
ಹುಬ್ಬಳ್ಳಿ: ಈರುಳ್ಳಿ ಆವಕ ಕುಸಿತ, ದರ ಹೆಚ್ಚಳ
ಹುಬ್ಬಳ್ಳಿ: ಮಳೆ ಕೊರತೆಯಿಂದ ನಗರದ ಅಮರಗೋಳದಲ್ಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಈರುಳ್ಳಿಯ ಆವಕ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದರ ಪರಿಣಾಮ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹30 ರಿಂದ ₹40 ಇದ್ದ ಈರುಳ್ಳಿಯ ದರ ಈಗ ₹80 ರಿಂದ ₹90ಕ್ಕೆ ಏರಿಕೆಯಾಗಿದೆ.
ಈ ವರ್ಷ ರೈತರು ಈರುಳ್ಳಿ ಬದಲು ಪರ್ಯಾಯ ಬೆಳೆಗೆ ಮೊರೆ ಹೋಗಿದ್ದಾರೆ. ಧಾರವಾಡ, ಬಾಗಲಕೋಟೆ, ವಿಜಯಪುರ ಭಾಗದ ಸುತ್ತಮುತ್ತಲಿನ ನೀರಾವರಿ ಪ್ರದೇಶದಲ್ಲಿ ಮಾತ್ರ ಕೆಲವು ರೈತರು ಈರುಳ್ಳಿ ಬೆಳೆದಿದ್ದು, ಈಗಷ್ಟೇ ಕಟಾವು ಆರಂಭವಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ.
ಒಂದು ತಿಂಗಳ ಹಿಂದೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಈರುಳ್ಳಿ ದರ 1 ಕ್ವಿಂಟಲ್‌ಗೆ ಅಂದಾಜು ₹3 ಸಾವಿರ ಇತ್ತು. ಈಗ ₹4,800ಕ್ಕೆ ಏರಿಕೆಯಾಗಿದೆ. ಬುಧವಾರ ಹರಾಜಿನಲ್ಲಿ ವ್ಯಾಪಾರಸ್ಥರು ಕ್ವಿಂಟಲ್‌ಗೆ ₹4,400 ರಿಂದ ₹4,800ರಂತೆ ಖರೀದಿಸಿದರು. ಸಣ್ಣ ಗಾತ್ರದ ಈರುಳ್ಳಿ ₹3,200 ರಿಂದ ₹3,800ಕ್ಕೆ ಹರಾಜು ಆಯಿತು.
‘ಎಪಿಎಂಸಿಗೆ ದಿನಕ್ಕೆ 20 ರಿಂದ 22 ಟ್ರಕ್‌ಗಳಷ್ಟು ಈರುಳ್ಳಿ ಆವಕ ಆಗುತ್ತಿತ್ತು. ಆದರೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ದಿನಕ್ಕೆ ಸರಾಸರಿ 235 ರಿಂದ 277 ಟನ್ ಮಾತ್ರ ಆವಕವಾಗಿದೆ. ಸದ್ಯ ಈಗಷ್ಟೇ ಕಟಾವು ಮಾಡಿದ ಸ್ಥಳೀಯ ಹಾಗೂ ಮಹಾರಾಷ್ಟ್ರದ ಹಳೆ ಸಂಗ್ರಹದ ಈರುಳ್ಳಿ ಬರುತ್ತಿದ್ದು, ಶೇ 70ರಷ್ಟು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಮಲೇಶಿಯಾಕ್ಕೆ ರಫ್ತಾಗುತ್ತಿದೆ’ ಎನ್ನುತ್ತಾರೆ ವರ್ತಕರು.
‘ಡಿಸೆಂಬರ್ ವೇಳೆಗೆ ಪುಣೆ ಮತ್ತು ತೆಲಗಿಯ ಹೊಸ ಈರುಳ್ಳಿ ಪೂರೈಕೆಯಾಗಲಿದ್ದು, ಅಲ್ಲಿಯವರೆಗೆ ಸ್ಥಳೀಯ ಮತ್ತು ಸಂಗ್ರಹದ ಈರುಳ್ಳಿಯನ್ನೇ ಅವಲಂಬಿಸಬೇಕಿದೆ. ಹುಬ್ಬಳ್ಳಿ ಎಪಿಎಂಸಿಯಿಂದ ಹೊರರಾಜ್ಯಕ್ಕೆ ಪ್ರತಿದಿನ 50 ರಿಂದ 60 ಲಾರಿಯಷ್ಟು ಈರುಳ್ಳಿ ಹೋಗುತ್ತಿತ್ತು, ಈಗ 30 ಲಾರಿಯಷ್ಟೇ ಹೋಗುತ್ತಿವೆ. ರಾಜ್ಯದಲ್ಲಿ ಶೇ 40ರಷ್ಟು ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಧಾರವಾಡ ಜಿಲ್ಲೆ ಗ್ರಾಹಕರಿಗೆ ಪ್ರತಿ ದಿನ ಕನಿಷ್ಠ 15 ಲಾರಿಯಷ್ಟು ಈರುಳ್ಳಿ ಬೇಕು. ಬೆಳೆ ಕಡಿಮೆಯಿದೆ, ಬೇಡಿಕೆ ಹೆಚ್ಚಿದೆ’ ಎಂದು ಈರುಳ್ಳಿ ವ್ಯಾಪಾರಸ್ಥ ಅತೀಫ್ ಬಾಗ್ಬಾನ್ ‘ಪ್ರಜಾವಾಣಿ’ಗೆ ಹೇಳಿದರು.