
ದಾವಣಗೆರೆಯಲ್ಲಿ ಗುಂಪುಗಳ ನಡುವೆ ಮಾರಾಮಾರಿ: ಮೂವರಿಗೆ ಗಂಭೀರ ಗಾಯ
ದಾವಣಗೆರೆ: ಇಲ್ಲಿನ ಬಿ.ಡಿ. ಲೇಔಟ್‌ನಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ನಡೆದ ಮಾರಾಮಾರಿಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ನಿವಾಸಿಗಳಾದ ಮೈನುದ್ದೀನ್, ಜುನೇದ್ ಹಾಗೂ ಇರ್ಫಾನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಗಳನ್ನು ಆಜಾದ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೈನುದ್ದೀನ್ ಹಾಗೂ ಸ್ನೇಹಿತರು ರಸ್ತೆ ಬದಿಯಲ್ಲಿದ್ದಾಗ ಮೊಹಮ್ಮದ್ ದಾ ಗುಂಪಿನ ಹತ್ತಾರು ಮಂದಿ ಏಕಾಏಕಿ ದಾಳಿ ನಡೆಸಿದ್ದಾರೆ. ದೊಣ್ಣೆ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗುಂಪು ಮಾರಾಮಾರಿ ಕಂಡ ಜನರು ಭಯಭೀತರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.