ಪತ್ನಿ ಕೊಲೆ ಪ್ರಕರಣ: ಪತಿ ಬಟ್ಟೆಯಲ್ಲಿದ್ದ ‘ಬಾರ್ ಕೋಡ್’ ಕೊಟ್ಟ ಸುಳಿವು!
ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ, ಮೃತದೇಹವನ್ನು ಎಂ.ಎಸ್ ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದಿದ್ದ ಪತಿಯನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ಅನಸೂಯ (28) ಅವರನ್ನು ಕೊಲೆ ಮಾಡಿದ್ದ ಆರೋಪದಡಿ ಸಾಗರ್ ಚಂದ್ರ ರಾವತ್(32) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದಂಪತಿಯ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆದಿತ್ತು. ಆಗಸ್ಟ್ 11ರಂದು ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ, ಮೃತದೇಹವನ್ನು ಖಾಲಿ ನಿವೇಶನಕ್ಕೆ ಎಸೆದಿದ್ದ. ನಿವೇಶನದ ಮಾಲೀಕರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಒಡಿಶಾದ ಅನಸೂಯ ಹಾಗೂ ಸಾಗರ್ ಚಂದ್ರ ರಾವತ್ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮದುವೆ ವಿಷಯ ಎರಡೂ ಕುಟುಂಬದ ಸದಸ್ಯರಿಗೆ ಗೊತ್ತಿರಲಿಲ್ಲ. ಕೆಲವು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ, ಎಂ.ಎಸ್ ನಗರ ಅಗ್ರಹಾರ ಲೇಔಟ್‌ನಲ್ಲಿ ಬಾಡಿಗೆಗೆ ಮನೆ ಪಡೆದು ನೆಲಸಿದ್ದರು. ಇಬ್ಬರೂ ಪ್ರತ್ಯೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಗಲಾಟೆ ಆರಂಭವಾಗಿತ್ತು. ಪತಿ ಕೆಲಸ ಮಾಡುತ್ತಿದ್ದ ಹೋಟೆಲ್ ಬಳಿಗೂ ಹೋಗಿ ಅನಸೂಯ ಗಲಾಟೆ ಮಾಡಿದ್ದರು. ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯನ್ನು ಆರೋಪಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದರು.
ಮೃತದೇಹದ ಜೊತೆಗೆ ಕಾಲ ಕಳೆದಿದ್ದ ಆರೋಪಿ: ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಮೃತದೇಹದ ಜೊತೆಗೆ ಆರೋಪಿ ಮೂರು ದಿನ ಕಳೆದಿದ್ದ. ಬಳಿಕ, ಮೃತದೇಹಕ್ಕೆ ಬೆಡ್‌ಶೀಟ್ ಸುತ್ತಿ ಖಾಲಿ ನಿವೇಶನಕ್ಕೆ ಎಸೆದಿದ್ದ. ಮೃತದೇಹ ಎಸೆದ ಮೇಲೆ ನಾಲ್ಕು ದಿನ ಅದೇ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ. ಯಾರಾದರೂ ನಿವೇಶನಕ್ಕೆ ಬಂದು ಹೋಗುತ್ತಾರೆಯೇ ಎಂಬುದನ್ನು ಗಮನಿಸಿದ್ದ. ಬಳಿಕ ಹೋಟೆಲ್‌ಗೆ ತೆರಳಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಕೃತ್ಯ ನಡೆದು 20 ದಿನವಾದ ಮೇಲೆ ನಿವೇಶನ ಸ್ವಚ್ಛಗೊಳಿಸಲು ಮಾಲೀಕರು ಬಂದಿದ್ದರು. ಆಗ ಮೃತದೇಹ ಪತ್ತೆಯಾಗಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೃತದೇಹ ಗುರುತು ಹಿಡಿಯಲಾಗದಷ್ಟು ಕೊಳೆತು ಹೋಗಿತ್ತು. ಹೀಗಾಗಿ, ಮಹಿಳೆಯ ಶವ ಗುರುತಿಸುವುದೇ ಪೊಲೀಸರಿಗೆ ಸವಾಲಾಗಿತ್ತು. ಆದರೆ, ಮಹಿಳೆಯ ಶವದ ಮೇಲಿದ್ದ ಬಟ್ಟೆಯೊಂದರ ‘ಬಾರ್ ಕೋಡ್’ ಪೊಲೀಸರ ಕಣ್ಣಿಗೆ ಬಿದ್ದಿತ್ತು. ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಎರಡು ತಿಂಗಳ ಹಿಂದೆ ಒಡಿಶಾದ ಭುವನೇಶ್ವರದಲ್ಲಿ ಬಟ್ಟೆ ಮಳಿಗೆಯೊಂದರಲ್ಲಿ ಬಟ್ಟೆ ಖರೀದಿಸಿರುವುದು ಗೊತ್ತಾಗಿತ್ತು. ಅದರ ಜಾಡು ಹಿಡಿದು ಹೋದಾಗ ಅನಸೂಯ ಮೃತದೇಹ ಎಂಬುದು ದೃಢಪಟ್ಟಿತ್ತು. ಮತ್ತೊಂದೆಡೆ, ಬಟ್ಟೆ ಖರೀದಿ ವೇಳೆ ಅನಸೂಯ ನೀಡಿದ್ದ ಮೊಬೈಲ್ ಸಂಖ್ಯೆಯನ್ನು ಮಳಿಗೆ ಸಿಬ್ಬಂದಿ ತಪ್ಪಾಗಿ ನಮೂದಿಸಿದ್ದರು. ಇತ್ತ ಪತ್ನಿ ಕೊಲೆ ಮಾಡಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಸಾಗರ್ ಚಂದ್ರ ರಾವತ್ ಬಗ್ಗೆ ಹೋಟೆಲ್ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ಒದಗಿಸಿದ್ದರು. ಬಳಿಕ ಸಾಗರ್ ಚಂದ್ರ ರಾವತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.
ಪತ್ನಿಯ ಸಿಮ್ ಕಾರ್ಡ್ ಬಳಸುತ್ತಿದ್ದ ಆರೋಪಿ
ಕೊಲೆ ಮಾಡಿ ಮೃತದೇಹ ವಿಲೇವಾರಿ ಮಾಡಿದ ಬಳಿಕ ಪತ್ನಿಯ ಮೊಬೈಲ್ ಸಿಮ್ ಕಾರ್ಡ್ ಅನ್ನು ಆರೋಪಿ ತನ್ನ ಮೊಬೈಲ್‌ಗೆ ಹಾಕಿಕೊಂಡು ಬಳಸುತ್ತಿದ್ದ. ಸಂಬಂಧಿಕರು ಹಾಗೂ ಪರಿಚಯಸ್ಥರು ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಈ ನಡುವೆ ಅನಸೂಯ ಸಂಬಂಧಿಕರಿಗೆ ಕರೆ ಮಾಡಿ ಕಷ್ಟವಿದೆ ಎಂದು ಹೇಳಿ ಅವರಿಂದ ₹1 ಸಾವಿರ ಫೋನ್ ಪೇ ಮಾಡಿಸಿಕೊಂಡಿದ್ದ ಎಂದು ಮೂಲಗಳು ಹೇಳಿವೆ.
ಸ್ವಚ್ಛತೆ ವೇಳೆ ಕೃತ್ಯ ಬಯಲು
ಖಾಲಿ ನಿವೇಶನವನ್ನು ಸ್ವಚ್ಛ ಮಾಡುವಂತೆ ರಾಜ್ಯ ಸರ್ಕಾರವು ಇತ್ತೀಚೆಗೆ ಆದೇಶ ಮಾಡಿತ್ತು. ನಿವೇಶನ ಸ್ವಚ್ಛ ಮಾಡುವ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿತ್ತು. ಸರ್ಕಾರದ ನಿಯಮದಿಂದ ಕೊಲೆ ಪ್ರಕರಣವೊಂದು ಪತ್ತೆಯಾಗಿದೆ.