
ನಾನ್ಯಾರು ಗೊತ್ತೇನಮ್ಮಾ..? ಎಂದ ಡಿಕೆಶಿಗೆ ಮಹಿಳೆ ಕೊಟ್ಟ ಉತ್ತರ ಹೀಗಿತ್ತು..
ಬೆಂಗಳೂರು: ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರು, ಕೂಲಿ ಕಾರ್ಮಿಕರು, ಹಮಾಲರು, ವರ್ತಕರ ಸಮಸ್ಯೆಗಳನ್ನು ಆಲಿಸಿದ್ದಲ್ಲದೆ, ತಕ್ಷಣವೇ ಪರಿಹಾರ ಕಲ್ಪಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ ಚಿಕ್ಕಬಳ್ಳಾಪುರದಿಂದ ಈರುಳ್ಳಿ ಖರೀದಿಗೆಂದು ಬಂದಿದ್ದ ಮಹಿಳೆಯೊಬ್ಬರನ್ನು ಮುಖ್ಯಮಂತ್ರಿ, ‘ನಿಮಗೆ ಅನ್ನಭಾಗ್ಯ ಅಕ್ಕಿ ಸಿಗುತ್ತಿದೆಯೇನಮ್ಮಾ, ₹2,000 ಬರುತ್ತಿದೆಯಾ’ ಎಂದು ಮಾತಿಗೆಳೆದರು. ಆ ಮಹಿಳೆ, ‘ಬರುತ್ತಿದೆ’ ಎಂದರು. ಮುಖ್ಯಮಂತ್ರಿ, ‘ಬಸ್‌ನಲ್ಲಿ ಫ್ರೀಯಾಗಿ ಬಂದಿರಾ’ ಎಂದು ಕೇಳಿದರು. ಮಹಿಳೆ, ಹೌದೆಂದರು.
ಶಿವಕುಮಾರ್, ‘ಇದನ್ನೆಲ್ಲಾ ಯಾರು ಮಾಡಿದ್ದು’ ಎಂದು ಪ್ರಶ್ನಿಸಿದರು. ಆಗ ಆ ಮಹಿಳೆ, ‘ಸಿದ್ದರಾಮಯ್ಯ ಅವರು ಮಾಡಿದ್ದು. ಸಿದ್ದರಾಮಯ್ಯ ಎಂದು ಜೋರಾಗಿ ಹೇಳುತ್ತೇನೆ’ ಎಂದರು. ಶಿವಕುಮಾರ್, ‘ನಾನು ಯಾರೆಂದು ಗೊತ್ತೇ’ ಎಂದರು. ಆ ಮಹಿಳೆ, ‘ನಿಜವಾಗಿಯೂ ಗೊತ್ತಿಲ್ಲ ಸ್ವಾಮಿ’ ಎಂದರು. ‘ಇವರು ಮುಖ್ಯಮಂತ್ರಿ’ ಎಂದು ಹೇಳಲು ಅಧಿಕಾರಿಯೊಬ್ಬರು ಮುಂದಾದಾಗ, ಶಿವಕುಮಾರ್ ತಡೆದರು.
ಆ ಮಹಿಳೆ, ‘ನಾನು ಹುಡುಗಿಯಾಗಿದ್ದಾಗ ಇಂದಿರಾ ಗಾಂಧಿ ತಿನ್ನಲು ಉಪ್ಪಿಟ್ಟು ಕೊಟ್ಟರು, ಜಮೀನು ಕೊಟ್ಟರು. ಅವತ್ತಿನಿಂದ ಇವತ್ತಿನವರೆಗೂ ನಾನು ಕಾಂಗ್ರೆಸ್‌ಗೇ ಮತ ಹಾಕುತ್ತಿದ್ದೇನೆ’ ಎಂದರು.