
ಮುಂಡರಗಿ | ವರ್ತುಲ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ
ಮುಂಡರಗಿ: ಸಣ್ಣ ಮತ್ತು ಮಧ್ಯಮ ಪಟ್ಟಣಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದು, ಮುಂಡರಗಿ ಪಟ್ಟಣದ ಸುತ್ತ ರಸ್ತೆ ನಿರ್ಮಿಸಲು ಆ. 29ರಂದು ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ರಾಜ್ಯದ 108 ಸಣ್ಣ ಹಾಗೂ ಮಧ್ಯಮ ಪಟ್ಟಣಗಳಲ್ಲಿ ಜಿಐಎಸ್ ಆಧಾರಿತ ರೋಡ್ ನೆಟ್ ವರ್ಕಿಂಗ್ ಗ್ರಿಡ್ ಪ್ಲಾನ್ ಅಡಿ ಸಂಚಾರ ದಟ್ಟಣೆ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಅದರ ಅಡಿ ಜಿಲ್ಲೆಯ ಗಜೇಂದ್ರಗಡ, ಮುಳಗುಂದ, ಮುಂಡರಗಿ ಹಾಗೂ ನರೇಗಲ್ಲ ಪಟ್ಟಣಗಳಲ್ಲೂ ವರ್ತುಲ ರಸ್ತೆಗಳು ನಿರ್ಮಾಣವಾಗಲಿವೆ.
ನಿಯೋಜಿತ ವರ್ತುಲ ರಸ್ತೆಯು 100 ಅಡಿ ಅಗಲ, ಎರಡೂ ಬದಿ ಎರಡು ಕಿ.ಮೀ. ಪ್ರಭಾ ವಲಯವನ್ನು ಒಳಗೊಳ್ಳಲಿದೆ. ಮುಂಡರಗಿ ಪಟ್ಟಣವನ್ನು ಕೇಂದ್ರವಾಗಿಟ್ಟುಕೊಂಡು ಪಟ್ಟಣದ ಸುತ್ತಲಿನ ರಾಮೇನಹಳ್ಳಿ, ಬ್ಯಾಲವಾಡಿಗೆ ಹಾಗೂ ಶಿರೂಳ ಗ್ರಾಮಗಳನ್ನು ಒಳಗೊಂಡು ವೃತ್ತಾಕಾರವಾಗಿ ವರ್ತುಲ ರಸ್ತೆ ನಿರ್ಮಾಣವಾಗಲಿದೆ.
ಮುಂಡರಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹೆಸರೂರು, ಕೊರ್ಲಹಳ್ಳಿ, ಕಲಕೇರಿ, ಹಾರೋಗೇರಿ ಹಾಗೂ ಮೇವುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳು ಹಾಗೂ ಕೊಪ್ಪಳ ತಾಲ್ಲೂಕಿನ ಹಟ್ಟಿ, ಬೆಳಗಟ್ಟಿ, ಘಟ್ಟಿರಡ್ಡಿಹಾಳ ಹಾಗೂ ಅಲ್ಲಿಪೂರ ಗ್ರಾಮಗಳ ಜಮೀನುಗಳನ್ನು ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸಾಧ್ಯತೆ ಇದೆ.
ಇಲ್ಲಿಯ ಪುರಸಭೆಯ ಸೂಚನಾಫಲಕದಲ್ಲಿ ವರ್ತುಲ ರಸ್ತೆಯ ನಕ್ಷೆ ಹಾಗೂ ನಿಬಂಧನೆಗಳನ್ನು ಒಳಗೊಂಡ ಸರ್ಕಾರದ ಆದೇಶ ಪ್ರತಿಯನ್ನು ಪ್ರಕಟಿಸಲಾಗಿದೆ. ವರ್ತುಲ ರಸ್ತೆ ಹಾಯ್ದು ಹೋಗುವ ಸುತ್ತಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೂ ಅಧಿಸೂಚನೆಯ ಪ್ರತಿ ರವಾನಿಸಲಾಗಿದೆ. ಪುರಸಭೆ ಹಾಗೂ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸರ್ಕಾರದ ಅಧಿಸೂಚನೆ ಹಾಗೂ ನಿಯೋಜಿತ ನಕ್ಷೆಯನ್ನು ಸಾರ್ವಜನಿಕರಿಗೆ ತಿಳಿಸುವಂತೆ ಸೂಚಿಸಲಾಗಿದೆ.
ವರ್ತುಲ ರಸ್ತೆ ನಿರ್ಮಿಸುವ ಕುರಿತು ಸಲಹೆ, ಸೂಚನೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ, ಅಧಿಸೂಚನೆ ಹೊರಡಿಸಿದ ದಿನದಿಂದ 60 ದಿನಗಳೊಳಗೆ ಸಾರ್ವಜನಿಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಲಿಖಿತವಾಗಿ ದೂರು ಸಲ್ಲಿಸಬಹುದು ಎಂದೂ ತಿಳಿಸಲಾಗಿದೆ.
ಮುಂಡರಗಿ ಪಟ್ಟಣದ ಸುತ್ತ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಕೃಷಿ ಜಮೀನು ಭೂಸ್ವಾಧೀನಕ್ಕೆ ಒಳಪಡುತ್ತದೆ. ರಸ್ತೆಯ ಎರಡೂ ಬದಿಗಳ ಎರಡು ಕಿ.ಮೀ ವ್ಯಾಪ್ತಿಯ ಜಮೀನುಗಳು ಪ್ರಭಾ ವಲಯವಾಗಿದ್ದು, ಈ ಜಮೀನುಗಳನ್ನು ಅನ್ಯ ಉದ್ದೇಶಕ್ಕೆ ಬಳಸಲು ಬರುವುದಿಲ್ಲ. ಕೃಷಿಯೇತರ (ಎನ್.ಎ.) ಜಮೀನನ್ನಾಗಿ ಪರಿವರ್ತಿಸಲೂ ಆಗುವುದಿಲ್ಲ ಎಂಬುದು ರೈತರ ಆತಂಕ.