ಲೋಡ್ ಮಾಡಲಾಗಿದೆ. ಉಳಿದವು ಅಧಿಕಾರಿಗಳ ಬಳಿ ಇವೆ. ಇದನ್ನು ತಿಳಿದ ಮತದಾರರು ಪ್ರತಿಭಟಿಸಿದ್ದಾರೆ’ ಎಂದರು.
‘ಅದರಂತೆ ವಿವಿಧ ಊರುಗಳಿಗೂ ಪಕ್ಷದ ಸದಸ್ಯರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಭಾಲ್ಕಿ ತಾಲ್ಲೂಕಿನ ನಿಟ್ಟೂರ (ಬಿ) ಗ್ರಾಮದ ನಾಲ್ಕು ಬೂತ್‌ಗಳಲ್ಲಿ 400ಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿ ಸಲ್ಲಿಕೆ ಆಗಿವೆ. ಉಚ್ಚಾ ಗ್ರಾಮದಲ್ಲಿ 70 ಮುಸ್ಲಿಂ ಹೆಸರುಗಳ ಆಕ್ಷೇಪಣಾ ನಮೂನೆ–7 ಸಲ್ಲಿಕೆ ಮಾಡಿದ್ದು ಎಲ್ಲವೂ ಅಪ್‌ಲೋಡ್ ಮಾಡಲಾಗಿದೆ. ಖಟಕಚಿಂಚೋಳಿ, ಉಚ್ಚಾ, ಹುಪಳಾ, ಲಖನಗಾಂವ್, ಮೇತಿಮೇಳಕುಂದಾ, ನಾವದಗಿ, ಡಾವರಗಾಂವ, ಭಾಲ್ಕಿ ಪಟ್ಟಣದ 4–5 ಬೂತ್‌ಗಳಲ್ಲಿ ಹೀಗೆ ಸುಮಾರು 3,244ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಅಂಶವು ಚರ್ಚೆ ಆಗುತ್ತಿದ್ದಂತೆಯೇ ಮರುದಿನ ಅನೇಕ ಅರ್ಜಿದಾರರು ತಮಗೆ ಗೊಂದಲ ಆಗಿದೆ ಎಂದು ಹೇಳಿ ವಾಪಸ್ ಪಡೆಯಲು ಬರೆದುಕೊಟ್ಟಿದ್ದಾರೆ. ಏಣಕೂರು ಗ್ರಾಮದ ದೂರುದಾರರು ಸಹ ತಾಲ್ಲೂಕು ಚುನಾವಣಾ ಅಧಿಕಾರಿಗೆ ದೂರು ವಾಪಸ್ ಪಡೆಯಲು ಬರೆದುಕೊಟ್ಟಿದ್ದಾರೆ’ ಎಂದು ವಿವರಿಸಿದರು.
‘ಬಿಜೆಪಿಯು ಮುಸ್ಲಿಂ ಮತಗಳನ್ನು ಕಡಿತಗೊಳಿಸಲು ನಮೂನೆ–7 ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆಕ್ಷೇಪಣೆ ಅರ್ಜಿಗಳನ್ನು ಅಪ್‌ಲೋಡ್ ಮಾಡುವಂತೆ ಬಿಎಲ್‌ಒಗಳ ಮೇಲೆ ಒತ್ತಡ ಹೇರಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್‌ಐಆರ್ ರದ್ದುಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ವಜಾಗೊಳಿಸಬೇಕು’ ಎಂದರು.
ಪಕ್ಷದ ಪ್ರಮುಖರಾದ ಸುಧಾಮ ಧನ್ನಿ, ಭೀಮಶೆಟ್ಟಿ ಯಂಪಳ್ಳಿ, ಪಾಂಡುರಂಗ ಮಾವಿನಕರ, ಗುರು ಚಾಂದಕವಠೆ ಇದ್ದರು.