
ಕೆಜಿಎಫ್: ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಬದ್ಧ
ಕೆಜಿಎಫ್: ಊರಿಗಾಂ ಮೇಲ್ಸೇತುವೆ ನಿರ್ಮಾಣಕ್ಕಾಗಿ ಮನೆಗಳನ್ನು ತೆರವುಗೊಳಿಸಿದ ಸಂದರ್ಭದಲ್ಲಿ ಅಧಿಕಾರಿಗಳಿಂದ ಲೋಪವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಊರಿಗಾಂನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರನ್ನು ಶುಕ್ರವಾರ ಭೇಟಿಯಾಗಿ ಮಾತನಾಡಿದ ಅವರು, ‘ಈ ಭಾಗದಲ್ಲಿ ರಸ್ತೆ ಸಂಚಾರ ದಟ್ಟಣೆ ಹೆಚ್ಚು ಇರುವುದರಿಂದ ಮೇಲ್ಸೇತುವೆ ನಿರ್ಮಾಣ ಅನಿವಾರ್ಯವಾಗಿತ್ತು. ಆದರೆ ಮನೆ ತೆರವು ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ನಿರ್ದಿಷ್ಟ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಮನೆ ಕಳೆದುಕೊಂಡುವರಿಗೆ ಆಶ್ರಯ ಅಥವಾ ಬೇರೆ ಯೋಜನೆಯಲ್ಲಿ ಮನೆ ನೀಡಲು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಫಲಾನುಭವಿಗಳ ಆಯ್ಕೆಯಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಇದಕ್ಕೆ ಮೊದಲು ಸ್ಥಳಕ್ಕೆ ಭೇಟಿ ನೀಡಿದ ಶಾಸಕಿಯನ್ನು ಸಂತ್ರಸ್ತರು ತರಾಟೆಗೆ ತೆಗೆದುಕೊಂಡರು. ‘ಮನೆ ತೆರವು ಮಾಡುವ ಸಂದರ್ಭದಲ್ಲಿ ಮನೆಗಳಲ್ಲಿದ್ದ ವಸ್ತುಗಳನ್ನು ಹೊರಗಡೆ ಸಾಗಿಸಲು ಒಂದು ಗಂಟೆ ಸಮಯಾವಕಾಶ ನೀಡಿ ಎಂದರೂ ಅಧಿಕಾರಿಗಳ ಮನಸ್ಸು ಕರಗಲಿಲ್ಲ. ಎಷ್ಟೊಂದು ವಸ್ತುಗಳು ನಾಶವಾದವು. ನಮ್ಮ ಸಹಾಯಕ್ಕೆ ನಿಮ್ಮ ಪಕ್ಷದ ಯಾವುದೇ ಮುಖಂಡರು ಕೂಡ ಬರಲಿಲ್ಲ. ಮನೆ ಕೊಡುವುದಾಗಿ ಒಂದು ವರ್ಷದ ಹಿಂದೆಯೇ ನಮ್ಮ ಬಳಿ ಅರ್ಜಿ ಪಡೆಯಲಾಗಿತ್ತು. ಇದುವರೆವಿಗೂ ಮನೆ ನೀಡಲಿಲ್ಲ. ಎಲ್ಲಾ ಮುಗಿದ ಮೇಲೆ ನಮ್ಮ ಬಳಿ ಬಂದು ಸಾಂತ್ವನ ಹೇಳುತ್ತಿದ್ದೀರ?’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
‘ಕೆಲವು ಮನೆಗಳಿಗೆ ತೆರವು ಮಾಡುವ ಯಾವುದೇ ಸೂಚನೆ ಬಂದಿರಲಿಲ್ಲ. ಕೆಂಪು ಶಾಯಿಯಲ್ಲಿ ಗುರುತು ಕೂಡ ಹಾಕಿರಲಿಲ್ಲ. ಆದರೂ ದಿಢೀರನೆ ಮನೆಗಳನ್ನು ನೆಲಸಮ ಮಾಡಿದರು. ಎರಡು ದಿನದಿಂದ ಬೀದಿಯಲ್ಲಿದ್ದೇವೆ’ ಎಂದು ನಿವಾಸಿಗಳು ಅಲವತ್ತುಕೊಂಡರು.