ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಶಶಿಧರ ಶೆಟ್ಟಿ

ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಶಶಿಧರ ಶೆಟ್ಟಿ

ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಶಶಿಧರ ಶೆಟ್ಟಿ

ಚಿಕ್ಕಮಗಳೂರು: ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಇಲಾಖೆಗಳು ಅಥವಾ ಸರ್ಕಾರೇತರ ಸಂಸ್ಥೆಗಳ ಹೊಣೆಯಲ್ಲ, ಅದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳು, ಪೊಕ್ಸೊ ಕಾಯ್ದೆ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ-2016ರ ಅಡಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಆಯೋಜಿಸಲಾಗಿದ್ದ ಕಾನೂನು ಅರಿವು ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಜನನ ಮತ್ತು ಮರಣವನ್ನು ಸ್ಥಳೀಯ ಪಂಚಾಯಿತಿ ಅಥವಾ ಪುರಸಭೆಯಲ್ಲಿ ನೋಂದಾಯಿಸಬೇಕು ಎಂಬ ಸರಳ ನಿಯಮವೂ ಹಲವರಿಗೆ ತಿಳಿದಿಲ್ಲ. ಆದ್ದರಿಂದ ರಾಜ್ಯದಲ್ಲಿ ಪ್ರತಿ ಲೋಕ್ ಅದಾಲತ್‌ನಲ್ಲಿ 35 ಸಾವಿರದಿಂದ 40 ಸಾವಿರ ಜನನ-ಮರಣ ಪ್ರಮಾಣಪತ್ರ ವಿತರಿಸಬೇಕಾದ ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ವಯಸ್ಕರಿಗಿಂತಲೂ ಹೆಚ್ಚಿನ ಹಕ್ಕುಗಳು ಮಕ್ಕಳಿಗೆ ಇವೆ, ಏಕೆಂದರೆ ಅವರು ಅಸಹಾಯಕರು. ಅಂತಹ ಮಕ್ಕಳನ್ನು ರಕ್ಷಿಸುವುದು ಮತ್ತು ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಡುವುದು ಸಮಾಜದ ಪ್ರಮುಖ ಜವಾಬ್ದಾರಿ. ಸಾರ್ವಜನಿಕರು ಇಂತಹ ಬಾಲ ಕಾರ್ಮಿಕರನ್ನು ಕಂಡ ತಕ್ಷಣ ಚೈಲ್ಡ್ ಹೆ‍ಲ್ಪ್‌ಲೈನ್‌ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಮನೆಯಲ್ಲೇ ದೌರ್ಜನ್ಯ ಎದುರಿಸುವ ಮಕ್ಕಳಿಗೆ ಆ ವಿಷಯವನ್ನು ತಂದೆ-ತಾಯಿಗಾಗಲಿ ಅಥವಾ ಇತರರಿಗಾಗಲಿ ಹೇಳಿಕೊಳ್ಳುವುದು ಸುಲಭದ ಮಾತಲ್ಲ. ಇಂತಹ ಸಂದರ್ಭಗಳಲ್ಲಿ ಶಾಲಾ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ. ಮಗುವಿನ ಚಟುವಟಿಕೆ ಅಥವಾ ನಡವಳಿಕೆಯಲ್ಲಿ ಕುಸಿತ ಕಂಡು ಬಂದರೆ, ಶಿಕ್ಷಕರು ಪ್ರೀತಿಯಿಂದ ವಿಚಾರಿಸಿ ಧೈರ್ಯ ತುಂಬಬೇಕು. ಇತ್ತೀಚೆಗೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಮಗುವಿನ ಮಾನಸಿಕ ಕುಸಿತವನ್ನು ಶಿಕ್ಷಕರೊಬ್ಬರು ಗುರುತಿಸಿ, ವಿಚಾರಿಸಿದಾಗ ಸತ್ಯ ಹೊರಬಂದು ಪ್ರಕರಣ ದಾಖಲಾಯಿತು ಎಂದು ಘಟನೆಯೊಂದನ್ನು ಸ್ಮರಿಸಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು 1098 ಉಚಿತ ಸಹಾಯವಾಣಿ ಅತ್ಯಂತ ಪರಿಣಾಮಕಾರಿಯಾಗಿದೆ. ಸಂಕಷ್ಟದಲ್ಲಿರುವ ಮಕ್ಕಳು ಅಥವಾ ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ, ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಪಂದಿಸಿ ಮಗುವನ್ನು ರಕ್ಷಿಸಿ ಬಾಲಕರ ಅಥವಾ ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತರಿಸಲಿವೆ ಎಂದು ತಿಳಿಸಿದರು.

ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಹೆಗಡೆ ಮಾತನಾಡಿ, ‘ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಲು ಸಮಾಜದ ಪ್ರತಿಯೊಬ್ಬರಲ್ಲೂ ಸಾಮಾಜಿಕ ಕಳಕಳಿ ಹಾಗೂ ಹೊಣೆಗಾರಿಕೆ ಅಗತ್ಯ’ ಎಂದರು.

ಕಾರ್ಯಾಗಾರದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ರಾಷ್ಟ್ರೀಯ ಯೋಜನೆ ಸಂಯೋಜಕ ರಂಜಿತ್ ಪ್ರಕಾಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿ ಬಾಲಸುಬ್ರಹ್ಮಣ್ಯಂ, ಚಿಕ್ಕಮಗಳೂರು ಅಭಿಯೋಜನಾ ಇಲಾಖೆಯ ಕಾನೂನು ಅಧಿಕಾರಿ ಬಿ.ಬಿನು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯಶೀಲಾ ಕೆ.ಆರ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿ. ಮಾಲತಿ ಇದ್ದರು.

9 ಸಾವಿರ ಪೊಕ್ಸೊ ಪ್ರಕರಣ

ರಾಜ್ಯದಲ್ಲಿ 9,000ಕ್ಕೂ ಹೆಚ್ಚು ಪೋಕ್ಸೊ ಪ್ರಕರಣಗಳಿದ್ದು, ಚಿಕ್ಕಮಗಳೂರು ಒಂದರಲ್ಲೇ 200ಕ್ಕೂ ಅಧಿಕ ಪ್ರಕರಣಗಳಿವೆ. ಪೊಕ್ಸೊ ಕಾಯ್ದೆ ಬರಿ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ. ಸಮೀಕ್ಷೆಯೊಂದರ ಪ್ರಕಾರ, ದೇಶದಲ್ಲಿ ಶೇ 43ರಷ್ಟು ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದರೆ, ಈ ಪ್ರಕರಣಗಳು ವರದಿಯಾಗದೆ ಮುಚ್ಚಿಹೋಗುತ್ತಿವೆ ಎಂದು ಎಚ್. ಶಶಿಧರ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಎಷ್ಟೊ ಮಕ್ಕಳು ತಮ್ಮ ಸ್ವಂತ ಮನೆಯಲ್ಲೇ ಸುರಕ್ಷಿತವಾಗಿಲ್ಲ. ರಕ್ಷಣೆ ನೀಡಬೇಕಾದವರಿಂದಲೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಾವಿರಾರು ಪ್ರಕರಣಗಳು ನಡೆಯುತ್ತಿರುವುದು ಆತಂಕಕಾರಿ ವಿಷಯ. ಕಳೆದ ವರ್ಷ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಂತ್ರಸ್ತರಿಗೆ ₹45 ಕೋಟಿ ಪರಿಹಾರ ವಿತರಿಸಲಾಗಿದ್ದು, ಇದರಲ್ಲಿ ಶೇ 80ರಷ್ಟು ಮೊತ್ತ ಪೊಕ್ಸೊ ಪ್ರಕರಣಗಳ ಸಂತ್ರಸ್ತರಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಮಾಧ್ಯಮ ಹಾಗೂ ಮೊಬೈಲ್ ಫೋನ್ ದುರುಪಯೋಗದಿಂದ ಮಕ್ಕಳು ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಹಾಗೂ ಸೈಬರ್ ಭದ್ರತೆ ಕುರಿತು ಶಿಕ್ಷಣ ಇಲಾಖೆ ಹಾಗೂ ಕಾನೂನು ಪ್ರಾಧಿಕಾರ ಜಂಟಿಯಾಗಿ ಶಾಲೆಗಳಲ್ಲಿ ನಿರಂತರ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ