ಬೀದರ್‌ನಲ್ಲಿ ಮಣ್ಣಿನ ಗಣಪನಿಗೆ ಹೆಚ್ಚಿದ ಬೇಡಿಕೆ, ಪರಿಸರ ಸ್ನೇಹಿ ಮೂರ್ತಿಗಳ ಸೆಳೆತ

ಬೀದರ್‌ನಲ್ಲಿ ಮಣ್ಣಿನ ಗಣಪನಿಗೆ ಹೆಚ್ಚಿದ ಬೇಡಿಕೆ, ಪರಿಸರ ಸ್ನೇಹಿ ಮೂರ್ತಿಗಳ ಸೆಳೆತ

ಬೀದರ್‌ನಲ್ಲಿ ಮಣ್ಣಿನ ಗಣಪನಿಗೆ ಹೆಚ್ಚಿದ ಬೇಡಿಕೆ, ಪರಿಸರ ಸ್ನೇಹಿ ಮೂರ್ತಿಗಳ ಸೆಳೆತ

ಬೀದರ್‌: ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನಿಂದ (ಪಿಒಪಿ) ತಯಾರಿಸುವ ಗಣಪನ ಬದಲು ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಪೂಜಿಸಬೇಕೆಂಬ ಸರ್ಕಾರ ಹಾಗೂ ಪರಿಸರವಾದಿಗಳ ಮಾತಿಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಇಂಬು ಸಿಗುತ್ತಿದೆ.

ಇದಕ್ಕೆ ನಿದರ್ಶನ ದಾಖಲೆ ಪ್ರಮಾಣದಲ್ಲಿ ಮಣ್ಣಿನ ಬೆನಕನ ಮೂರ್ತಿಗಳು ಮಾರಾಟವಾಗುತ್ತಿರುವುದು. ಇದರಲ್ಲೂ ಬೀದರ್‌ ತಾಲ್ಲೂಕಿನ ಗುನ್ನಳ್ಳಿ ಗ್ರಾಮದ ಹಣಮಂತ ಮಲ್ಕಾಪುರೆ ತಯಾರಿಸುವ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಸಂಪೂರ್ಣವಾಗಿ ಮಣ್ಣಿನಿಂದಲೇ ಇವರು ಮೂ‌ರ್ತಿಗಳನ್ನು ಮಾಡುತ್ತಾರೆ. ನೋಡಲು ಬಹಳ ಚೆಂದವಾಗಿರುತ್ತವೆ.

ಇವರ ಕೌಶಲ ಹಾಗೂ ಕೈಚಳಕದಿಂದ ವಿವಿಧ ಬಗೆಯ ಮೂರ್ತಿಗಳು ಜನ್ಮತಾಳುತ್ತವೆ. ಇವರ ಮೂರ್ತಿಗಳನ್ನು ಕೊಂಡೊಯ್ದು ಪೂಜಿಸಿ, ಬಳಿಕ ನೀರಿನಲ್ಲಿ ವಿಸರ್ಜನೆ ಮಾಡಿದರೆ ಸಂಪೂರ್ಣ ಕರಗಿ ಹೋಗುತ್ತದೆ. ಬಳಿಕ ಆ ಮಣ್ಣಿನಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಬೆಳೆಸಬಹುದು.

ಅಂದಹಾಗೆ, ಹಣಮಂತ ಅವರು ಕಳೆದ ಎಂಟು ವರ್ಷಗಳಿಂದ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಮೊದಲ ವರ್ಷ 30 ಮೂರ್ತಿಗಳನ್ನು ಮಾಡಿದ್ದರು. ಆನಂತರ ವರ್ಷ ಕಳೆದಂತೆ ಸಂಖ್ಯೆ ಹೆಚ್ಚುತ್ತ ಹೋಯಿತು. ಈ ವರ್ಷ ಈಗಾಗಲೇ 300 ಮೂರ್ತಿಗಳು ಮಾರಾಟವಾಗಿವೆ.

ನಾಲ್ಕರಿಂದ 14 ಇಂಚಿನ ವರೆಗೆ ಮೂರ್ತಿಗಳನ್ನು ತಯಾರಿಸುತ್ತಾರೆ. ಕಳೆದ ಎರಡು ತಿಂಗಳಿಂದ ನಗರದ ಮೈಲೂರ್‌ ಕ್ರಾಸ್‌ನಲ್ಲಿ ಮೂರ್ತಿಗಳನ್ನು ಮಾಡಿ, ಮಾರಾಟ ಮಾಡುತ್ತಿದ್ದಾರೆ. ಇವರ ಮಳಿಗೆಗೆ ಭೇಟಿ ಕೊಟ್ಟು, ಎಷ್ಟು ಎತ್ತರ, ಯಾವ ವಿನ್ಯಾಸ ಎಂದು ತಿಳಿಸಿ, ಮುಂಗಡವಾಗಿ ಪಾವತಿಸಿದರಷ್ಟೇ ಮೂರ್ತಿಗಳನ್ನು ಮಾಡಿಕೊಡುತ್ತಾರೆ. ಇವರ ಚಾಕಚಾಕ್ಯತೆ ಕಂಡು ಅನೇಕ ಗಣೇಶ ಮಂಡಳಿಯವರು ಎತ್ತರದ ಬಣ್ಣದ ಮೂರ್ತಿಗಳನ್ನು ಮಾಡಿಕೊಡುವಂತೆ ಬೇಡಿಕೆ ಸಲ್ಲಿಸಿದ್ದರು. ಆದರೆ, ಅದನ್ನು ಹಣಮಂತ ನಯವಾಗಿ ತಿರಸ್ಕರಿಸಿದ್ದಾರೆ.

‘ನನಗೆ ದೇವರು ಕಲೆ ಎಂಬ ವಿದ್ಯೆ ಕೊಟ್ಟಿದ್ದಾರೆ. ಹಾಗಂತ ಎಲ್ಲವೂ ಮಾರಾಟಕ್ಕಿಟ್ಟಿಲ್ಲ. ಮಣ್ಣಿನ ಗಣೇಶನ ಕೂರಿಸಿ ಪ್ರತಿಷ್ಠಾಪಿಸಿದರೆ ಪರಿಸರ ಹಾಗೂ ಎಲ್ಲರಿಗೂ ಒಳ್ಳೆಯದು. ಈ ಕಾರಣಕ್ಕಾಗಿಯೇ ನಾನು ಕೇವಲ ಮಣ್ಣಿನ ಗಣೇಶನ ಮೂರ್ತಿಗಳನ್ನು ಮಾತ್ರ ಮಾಡುತ್ತೇನೆ. ಮೂರ್ತಿಯ ಕಣ್ಣು, ಹಣೆ, ಸೊಂಡಿಲು ಭಾಗಕ್ಕೆ ಮಾತ್ರ ಹಾನಿಕಾರಕವಲ್ಲದ ಜಲ ವರ್ಣದ ಬಣ್ಣಗಳನ್ನು ಬಳಸುತ್ತೇನೆ’ ಎನ್ನುತ್ತಾರೆ ಹಣಮಂತ ಮಲ್ಕಾಪುರೆ.

ಚೌತಿ ಹಬ್ಬಕ್ಕೆ ಇನ್ನೂ ನಾಲ್ಕೈದು ದಿನಗಳಿದ್ದು, ಎಲ್ಲೆಡೆ ಪಿಒಪಿ ಮೂರ್ತಿಗಳ ಮಾರಾಟವೇ ಹೆಚ್ಚಾಗಿದೆ. ಇಂತಹದ್ದರಲ್ಲಿ ಹಣಮಂತ ಮಲ್ಕಾಪುರೆ ಅವರು ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡುವುದರ ಮೂಲಕ ಭಿನ್ನವಾಗಿದ್ದಾರೆ.

ಪಿಒಪಿ ಗಣೇಶನ ಮೂರ್ತಿಗಳನ್ನು ಮರೆತು ಮಣ್ಣಿನ ಗಣಪನ ಕೂರಿಸಿದರೆ ಪರಿಸರ ಹಾಳಾಗಲ್ಲ. ನೀರು ಮಲಿನವಾಗಲ್ಲ. ಜಲಚರಗಳು ಸಾಯುವುದಿಲ್ಲ. ಹಬ್ಬ ಪರಿಸರಸ್ನೇಹಿಯಾಗಿ ಆಚರಿಸುವುದು ಒಳಿತು ಹಣಮಂತ ಮಲ್ಕಾಪುರೆ, ಮೂರ್ತಿ ಕಲಾವಿದ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ