ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ–ಮುಗಿಯದ ಗೊಂದಲ
ಮಂಗಳೂರು: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆಯನ್ನು ಜುಲೈ 27ರಂದು ಪ್ರಕಟಿಸಿದೆ. 60 ದಿನಗಳ ಒಳಗೆ ಸಲಹೆ/ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಅಧಿಸೂಚನೆಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ 44 ಗ್ರಾಮಗಳು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿವೆ.
ಪಶ್ಚಿಮ ಘಟ್ಟದ ಮೇಲಿನ ಅವ್ಯಾಹತ ಮಾನವ ಹಸ್ತಕ್ಷೇಪ ತಪ್ಪಿಸಲು ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸುವುದು ಅತ್ಯಗತ್ಯ ಎಂಬ ವಾದ ಪರಿಸರ ಕಾರ್ಯಕರ್ತರದ್ದು. ಆದರೆ, ಈ ಅಧಿಸೂಚನೆಯಲ್ಲಿರುವ ಷರತ್ತುಗಳು ಸ್ಥಳೀಯ ನಿವಾಸಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಲಿವೆ ಎಂಬ ಆತಂಕ ಈ ವಲಯದ ವ್ಯಾಪ್ತಿಯ ಗ್ರಾಮಸ್ಥರದು.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ (ಇಎಸ್‌ಎ) ಕೆಲ ಚಟುವಟಿಕೆಗಳಿಗೆ ನಿಷೇಧವಿದೆ. ಪರಿಸರಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತಿರುವ ಚಟುವಟಿಕೆಗಳ ನಿಷೇಧವನ್ನು ಪರಿಸರ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಕೆಲವೊಂದು ನಿಷೇಧಿತ ಚಟುವಟಿಕೆಗಳು ಜನ ಜೀವನದ ಮೇಲೆ ಭವಿಷ್ಯದಲ್ಲಿ ಪರಿಣಾಮಬೀರಲಿವೆ ಎಂದು ಈ ಕರಡನ್ನು ವಿರೋಧಿಸುತ್ತಿರುವ ಸ್ಥಳೀಯರು ದೂರಿದ್ದಾರೆ. ಅವರು ಅಲ್ಲಲ್ಲಿ ಸಭೆಗಳನ್ನು ನಡೆಸಿ ಜನಾಭಿಪ್ರಾಯವನ್ನು ಕ್ರೋಡೀಕರಿಸಿ ಸರ್ಕಾರದ ಮುಂದಿಡುತ್ತಿದ್ದಾರೆ
ಇಎಸ್‌ಎ–ಯಾವುದಕ್ಕೆಲ್ಲ ನಿಷೇಧ:ಗಣಿಗಾರಿಕೆ: ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ಸೇರಿದಂತೆ ಎಲ್ಲ ರೀತಿಯ ಗಣಿಗಾರಿಕೆಗೆ ಸಂಪೂರ್ಣ ನಿಷೇಧ. ಅಂತಿಮ ಇಎಸ್‌ಎ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಐದು ವರ್ಷಗಳ ಒಳಗೆ ಅಥವಾ ಚಾಲ್ತಿಯಲ್ಲಿರುವ ಗಣಿಗಾರಿಕೆ ಗುತ್ತಿಗೆಯ ಅವಧಿ ಮುಕ್ತಾಯಗೊಳ್ಳುವ ದಿನಾಂಕ, ಇವೆರಡರಲ್ಲಿ ಯಾವುದು ಮೊದಲೋ ಆ ಅವಧಿಯೊಳಗೆ ಅಸ್ತಿತ್ವದಲ್ಲಿರುವ ಎಲ್ಲಾ ಗಣಿಗಳನ್ನು ಹಂತಹಂತವಾಗಿ ಮುಚ್ಚಲಾಗುತ್ತದೆ.
ಉಷ್ಣ ವಿದ್ಯುತ್ ಸ್ಥಾವರ: ಯಾವುದೇ ಹೊಸ ಉಷ್ಣ ವಿದ್ಯುತ್ ಯೋಜನೆಗೆ ಅಥವಾ ಅಸ್ತಿತ್ವದಲ್ಲಿರುವ ಅಂತಹ ಸ್ಥಾವರಗಳ ವಿಸ್ತರಣೆಗೆ ಅವಕಾಶವಿಲ್ಲ.
ಕೈಗಾರಿಕೆ: ಕೆಂಪು ವರ್ಗದ (ಮಾಲಿನ್ಯ ಸೂಚ್ಯಂಕ 60 ಅಥವಾ ಅದಕಿಂತ ಹೆಚ್ಚು ಇರುವವು ಮತ್ತು ಗರಿಷ್ಠ ಪರಿಸರ ಮಾಲಿನ್ಯ ಉಂಟುಮಾಡುವವು) ಹೊಸ ಕೈಗಾರಿಕೆಗಳಿಗೆ ಮತ್ತು ಅಸ್ತಿತ್ವದಲ್ಲಿರುವ ಅಂತಹ ಕೈಗಾರಿಕೆಗಳ ವಿಸ್ತರಣೆಗೆ ಅವಕಾಶವಿಲ್ಲ. ಆದರೆ, ಆರೋಗ್ಯ ರಕ್ಷಣೆ ಸಂಸ್ಥೆಗಳಂತಹ ಕೆಂಪು ವರ್ಗದ ಕೈಗಾರಿಕೆಯನ್ನು ಮುಂದುವರಿಸಬಹುದು.
ಕಟ್ಟಡ, ನಿರ್ಮಾಣ, ಟೌನ್‌ಶಿಪ್ ಮತ್ತು ಪ್ರದೇಶ ಅಭಿವೃದ್ಧಿ ಯೋಜನೆಗಳಿಗೆ ನಿಷೇಧವಿದೆ. 20ಸಾವಿರ ಚ.ಮೀ. ಮತ್ತು ಅದಕ್ಕಿಂತ ಹೆಚ್ಚಿನ ನಿರ್ಮಾಣ ಪ್ರದೇಶವಿರುವ ಹೊಸ ಯೋಜನೆ, ಕಟ್ಟಡ ವಿಸ್ತರಣೆ ಹಾಗೂ ನಿರ್ಮಾಣ ಯೋಜನೆ ಕೈಗೊಳ್ಳುವಂತಿಲ್ಲ. 50 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶ ಅಥವಾ 1.50 ಲಕ್ಷ ಚ.ಮೀ.ಗಿಂತ ಹೆಚ್ಚಿನ ನಿರ್ಮಾಣ ಪ್ರದೇಶವಿರುವ ಹೊಸ ಟೌನ್‌ಶಿಪ್‌ಗೆ ಮತ್ತು ಟೌನ್‌ಶಿಪ್ ವಿಸ್ತರಣೆಗೆ ಹಾಗೂ ಪ್ರದೇಶ ಅಭಿವೃದ್ಧಿ ಯೋಜನೆಗಳಿಗೆ ನಿಷೇಧ.
ಯಾವುದಕ್ಕೆ ನಿರ್ಬಂಧವಿಲ್ಲ: ಅಸ್ತಿತ್ವದಲ್ಲಿರುವ ವಾಸದ ಮನೆಗಳ ದುರಸ್ತಿ ಅಥವಾ ನವೀಕರಣಕ್ಕೆ ನಿರ್ಬಂಧವಿಲ್ಲ. ಈ ಅಧಿಸೂಚನೆಯ ನಿಬಂಧನೆಗಳು ಪರಿಸರ ಸೂಕ್ಷ್ಮ ಪ್ರದೇಶದಲ್ಲಿನ ಆಸ್ತಿಯ ಮಾಲೀಕತ್ವದ ಮೇಲೆ ಪರಿಣಾಮ ಬೀರುವುದಿಲ್ಲ. ಈಗಿರುವ ಎಲ್ಲಾ ಆರೋಗ್ಯ ರಕ್ಷಣೆ ಸಂಸ್ಥೆಗಳು ಮುಂದುವರಿಯಬಹುದು. ಪ್ರಸ್ತಾವಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬಹುದು.
ಯಾವುದಕ್ಕೆಲ್ಲ ಅವಕಾಶ:ಹೊಸ ಜಲವಿದ್ಯುತ್ ಯೋಜನೆಗೆ ಷರತ್ತುಬದ್ಧ ಅವಕಾಶ ನೀಡಲಾಗುತ್ತದೆ. ಕಿತ್ತಳೆ (ಮಾಲಿನ್ಯ ಸೂಚ್ಯಂಕ 41 ರಿಂದ 59ರಷ್ಟಿರುವ ಮಧ್ಯಮ ಪ್ರಮಾಣದ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು) ಅಥವಾ ಬಿಳಿ ವರ್ಗದ (ಮಾಲಿನ್ಯ ಸೂಚ್ಯಂಕ 20 ಅಥವಾ ಅದಕ್ಕಿಂತ ಕಡಿಮೆ ಇರುವ, ಅತಿ ಕಡಿಮೆ ಅಥವಾ ಯಾವುದೇ ಮಾಲಿನ್ಯ ಉಂಟುಮಾಡದವು ) ಕೈಗಾರಿಕೆಗಳಿಗೆ ಪರಿಸರ ನಿಯಮಗಳ ಕಟ್ಟುನಿಟ್ಟಿನ ಪಾಲನೆಯ ಷರತ್ತುಗಳೊಂದಿಗೆ ಅವಕಾಶ ನೀಡಲಾಗುತ್ತದೆ. ಪರಿಸರದ ಮೇಲೆ ಕಡಿಮೆ ಪರಿಣಾಮವನ್ನು ಉಂಟುಮಾಡುವ ಕೈಗಾರಿಕೆಗಳನ್ನು ಉತ್ತೇಜಿಸಲಾಗುತ್ತದೆ.
ಯಾವುದೇ ಯೋಜನೆಗೆ ಅನುಮೋದನೆ ನೀಡುವಾಗ 2006ರ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ ಪ್ರಕಾರ ಪೂರ್ವಾನುಮತಿ ಅವಶ್ಯಕತೆಗಳನ್ನು ಪಾಲಿಸಬೇಕು ಮತ್ತು ಯೋಜನೆಗಳು ಹಾಗೂ ಚಟುವಟಿಕೆ ಕೈಗೊಳ್ಳಲು ಗ್ರಾಮ ಸಭೆಯ ಒಪ್ಪಿಗೆ ಕಡ್ಡಾಯ.
ದ.ಕ: ಇಎಸ್‌ಎ ವ್ಯಾಪ್ತಿಯ ಗ್ರಾಮಗಳು
ಬೆಳ್ತಂಗಡಿ ತಾಲ್ಲೂಕು; ಚಾರ್ಮಾಡಿ, ಕಳೆಂಜ, ಕುತ್ಲೂರು, ಮಲವಂತಿಗೆ, ನಡ, ನಾಲ್ಕೂರು, ನಾರಾವಿ, ನಾವರ, ನಾವೂರು, ನೆರಿಯ, ಪುದುವೆಟ್ಟು, ರೆಖ್ಯ, ಸವಣಾಲು, ಶಿಬಾಜೆ, ಶಿರ್ಲಾಲು, ಶಿಶಿಲ, ಸುಲ್ಕೇರಿ, ಸುಲ್ಕೇರಿಮೊಗ್ರು.
ಪುತ್ತೂರು: ಆಲಂತಾಯ, ಬಾಳ್ಯ,
ಕಡಬ: ಬಿಳಿನೆಲೆ, ದೋಲ್ಪಾಡಿ, ಗೋಳಿತ್ತೊಟ್ಟು, ಇಚ್ಲಂಪಾಡಿ, ಕೊಂಬಾರು, ಕೌಕ್ರಾಡಿ, ಶಿರಾಡಿ, ಸಿರಿಬಾಗಿಲು, ಬಳ್ಪ, ಸುಬ್ರಹ್ಮಣ್ಯ, ಏನೆಕಲ್ಲು
ಸುಳ್ಯ: ಅಮರಮುಡ್ನೂರು, ಅಲೆಟ್ಟಿ, ಅರಂತೋಡು, ಬಾಳುಗೋಡು,ದೇವಚಳ್ಳ, ಹರಿಹರ ಪಲ್ಲತ್ತಡ್ಕ, ಕಲ್ಮಕಾರು, ಕುತ್ಕುಂಜ, ಮಡಪ್ಪಾಡಿ, ನಾಲ್ಕೂರು, ಸಂಪಾಜೆ, ತೋಡಿಕಾನ, ಉಬರಡ್ಕ ಮಿತ್ತೂರು,
‘ಜನರ ಜೀವನೋಪಾಯಕ್ಕೆ ಯಾವುದೇ ಅಡ್ಡಿ ಇಲ್ಲ’
ಅರಣ್ಯಗಳಿಗೆ ಸಂಬಂಧಿಸಿ ಅನೇಕ ವಿಧದ ಸೂಕ್ಷ್ಮ ವಲಯಗಳಿವೆ. ರಾಷ್ಟ್ರೀಯ ಉದ್ಯಾನ ಅಥವ ವನ್ಯಜೀವಿಧಾಮಗಳಿಗೆ ಗಡಿ ಗುರುತು ಮಾಡಿ ಪರಿಸರ ಸೂಕ್ಷ್ಮ ವಲಯವನ್ನು ಗುರುತಿಸುತ್ತೇವೆ. ಅಲ್ಲಿ ಕ್ವಾರಿ, ಕ್ರಷರ್, ದೊಡ್ಡ ಕೈಗಾರಿಗೆಗಳು ಸಂಪೂರ್ಣ ನಿಷೇಧ. ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಜನರ ದೈನಂದಿನ ಜನಜೀವನಕ್ಕೆ ಯಾವುದೇ ಅಡ್ಡಿ ಇಲ್ಲ. ಕೃಷಿ ನಡೆಸಲು, ಜನ ಮನೆ ಕಟ್ಟಿಕೊಳ್ಳಲು, ಅಂಗಡಿ ಮೂಲಕ ಜೀವನೋಪಾಯ ಕಂಡುಕೊಳ್ಳಲು ಯಾವುದೇ ತೊಂದರೆಯಾಗದು. ಇಲ್ಲಿ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಅಂತಹ ಪ್ರಸ್ತಾವ ಕರಡು ಅಧಿಸೂಚನೆಯಲ್ಲಿಲ್ಲ. ಸೂಕ್ಷ್ಮ ಪ್ರದೇಶದಲ್ಲಿ ಕೆಲವು ನಿರ್ಬಂಧಿತ ಚಟುವಟಿಕೆಗಳನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ ಯಾರಾದರು ರೆಸಾರ್ಟ್ ಮತ್ತಿತರ ವಾಣಿಜ್ಯ ಚಟುವಟಿಕೆ ನಡೆಸಬೇಕಾದರೆ, ಅದಕ್ಕೆ ಸಂಬಂಧಿಸಿದ ಸಮಿತಿಯ ಅನುಮತಿ ಪಡೆಯಬೇಕಾಗುತ್ತದೆ. ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯಗಳಿಗೆ ಸಂಬಂಧಿಸಿ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ನಿರ್ಬಂಧಿತ ಚಟುವಟಿಕೆಗಳ ಹಾಗೂ ಗ್ರಾಮಗಳ ವ್ಯಾಪ್ತಿ ಬದಲಾವಣೆಗೆ ಈಗಲೂ ಅವಕಾಶ ಇದೆ. ಸಿ.ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ದಕ್ಷಿಣ ಕನ್ನಡ