ಕೊಪ್ಪಳ: ಗಣೇಶ ವಿಸರ್ಜನೆ; ಬಣ್ಣಗಳ ಬೆಳಕಿನ ಚಿತ್ತಾರ

ಕೊಪ್ಪಳ: ಗಣೇಶ ವಿಸರ್ಜನೆ; ಬಣ್ಣಗಳ ಬೆಳಕಿನ ಚಿತ್ತಾರ

ಕೊಪ್ಪಳ: ಗಣೇಶ ವಿಸರ್ಜನೆ; ಬಣ್ಣಗಳ ಬೆಳಕಿನ ಚಿತ್ತಾರ

ಕೊಪ್ಪಳ: ಗಣೇಶ ಮೂರ್ತಿಗಳ ವಿಸರ್ಜನೆಯ 11ನೇ ದಿನವಾದ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದ ತನಕ ಕಣ್ಣು ಹಾಯಿಸಿದಷ್ಟೂ ದೂರ ಜನವೊ ಜನ. ಕಿವಿಗಡಚಿಕ್ಕುವ ಡಿ.ಜೆ. ಅಬ್ಬರದ ಸದ್ದು, ಕಣ್ಣು ಕೊರೈಸುವ ಬೆಳಕಿನ ಚಿತ್ತಾರ ಕಂಗೊಳಿಸಿತು.

ಲೇಬರ್‌ ವೃತ್ತ, ಈಶ್ವರ ಪಾರ್ಕ್‌ನಿಂದ ಅಶೋಕ ವೃತ್ತದ ತನಕ, ಜವಾಹರ ರಸ್ತೆ, ಗಡಿಯಾರ ಕಂಬ, ಗವಿಮಠಕ್ಕೆ ತೆರಳುವ ಮಾರ್ಗ, ಕೋಟೆ ರಸ್ತೆ ಹೀಗೆ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಬೃಹತ್‌ ಗಾತ್ರದ ಗಣೇಶ ಮೂರ್ತಿಗಳನ್ನು ಮೊದಲು ಧಾರ್ಮಿಕ ಪೂಜಾ ವಿಧಿವಿಧಾನಗಳ ಮೂಲಕ ವಿಸರ್ಜನೆಗೆ ಅಣಿ ಮಾಡಲಾಯಿತು. ರಾತ್ರಿ 10 ಗಂಟೆ ಬಳಿಕ ಹೊತ್ತು ಏರಿದಷ್ಟು ಡಿ.ಜೆ. ಅಬ್ಬರದ ಆರ್ಭಟ ಹೆಚ್ಚಾಗುತ್ತಲೇ ಹೋಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯುವಜನತೆ ಕುಣಿದು ಸಂಭ್ರಮಿಸಿದರು.

ಬಹುತೇಕ ಗಣೇಶ ಮಂಡಳಿಗಳು ಮೂರ್ತಿಗಳ ವಿಸರ್ಜನೆಯ ಸಮಯದಲ್ಲಿ ಡಿ.ಜೆ. ಅಬ್ಬರ, ಪಾಶ್ಚಿಮಾತ್ಯ ಸಂಗೀತ ಹಾಗೂ ಕನ್ನಡ ಹಾಡುಗಳ ಮೊರೆ ಹೋದರೆ ಗಂಜ್‌ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಯುವ ಸೇನೆ ಸಂಘಟನೆಯವರು ಅಶೋಕ ವೃತ್ತದಲ್ಲಿ ಸಾಂಪ್ರದಾಯಿಕ ವೀರಗಾಸೆ ನೃತ್ಯವನ್ನು ಆಯೋಜಿಸಿದ್ದರು.

ಡಿ.ಜೆ.ಯಲ್ಲಿ ನಿಮಯ ಮೀರಿದ ಶಬ್ದ ಬಳಕೆಗೆ ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ಆದೇಶಿಸಿದ್ದರೂ ಯಾರೂ ಪಾಲನೆ ಮಾಡಲಿಲ್ಲ. ಮಧ್ಯರಾತ್ರಿ ಕಳೆದು ಬೆಳಗಿನ ಜಾವವಾಗುತ್ತಿದ್ದರೂ ಅಬ್ಬರದ ಸದ್ದು ಜೋರಾಗಿತ್ತು. ಇದು ಸಾರ್ವಜನಿಕರಲ್ಲಿ ಕಿರಿಕಿರಿ ಉಂಟು ಮಾಡಿತು.

ವಿವಿಧ ಗಣೇಶ ಮಂಡಗಳಿಗಳು ತಾಲ್ಲೂಕು ಕ್ರೀಡಾಂಗಣದ ಮುಂಭಾಗ ದಲ್ಲಿ, ಅಶೋಕ ವೃತ್ತದಲ್ಲಿ ಬೆಳಗಿಸಿದ ತರಹೇವಾರಿ ಬಣ್ಣಗಳ ವಿದ್ಯುತ್‌ ಬೆಳಕಿ ಚಿತ್ತಾರ, ಬಾಣಬಿರುಸುಗಳ ಸೊಬಗು ಜನರಲ್ಲಿ ಖುಷಿ ಭಾವ ಮೂಡಿಸಿತು. ತಡರಾತ್ರಿಯಾದರೂ ಜವಾಹರ ರಸ್ತೆಯ ಮಾರ್ಗದಲ್ಲಿ ಅನೇಕ ಮಹಿಳೆಯರು ವಿಸರ್ಜನಾ ಮೆರವಣಿಗೆ ವೀಕ್ಷಿಸಿದರು.

ಭಾವೈಕ್ಯ ಮೆರೆದ ಮುಸ್ಲಿಮರು

ಮೆರವಣಿಗೆ ವೇಳೆ ಕೊಪ್ಪಳದ ಪಲ್ಟನ್‌ ಗಲ್ಲಿ ಪಂಚ ಕಮಿಟಿ ಪ್ರಮುಖರು ಪಾಲ್ಗೊಂಡವರಿಗೆ ಉಪ್ಪಿಟ್ಟು, ಮಿರ್ಚಿ ಹಾಗೂ ಉಪ್ಪಿನಕಾಯಿ ವ್ಯವಸ್ಥೆ ಮಾಡಿ ಹಸಿವು ತಣಿಸಿದರು.

120 ಕೆ.ಜಿ. ಉಪ್ಪಿಟ್ಟು, ಎರಡು ಸಾವಿರ ಜನರಿಗೆ ಆಗುವಷ್ಟು ಮಿರ್ಚಿ ವ್ಯವಸ್ಥೆ ಮಾಡಲಾಗಿತ್ತು. ಪಂಚ ಕಮಿಟಿಯಿಂದ ಪ್ರತಿವರ್ಷವೂ ಈ ಸೇವಾ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ ಎಂದು ಕಮಿಟಿಯ ಕಾರ್ಯದರ್ಶಿ ಅಬ್ದುಲ್‌ ಮಜೀದ್ ಮಾನ್ವಿಕರ್‌, ಅಕ್ಬರ್‌ ಪಲ್ಟನ್‌ ತಿಳಿಸಿದರು.

ಇದೇ ವೇಳೆ ಮುಸ್ಲಿಂ ಮುಖಂಡರು ಗಣೇಶ ಮೂರ್ತಿಗಳಿಗೆ ನಮಸ್ಕರಿಸಿದರು. ಭದ್ರತಾ ಕಾರ್ಯಕ್ಕೆ ಬಂದಿದ್ದ ಯಲಬುರ್ಗಾ ಸಿಪಿಐ ಮೌನೇಶ್ವರ ಮಾಲಿಪಾಟೀಲ, ನಗರ ಪೊಲೀಸ್‌ ಠಾಣೆಯ ಸಿಪಿಐ ಸುರೇಶ ಡಿ. ಅವರನ್ನು ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಹೊಡೆದಾಡಿಕೊಂಡ ಯುವಕರು; ಪ್ರಕರಣ ದಾಖಲು

ವಿಸರ್ಜನಾ ಮೆರವಣಿಗೆ ವೇಳೆ ತಾಲ್ಲೂಕು ಕ್ರೀಡಾಂಗಣದ ಸಮೀಪ ಯುವಕರು ಹೊಡೆದಾಡಿಕೊಂಡಿದ್ದು ನಗರ ಪೊಲೀಸ್‌ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೇವರಾಜ ಅರಸು ಕಾಲೊನಿಯ ಕೊಪ್ಪಳ ಕಾ ಸಾಮ್ರಾಟ ಹಾಗೂ 14ನೇ ವಾರ್ಡ್‌ನ ಕ್ರಾಂತಿ ಯುವಕರ ಮಿತ್ರ ಮಂಡಳಿ ಗಣೇಶಗಳ ಮೆರವಣಿಗೆ ವಾಹನಗಳು ಮುಖಾಮುಖಿಯಾಗಿ ಮೊದಲ ಪಾರ್ಟಿಯ ವಿಶ್ವನಾಥ, ಬೀರಪ್ಪ ಹಿರೇಹೊಳಿ, ಪವಾಡೆಪ್ಪ ಹಿರೇಹೊಳಿ, ವೀರೇಶ ಹಿರೇಹೊಳಿ ಮತ್ತು ಇತರರು, 2ನೇ ಪಾರ್ಟಿಯ ಅಣ್ಣಪ್ಪ, ಈರಣ್ಣ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದಗಳಿಂದ ಬೈದು ತಳ್ಳಾಟ ಮಾಡಿ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಹಳಷ್ಟು ಯುವಜನತೆ ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವುದು ಸಾಮಾನ್ಯವಾಗಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ