ಕೆಪಿಎಸ್‌ಸಿ ಅಕ್ರಮ | ‘ಕಾವೇರಿ’ಗೆ ಸಾಕ್ಷ್ಯ ಎಸೆದ ಕನ್ನಾಳೆ

ಕೆಪಿಎಸ್‌ಸಿ ಅಕ್ರಮ | ‘ಕಾವೇರಿ’ಗೆ ಸಾಕ್ಷ್ಯ ಎಸೆದ ಕನ್ನಾಳೆ

ಕೆಪಿಎಸ್‌ಸಿ ಅಕ್ರಮ | ‘ಕಾವೇರಿ’ಗೆ ಸಾಕ್ಷ್ಯ ಎಸೆದ ಕನ್ನಾಳೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಪ್ರಕರಣದ ಮಧ್ಯವರ್ತಿ ಬಸವರಾಜ್‌ ಕನ್ನಾಳೆ, ಲ್ಯಾಪ್‌ಟಾಪ್‌, ಮೊಬೈಲ್‌ ಸೇರಿ ಕೆಲವು ದಾಖಲೆಗಳನ್ನು ಕಾವೇರಿ ನದಿಗೆ ಎಸೆದು ಸಾಕ್ಷ್ಯ ನಾಶಪಡಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಕಸ್ಟಡಿಯಲ್ಲಿರುವ ಕನ್ನಾಳೆ ಅವರನ್ನು ತನಿಖಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. 

‘ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸುತ್ತಿದ್ದಂತೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ತೆರಳಿ, ಕಾವೇರಿ ನದಿಗೆ ಲ್ಯಾಪ್‌ಟಾ‍ಪ್‌ ಹಾಗೂ ಮೊಬೈಲ್‌ ಎಸೆದಿರುವುದಾಗಿ ವಿಚಾರಣೆ ವೇಳೆ ಕನ್ನಾಳೆ ಬಾಯ್ಬಿಟ್ಟಿದ್ದಾರೆ. ಅವರ ಹೇಳಿಕೆ ಆಧರಿಸಿ ತಾಂತ್ರಿಕ ಸಾಕ್ಷ್ಯಾಧಾರ ಕಲೆಹಾಕಲಾಗುತ್ತಿದೆ. ಮೊಬೈಲ್‌ ಲೊಕೇಷನ್ ಪತ್ತೆ ಹಚ್ಚಲಾಗುತ್ತಿದೆ. ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಯನ್ನೂ ಸಂಗ್ರಹಿಸಲಾಗುತ್ತಿದೆ’ ಎಂದು ಸಿಐಡಿ ಪೊಲೀಸರು ಹೇಳಿದರು.

‘ಕನ್ನಾಳೆಯ ಎರಡು ಮೊಬೈಲ್‌ ಹಾಗೂ ಸಂಜಯ ನಗರದಲ್ಲಿ ಸಿಕ್ಕಿದ ಅಭ್ಯರ್ಥಿಗಳ 10 ಪ್ರವೇಶಪತ್ರಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿದೆ. ಕನ್ನಾಳೆ ಬಳಿಯಿದ್ದ ಇನ್ನೊಂದು ಮೊಬೈಲ್‌ ಅನ್ನೂ ನದಿಗೆ ಎಸೆದಿರುವ ಸಾಧ್ಯತೆ ಇದೆ’ ಎಂದು ಸಿಐಡಿ ಪೊಲೀಸರು ತಿಳಿಸಿದರು.

ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಅಭ್ಯರ್ಥಿಗಳಿಂದ ಹಣ ಪಡೆದುಕೊಂಡಿರುವ ಆರೋಪವು ಬಸವರಾಜ್‌ ಕನ್ನಾಳೆ ಮೇಲಿದೆ. ಮುಂಗಡವಾಗಿ ಹಣ ನೀಡಿದ್ದ ಅಭ್ಯರ್ಥಿಗಳನ್ನು ರಾಜಾಜಿನಗರದ ಕಚೇರಿಗೆ ಕರೆಸಿಕೊಂಡಿದ್ದ ಕನ್ನಾಳೆ ಮತ್ತು ಸಹಚರರು, ದೇವರಾಯನದುರ್ಗದ ಮನೆಯೊಂದಕ್ಕೆ ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗೆ ಕರೆದೊಯ್ದು ಅಲ್ಲಿ ಪರೀಕ್ಷೆ ಬರೆಸಿರುವುದು ಪತ್ತೆಯಾಗಿತ್ತು. 

‘ಸ್ನೇಹಿತರೊಬ್ಬರ ನೆರವು ಪಡೆದು ಉಜ್ಬೇಕಿಸ್ತಾನಕ್ಕೆ ತೆರಳಿ ತಲೆಮರೆಸಿಕೊಳ್ಳಲು ಕನ್ನಾಳೆ ಯೋಜಿಸಿದ್ದರು. ಅಷ್ಟರಲ್ಲಿ ಆಗಸ್ಟ್‌ 30ರಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‌‘ಕನ್ನಾಳೆ ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್‌ ಗಂಗ್ವಾರ್‌ ಅವರ ಸಿಐಡಿ ಕಸ್ಟಡಿ ಅವಧಿಯು ಸೆ. 9ಕ್ಕೆ (ಬುಧವಾರ) ಮುಕ್ತಾಯ ಆಗಲಿದೆ. ಬುಧವಾರ ಮಧ್ಯಾಹ್ನ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಒಂದು ವೇಳೆ ಬಾಡಿ ವಾರಂಟ್ ಮೇಲೆ ಇ.ಡಿ ವಶಕ್ಕೆ ಕೇಳಿದರೆ, ಅವರ ಕಸ್ಟಡಿಗೆ ನೀಡಲಾಗುವುದು’ ಎಂದು ಮೂಲಗಳು ಹೇಳಿವೆ.

ಸಾಹುಕಾರ ಅರ್ಜಿ ವಜಾ: ಆರ್‌ಟಿಒ ಫ್ಲ್ಯಾಟ್‌ ಮೇಲೆ ದಾಳಿ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿಯ ಹಿಂದಿನ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ.  ಇದರ ಬೆನ್ನಲ್ಲೇ ಸಾಹುಕಾರ ಅವರ ಮನೆ ಹಾಗೂ ಅವರ ಸಂಬಂಧಿಯಾಗಿರುವ ಆರ್‌ಟಿಒ ಇನ್‌ಸ್ಪೆಕ್ಟರ್‌ ರಾಕೇಶ್‌ ಅವರ ಯಶವಂತಪುರದ ಫ್ಲ್ಯಾಟ್‌ ಮೇಲೆ ಸಿಐಡಿ ಅಧಿಕಾರಿಗಳು ಸೋಮವಾರ ರಾತ್ರಿ ದಾಳಿ ನಡೆಸಿ ಪರಿಶೀಲಿಸಿದರು. ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಸಾಹುಕಾರಗೆ ಸಿಐಡಿ ಎರಡು ಬಾರಿ ನೋಟಿಸ್‌ ಜಾರಿ ಮಾಡಿತ್ತು. ‘ಸಿಐಡಿ ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದ ಸಾಹುಕಾರ ‘ಪುತ್ರಿಗೆ ಉದ್ಯೋಗ ಕೊಡಿಸುವ ವಿಚಾರದಲ್ಲಿ ತಾಂತ್ರಿಕ ದೋಷವಾಗಿದೆಯೇ ಹೊರತು ಆಯೋಗದ ಹೆಸರಿನಲ್ಲಿ ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ’ ಎಂದಿದ್ದರು. ಆದರೆ ಘ್ಯಾನೇಂದ್ರ ಕುಮಾರ್‌ ಗಂಗ್ವಾರ್‌ ಹಾಗೂ ಬಸವರಾಜ್ ಕನ್ನಾಳೆ ಅವರ ವಿಚಾರಣೆ ನಡೆಸಿದಾಗ ಅಕ್ರಮದಲ್ಲಿ ಸಾಹುಕಾರ ಪಾತ್ರ ಇರುವುದೂ ಕಂಡುಬಂದಿದೆ’ ಎಂದು ಮೂಲಗಳು ತಿಳಿಸಿವೆ.

ತಲೆಮರೆಸಿಕೊಂಡ ಶಾಂತಾಗೆ ಶೋಧ

ಆಯೋಗದ ಮಾಜಿ ಸದಸ್ಯೆ ಶಾಂತಾ ಹೊಸಮನಿ ಅವರೂ ಅಕ್ರಮದಲ್ಲಿ ಭಾಗಿ ಆಗಿರುವ ಶಂಕೆಯಿದ್ದು ಅವರ ಪತ್ತೆಗೆ ಸಿಐಡಿ ಶೋಧ ಕಾರ್ಯ ತೀವ್ರಗೊಳಿಸಿದೆ. ಆಗಸ್ಟ್‌ 18ರಂದು ಕೆಪಿಎಸ್‌ಸಿ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು. ಅಲ್ಲಿ ಲಭಿಸಿದ ದಾಖಲೆಗಳನ್ನು ಆಧರಿಸಿ ಶಾಂತಾ ಮನೆಯಲ್ಲೂ ಶೋಧ ನಡೆಸಿದ್ದರು. ಇ.ಡಿ ಹಾಗೂ ಸಿಐಡಿ ನೋಟಿಸ್ ಜಾರಿ ಮಾಡಿದ್ದರೂ ಶಾಂತಾ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ‘15 ದಿನಗಳಿಂದಲೂ ಶಾಂತಾ ಅವರ ಮೊಬೈಲ್‌ ಸ್ವಿಚ್ ಆಫ್‌ ಆಗಿದೆ. ಲೊಕೇಷನ್‌ ಪತ್ತೆ ಕಾರ್ಯ ನಡೆಯುತ್ತಿದೆ. ‘ಲುಕ್‌ಔಟ್‌ ನೋಟಿಸ್’ ಜಾರಿಗೊಳಿಸಲಾಗಿದೆ. ಮೂರನೇ ನೋಟಿಸ್ ಜಾರಿಗೆ ಸಿದ್ಧತೆ ನಡೆದಿದೆ. ಆಗಲೂ ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ವಾರಂಟ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಸಿಐಡಿಯ ಮೂಲಗಳು ತಿಳಿಸಿವೆ. ಕಲಬುರಗಿಯ ಶಾಂತಾ ಹೊಸಮನಿ ಅವರನ್ನು 2021ರಲ್ಲಿ ಆರು ವರ್ಷಗಳ ಅವಧಿಗೆ ಕೆಪಿಎಸ್‌ಸಿ ಸದಸ್ಯೆಯಾಗಿ ನೇಮಕ ಮಾಡಲಾಗಿತ್ತು.

ದೂರುದಾರರಿಗೆ ಬೆದರಿಕೆ ತನಿಖೆ ಚುರುಕು

‘ನೇಮಕಾತಿಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ವಿಧಾನಸೌಧ ಠಾಣೆಗೆ ದೂರು ನೀಡಿದ್ದವರಿಗೆ ಆರೋಪಿಗಳ ಕಡೆಯವರು ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿರುವ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‌ ‘ದೂರುದಾರರಿಗೆ ಯಾರು ಬೆದರಿಕೆ ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ‘ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಚನ್ನರಾಯಪಟ್ಟಣ ತಾಲ್ಲೂಕಿನ ಮಂಜುನಾಥ್ ಮತ್ತು ಇತರ 24 ಅಭ್ಯರ್ಥಿಗಳು ಆಗಸ್ಟ್‌ 2ರಂದು ನೀಡಿದ್ದ ದೂರು ಆಧರಿಸಿ ಆಯೋಗದ ಹಿಂದಿನ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ ಹಾಗೂ ಇತರರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ