
ಬಯಲುಸೀಮೆಯತ್ತ ಹರಿದ 'ಭದ್ರೆ': ದುರ್ಗದ ಜನರಲ್ಲಿ ಸಂಭ್ರಮ
ಚಿತ್ರದುರ್ಗ: ರಾಜ್ಯದಲ್ಲಿ ಅತೀ ಕಡಿಮೆ ಮಳೆಯಾಗುವ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಬಯಲುಸೀಮೆಯ ಕೋಟೆನಾಡಿನತ್ತ ಈಗ ‘ಭದ್ರೆ’ ಬರುತ್ತಿದ್ದಾಳೆ. ನಾಲೆಯಲ್ಲಿ ನೀರು ಹರಿಯುತ್ತಿರು ವುದನ್ನು ಕಂಡು ದುರ್ಗದ ಜನ ಸಂಭ್ರಮಿಸುತ್ತಿದ್ದಾರೆ.
2008ರಲ್ಲಿ ಆರಂಭವಾದ ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ 18 ವರ್ಷಗಳಿಂದ ಕುಂಟುತ್ತಲೇ ಇತ್ತು. ಹಲವೆಡೆ ಕಾಮಗಾರಿ ಅಪೂರ್ಣವಾಗಿದ್ದರೂ ದುರ್ಗದತ್ತ ನೀರು ಬರುತ್ತಿರುವುದು ಸಂಭ್ರಮ ಸೃಷ್ಟಿಸಿದೆ. ಹನಿ ನೀರಾವರಿ, ಏತ ನೀರಾವರಿ, ತುಮಕೂರು ಶಾಖಾ ನಾಲೆ (ಟಿಬಿಸಿ), ಜಗಳೂರು ಶಾಖಾ ನಾಲಾ ಕಾಮಗಾರಿಗಳು ಇನ್ನೂ ಮುಗಿದಿಲ್ಲ. ಆದರೆ ಚಿತ್ರದುರ್ಗ ಶಾಖಾ ನಾಲೆ (ಸಿಬಿಸಿ) ಪೂರ್ಣಗೊಂಡಿದೆ.
ದುಪ್ಪಟ್ಟಾದ ವೆಚ್ಚ, ಕೇಂದ್ರದ ಅನುದಾನದ ಕೊರತೆ, ಅರಣ್ಯ ಇಲಾಖೆ ಅನುಮೋದನೆ ಸಮಸ್ಯೆ, ಸಾಲು ಸಾಲು ಕೋರ್ಟ್ ಕೇಸ್, ಅರಣ್ಯದಲ್ಲಿ ಪಂಪ್‌ಹೌಸ್ ನಿರ್ಮಾಣ, ವಿದ್ಯುತ್ ಪೂರೈಕೆ ಸವಾಲು, ಸುರಂಗ ಮಾರ್ಗ, ದಾವಣಗೆರೆ ರೈತರ ಆಕ್ಷೇಪಗಳ ನಡುವೆಯೂ ಚಿತ್ರದುರ್ಗ ಶಾಖಾ ನಾಲೆಗೆ ಪರೀಕ್ಷಾರ್ಥವಾಗಿ ನೀರು ಹರಿಸಿರುವುದು ಭಗೀರಥ ಪ್ರಯತ್ನವೇ ಸರಿ ಎಂದು ಬಣ್ಣಿಸಲಾಗುತ್ತಿದೆ.
‘ಮೂರು ದಶಕಗಳ ಹೋರಾಟದ ಫಲವಾಗಿ ದುರ್ಗದತ್ತ ನೀರು ಹರಿದು ಬರುತ್ತಿದೆ. ಪರೀಕ್ಷಾರ್ಥ ವಾಗಿಯಾ ದರೂ ನೀರು ಬಿಟ್ಟಿರುವುದು ರೈತರಲ್ಲಿ ಭರವಸೆ ಮೂಡಿಸಿದೆ’ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮುಖಂಡ ಜೆ.ಯಾದವರೆಡ್ಡಿ ತಿಳಿಸಿದರು.
ಭದ್ರಾ ಜಲಾಶಯ ದಿಂದ 114 ಕಿ.ಮೀ ದೂರದವರೆಗೆ ನಾಲೆ ನಿರ್ಮಿಸಲಾಗಿದೆ. 2 ಅತ್ಯಾಧುನಿಕ ಪಂಪ್ ಹೌಸ್ ಮೂಲಕ ತಲಾ 147 ಅಡಿ ಮೇಲೇರಿ, 150 ಅಡಿ ಕೆಳಗಿಳಿದು, ತೊಟ್ಟಿಯಲ್ಲಿ ಧುಮ್ಮಿಕ್ಕಿ (ಡೆಲಿವರಿ ಛೇಂಬರ್) ಗುರುತ್ವಾಕರ್ಷಣ ಶಕ್ತಿಯಿಂದ ಮುಂದೆ ಹರಿಯುವ ನೀರು ಎಂಜಿನಿ ಯರಿಂಗ್ ಅದ್ಭುತವೆಂದೇ ಬಣ್ಣಿಸಲಾಗಿದೆ. ಅಜ್ಜಂಪುರ ಸುರಂಗ ಮಾರ್ಗ ರಾಜ್ಯದ ಅತೀ ಉದ್ದದ ಸುರಂಗ ಎನಿಸಿಕೊಂಡಿದೆ. ಗೋನೂರು ಅಕ್ವಡಕ್ಟ್ ದೇಶದ ಅತೀ ಎತ್ತರದ (120 ಅಡಿ) ಅಕ್ವಡಕ್ಟ್ ಆಗಿದೆ.
‘ಪರೀಕ್ಷಾರ್ಥವಾಗಿ 3 ಟಿಎಂಸಿ ಅಡಿ ನೀರು ಹರಿಸಲು ಅನುಮತಿ ದೊರೆತಿದೆ. ಸದ್ಯ ಕೆರೆಗೆ ನೀರು ಬಿಡುವುದಿಲ್ಲ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಎಚ್.ರವಿಶಂಕರ್ ತಿಳಿಸಿದರು.
ಈ ಯೋಜನೆಯ ಮುಖ್ಯ ಉದ್ದೇಶ ಹನಿ ನೀರಾವರಿ. ಅದಕ್ಕಾಗಿ 21.90 ಟಿಎಂಸಿ ಅಡಿ ನೀರು ಹಂಚಲಾಗಿದೆ. ಆದರೆ ಇಲ್ಲಿಯವರೆಗೂ ಹನಿ ನೀರಾವರಿ ಕೆಲಸವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದೆ. ರಾಜಕೀಯ ಕೈಬಿಟ್ಟು ರಾಜ್ಯ– ಕೇಂದ್ರ ಸರ್ಕಾರಗಳು ಕೈಜೋಡಿಸಿದರೆ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂದು ನೀರಾವರಿ ತಜ್ಞರು ಹೇಳುತ್ತಾರೆ.
ಉಪ ಚುನಾವಣೆ ಮುನ್ನಾ ನೀರು...
‘ಕೋಟೆನಾಡಿಗೆ ನೀರು ಹರಿದು ಬರುತ್ತಿರುವುದಕ್ಕೆ ಸಂಭ್ರಮವಿದೆ. ಮೇ, ಜೂನ್‌ನಲ್ಲಿ ಹರಿಸಿದ್ದರೆ ಬರದಿಂದ ಮುಕ್ತಿ ಪಡೆಯಬಹುದಿತ್ತು. ಹಿರಿಯೂರು ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ಈಗ ತರಾತುರಿಯಲ್ಲಿ ನೀರು ಬಿಟ್ಟಿರಬಹುದು’ ಎಂದು ನೀರಾವರಿ ಹೋರಾಟ ಸಮಿತಿಯ ಮುಖಂಡ ಈಚಘಟ್ಟ ಸಿದ್ದವೀರಪ್ಪ ಆರೋಪಿಸಿದರು.