
ಜೇವರ್ಗಿ: ಆಧಾರ್ ತಿದ್ದುಪಡಿಗೆ ಜನರ ಪರದಾಟ
ಜೇವರ್ಗಿ: ಪಟ್ಟಣದ ಎರಡು ಕಡೆಗಳಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜನರು ನೋಂದಣಿ ಹಾಗೂ ತಿದ್ದುಪಡಿ ಮಾಡಲು ಗಂಟೆಗಟ್ಟಲೇ ಸರದಿಯಲ್ಲಿ ಕಾಯಬೇಕಾದ ಸ್ಥಿತಿ ಬಂದೊದಗಿದೆ.
ಪಡಿತರ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಕೇಂದ್ರದ ಮುಂದೆ ಜನದಟ್ಟಣೆ ಹೆಚ್ಚಾಗಿದೆ. ಕೆಲವು ವಿವರಗಳನ್ನು ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಬಹುದಾದರೂ, ಬಯೋಮೆಟ್ರಿಕ್ ನವೀಕರಣ ಹಾಗೂ ಕೆಲವು ಬದಲಾವಣೆಗಳಿಗೆ ಅಧಿಕೃತ ಕೇಂದ್ರದಲ್ಲೇ ಭೌತಿಕ ಪರಿಶೀಲನೆ ಕಡ್ಡಾ ಯವಾಗಿರುವುದರಿಂದ ಸಾರ್ವಜನಿಕರು ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.
ದಿನದ ಕೂಲಿ ಹಾಗೂ ಸಣ್ಣ–ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರು, ಇಡೀ ದಿನ ಕೇಂದ್ರದಲ್ಲೇ ನಿಲ್ಲುವಂತಾಗಿದೆ. ಇದರಿಂದಾಗಿ, ಅವರ ದಿನದ ಕೂಲಿ ಕೈತಪ್ಪುತ್ತಿದೆ. ಪಟ್ಟಣದ ತಹಶೀಲ್ದಾರ್ ಕಚೇರಿ ಮತ್ತು ಎಸ್.ಬಿ.ಐ ಬ್ಯಾಂಕ್ ಹತ್ತಿರದ ಕೇಂದ್ರದಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳಿವೆ. ಇದೇ ಕೇಂದ್ರಗಳಲ್ಲಿ ನೋಂದಣಿ, ನವೀಕರಣ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ತಾಲ್ಲೂಕಿನ ಎಲ್ಲ ಜನರು, ಆಧಾರ್ ಸಂಬಂಧಿತ ಕೆಲಸಗಳಿಗಾಗಿ ಈ ಎರಡು ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಎರಡೂ ಕೇಂದ್ರಗಳಲ್ಲಿ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ನೋಂದಣಿ ಹಾಗೂ ತಿದ್ದುಪಡಿಗೆ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಬ್ಯಾಂಕ್ ಖಾತೆ, ನೇರ ನಗದು ವರ್ಗಾವಣೆ ಸೇರಿದಂತೆ ಸರ್ಕಾರದ ಪ್ರತಿಯೊಂದು ಯೋಜನೆಯ ಲಾಭ ಪಡೆಯಲು ಆಧಾರ್ ಕಡ್ಡಾಯ ಮಾಡಲಾಗಿದೆ. ತಾಲ್ಲೂಕಿನಲ್ಲಿ ಹಲವರ ಆಧಾರ್ ಕಾರ್ಡ್‌ಗಳಲ್ಲಿ ಸಣ್ಣ–ಪುಟ್ಟ ಲೋಪಗಳಿವೆ. ವಯಸ್ಸು, ಫೋಟೊ, ಬಯೋಮೆಟ್ರಿಕ್ ಹೀಗೆ ನಾನಾ ಸಮಸ್ಯೆಗಳಿವೆ.
ತಾಲ್ಲೂಕಿನ 20 ಕ್ಕೂ ಹೆಚ್ಚು ಗ್ರಾಪಂಗಳ ನೂರಾರು ಹಳ್ಳಿಯ ಜನತೆಯು ಪ್ರತಿಯೊಂದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಮಕ್ಕಳ ಶೈಕ್ಷಣಿಕ ದಾಖಲಾತಿಗೆ, ಶಕ್ತಿ ಯೋಜನೆಯಡಿ ಹೆಣ್ಣು ಮಕ್ಕಳು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್ ಬೇಕು. ಆದರೆ, ಕೇವಲ ಎರಡು ಆಧಾರ್ ಸೇವಾ ಕೇಂದ್ರಗಳು ಇರುವುದರಿಂದ, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತಷ್ಟು ಸೇವಾ ಕೇಂದ್ರಗಳನ್ನು ತೆರೆಯುವಂತೆಯೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಒಂದು ದಿನದ ಕೂಲಿ ಬಿಟ್ಟು ಬೆಳಿಗ್ಗೆಯೇ ಬಂದು ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ಆಧಾರ್ ತಿದ್ದುಪಡಿ ಮಾಡಿಸಿಕೊಂಡು ಹೋಗುತ್ತಿದ್ದೇನೆ. ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ, ಆಧಾರ್ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲುತ್ತಿದ್ದಾರೆ. ತಾಯಂದಿರು, ಮಕ್ಕಳ ಸಮೇತ ಕಾಯುತ್ತಿದ್ದಾರೆ. ಕೆಲಸದ ಒತ್ತಡದಿಂದಾಗಿ ಕೇಂದ್ರದ ಸಿಬ್ಬಂದಿ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ವರ್ ಹೆಸರಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ನಿವಾಸಿಗಳು ದೂರಿದರು.
ಒಂದು ಕೇಂದ್ರದಲ್ಲಿ ದಿನಕ್ಕೆ ಕೇವಲ 20ರಿಂದ 30 ಮಂದಿ ಕೆಲಸ ಮಾತ್ರ ಆಗುತ್ತಿದೆ. ಉಳಿದವರು ಸರದಿಯಲ್ಲಿ ನಿಂತು ವಾಪಸ್ ಹೋಗುವಂತಾಗಿದೆ. ಕೇಂದ್ರದಿಂದ ಕೇಂದ್ರಕ್ಕೆ ಅಲೆಯುವಂತಾಗಿದೆ. ಜೇವರ್ಗಿಯಲ್ಲಿ ಮತ್ತಷ್ಟು ಸೇವಾ ಕೇಂದ್ರಗಳನ್ನು ತೆರೆಯಬೇಕು. ಪಟ್ಟಣ ಮಾತ್ರವಲ್ಲದೇ ಹೋಬಳಿ ಮಟ್ಟದಲ್ಲೂ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.