
ಭದ್ರೆಯ ದಾರಿ; ಅಡಿಗಡಿಗೂ ತಂಟೆ, ತಕರಾರು
ಚಿತ್ರದುರ್ಗ: ಬಯಲುಸೀಮೆಯತ್ತ ಭದ್ರಾ ಜಲಾಶಯದ ನೀರು ಹರಿದು ಬರುತ್ತಿದೆ ಎಂಬ ಸಂಭ್ರಮ ಕೋಟೆನಾಡಿನಲ್ಲಿದೆ. ಆದರೆ, ಭದ್ರೆಯ ಹರಿವಿನ ಹಾದಿ ಅಷ್ಟು ಸುಲಭವಾಗಿಲ್ಲ. ಅಡಿಗಡಿಗೂ ತಂಟೆ–ತಕರಾರು, ಅಡ್ಡಿ–ಆತಂಕ ಎದುರಾಗಿದ್ದು, ಎಲ್ಲವನ್ನೂ ಮೀರಿ ಮುಂದೆ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸೇರಿದಂತೆ ಜಿಲ್ಲೆಯ ಶಾಸಕರು, ರೈತ ಮುಖಂಡರು, ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಚಿತ್ರದುರ್ಗ ಶಾಖಾ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಬರದಿಂದ ಕಂಗಾಲಾಗಿದ್ದ ಬಯಲು ಸೀಮೆಯತ್ತ ನೀರು ಹರಿದು ಬರುತ್ತಿದೆ ಎನ್ನುವ ವಿಚಾರ ಸ್ಥಳೀಯ ರೈತರಲ್ಲಿ ರೋಮಾಂಚನ ಉಂಟು ಮಾಡಿತ್ತು. ಆದರೆ, ಸಂಜೆಯ ವೇಳೆಗೆ ಭದ್ರೆಯ ಹರಿವಿಗೆ ಅಡ್ಡಿಯಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಭಾಗದಲ್ಲಿ ‘ವೈ’ ಜಂಕ್ಷನ್ ಬಳಿ ಆ ಭಾಗದ ರೈತರು ಬೃಹತ್ ಪ್ರತಿಭಟನೆ ನಡೆಸಿದ ಪರಿಣಾಮ ನೀರು ಹರಿವಿಗೆ ಅಡ್ಡಿಯಾಯಿತು. ‘ವೈ’ ಜಂಕ್ಷನ್‌ನಿಂದ ಎಡಕ್ಕೆ ಚಿತ್ರದುರ್ಗ ಶಾಖಾ ನಾಲೆ (ಸಿಬಿಸಿ), ಬಲಕ್ಕೆ ತುಮಕೂರು ಶಾಖಾ ನಾಲೆ (ಟಿಬಿಸಿ) ಆರಂಭವಾಗುತ್ತದೆ. ಇದು ಪ್ರಮುಖ ಹಂತವಾಗಿದ್ದು, ಇಲ್ಲಿಯೇ ತರೀಕೆರೆ ರೈತರು ಅಡ್ಡಿ ವ್ಯಕ್ತಪಡಿಸಿದ ಕಾರಣ ಅಧಿಕಾರಿಗಳು ಅನಿವಾರ್ಯವಾಗಿ ಶಾಂತಿಪುರ ಪಂಪ್‌ಹೌಸ್‌ನಲ್ಲಿ ನೀರು ಮೇಲೆತ್ತುವ ಪ್ರಕ್ರಿಯೆ ಸ್ಥಗಿತಗೊಳಿಸಿದರು.
ಇದನ್ನು ಸವಾಲಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೋಮವಾರ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ ಸಚಿವರು ಬೆಟ್ಟತಾವರೆಕೆರೆ ಪಂಪ್‌ಹೌಸ್‌ನಲ್ಲಿ ನೀರು ಹರಿಸುವ ಪ್ರಕ್ರಿಯೆಗೆ ಪುನರ್ ಚಾಲನೆ ನೀಡಿದರು. ನಂತರ ಸದ್ಯ ಸದ್ಯ ಕೋಟೆನಾಡಿನಲ್ಲಿ ಮತ್ತೆ ಸಂಭ್ರಮ ಮೂಡಿತು.
ಆದರೂ ಮುಂದಿನ ಸವಾಲುಗಳು ಎಂಜನಿಯರ್‌ಗಳಲ್ಲಿ ಆತಂಕ ಸೃಷ್ಟಿಯಾಗುವಂತೆ ಮಾಡಿವೆ. ಭದ್ರಾ ನೀರಿನ ಹರಿವಿನುದ್ದಕ್ಕೂ ಹಲವು ಹಳ್ಳಿಗಳ ಜನರು ಶಾಮಿಯಾನ ಹಾಕಿ ಧರಣಿ ಕುಳಿತಿದ್ದು, ತಮ್ಮ ಕೆರೆಗೆ ನೀರು ಹರಿಸಿಯೇ ಮುಂದಕ್ಕೆ ಕೊಂಡೊಯ್ಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕೆಲವೆಡೆ ನಾಲೆಗೆ ಮಣ್ಣು ಸುರಿದಿದ್ದು ನೀರಿನ ಹರಿವಿಗೆ ತಡೆಯೊಡ್ಡಿರುವುದು ಗೊಂದಲ ಸೃಷ್ಟಿಸಿದೆ.
ನೀರು ಹಂಚಿಕೆ ಸೂತ್ರದಂತೆ ನ್ಯಾಯಾನುಸಾರ ಭದ್ರಾ ನದಿ ನೀರನ್ನು ಕೋಟೆನಾಡಿಗೆ ಕೊಂಡೊಯ್ಯಲಾಗುತ್ತಿದೆ. ಇಷ್ಟಾದರೂ ಪಕ್ಕದ ಜಿಲ್ಲೆಯ ರೈತರಿಂದ ಅಡ್ಡಿ ಆತಂಕ ಏಕೆ ಎಂಬ ಪ್ರಶ್ನೆ ಸ್ಥಳೀಯ ರೈತರಲ್ಲಿ ಸೃಷ್ಟಿಯಾಗಿದೆ. ಕೇವಲ 3–4 ದಿನಗಳಲ್ಲಿ ನೀರು ಗೋನೂರು ಕೆರೆ ಸೇರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕೋಟೆನಾಡಿನ ರೈತರಲ್ಲಿ ಈಗ ಗೊಂದಲ ಮೂಡಿದ್ದು ನೀರು ದುರ್ಗದ ನೆಲ ತಲುಪಲು ಕನಿಷ್ಠ 1 ವಾರವಾದರೂ ಬೇಕು ಎಂಬ ಅಭಿಪ್ರಾಯ ಮೂಡಿದೆ.
ಬಹಳ ಕಾಲದವರೆಗೆ ಚಿತ್ರದುರ್ಗದ ಭಾಗವಾಗಿಯೇ ಇದ್ದ ದಾವಣಗೆರೆ ಜಿಲ್ಲೆಯ ರೈತರು ಚಿತ್ರದುರ್ಗ ಶಾಖಾ ನಾಲೆಗೆ ನೀರು ಹರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ತುಂಗಾದಿಂದ ಹಂಚಿಕೆಯಾಗಿರುವ ನೀರು ಹರಿಸದೇ, ಎಡದಂತೆ ನಾಲೆಗಳಿಗೆ ನೀರು ಕೊಡದೇ ಚಿತ್ರದುರ್ಗ ಶಾಖೆಗೆ ನೀರು ಕೊಂಡೊಯ್ಯಲು ಅನುಮತಿ ನೀಡಬಾರದು ರಕ್ತ ಕೊಟ್ಟರೂ ಭದ್ರಾ ನೀರು ಕೊಡುವುದಿಲ್ಲ’ ಎಂದು ಹೋರಾಟ ನಡೆಸುತ್ತಿದ್ದಾರೆ. ಈಗ ಈ ಹೋರಾಟವನ್ನು ಎದುರಿಸಿ ಭದ್ರೆ ಮುಂದೆ ಸಾಗಬೇಕಾಗಿದೆ.
‘ಭದ್ರಾ ಜಲಾಶಯ ನಿರ್ಮಾಣದ ಕಾಲದಲ್ಲಿ ದಾವಣಗೆರೆ ಜಿಲ್ಲೆ ಇರಲೇ ಇಲ್ಲ. ಬರಗಾಲಕ್ಕೆ ತುತ್ತಾಗಿದ್ದ ಚಿತ್ರದುರ್ಗ ಭಾಗಕ್ಕೆ ನೀರು ಕೊಂಡೊಯ್ಯಬೇಕು ಎಂಬ ಉದ್ದೇಶ ಮೈಸೂರು ಒಡೆಯರಿಗಿತ್ತು. ಆದರೆ, ಎತ್ತರದ ಪ್ರದೇಶವಾಗಿದ್ದ ದುರ್ಗಕ್ಕೆ ಆಗ ನೀರು ತರಲು ಆಗಲಿಲ್ಲ. ಈಗ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು ಮೇಲ್ದಂಡೆ ಯೋಜನೆ ಜಾರಿಯಾಗಿದೆ. ನ್ಯಾಯಯುತವಾಗಿ ಸಿಗಬೇಕಾದ ನೀರಿನ ಹಕ್ಕಿಗೆ ಯಾರೂ ಆಕ್ಷೇಪ ವ್ಯಕ್ತಪಡಿಸಬಾರದು’ ಎಂದು ರೈತ ಮುಖಂಡರು ಒತ್ತಾಯಿಸುತ್ತಾರೆ.
ಇದರ ನಡುವೆ ಹಿರಿಯೂರು ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿರುವುದೂ ಭದ್ರಾ ಮೇಲ್ದಂಡೆ ಯೋಜನೆಯೊಂದಿಗೆ ತಳಕು ಹಾಕಿಕೊಂಡಿದೆ. ಕ್ಷೇತ್ರ ಉಳಿಸಿಕೊಳ್ಳುವುದಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಚಿತ್ರದುರ್ಗಕ್ಕೆ ನೀರು ಹರಿಸುವ ನಾಟಕವಾಡುತ್ತಿದೆ ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ. ಹೀಗಾಗಿ ಭದ್ರೆಯ ಹರಿವಿಗೆ ರಾಜಕೀಯದ ಸೋಂಕು ಕೂಡ ಅಂಟಿಕೊಂಡಿದೆ.
‘ಎಡದಂಡೆ ಭಾಗದ ರೈತರಿಗೆ ಮುಂಗಾರು ಹಂಗಾಮಿನಲ್ಲಿ ನೀರು ಹರಿಸಿಲ್ಲ. ಬರಗಾಲ ಪರಿಸ್ಥಿತಿಯಲ್ಲಿ ಅವರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಅವರನ್ನು ಕತ್ತಲಲ್ಲಿ ಇಟ್ಟು ಚಿತ್ರದುರ್ಗಕ್ಕೆ ನೀರು ಹರಿಸುತ್ತಿರುವುದನ್ನು ಅವರು ಹೇಗೆ ಸಹಿಸುತ್ತಾರೆ? ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಬೇಕು’ ಎಂದು ರೈತ ಮುಖಂಡರೊಬ್ಬರು ಒತ್ತಾಯಿಸಿದರು.
ಕರ್ನಾಟಕ– ತಮಿಳುನಾಡು ಸಮಸ್ಯೆಯಲ್ಲ ‘ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹರಿದು ಸಮುದ್ರ ಸೇರುತ್ತದೆ. ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆ ಕಟ್ಟೆಗಳ ವ್ಯವಸ್ಥೆಯನ್ನು ನಾವು ಮಾಡಿಕೊಂಡಿಲ್ಲ. ಹೀಗಾಗಿ ಅಣ್ಣ–ತಮ್ಮಂದಿರಂತಿರುವ ಚಿತ್ರದುರ್ಗ–ದಾವಣಗೆರೆ ರೈತರು ಇಂತಹ ಬರ ಪರಿಸ್ಥಿತಿಯಲ್ಲಿ ಕೆಸರೆರಚಾಟ ಮಾಡುವುದು ಸರಿಯಲ್ಲ. ಇದು ಕರ್ನಾಟಕ ಮತ್ತು ತಮಿಳುನಾಡಿನ ಸಮಸ್ಯೆಯಲ್ಲ. ಸರ್ಕಾರ ಸ್ಥಳೀಯ ರೈತರ ಬೇಡಿಕೆಯನ್ನು ಈಡೇರಿಸಿ ಚಿತ್ರದುರ್ಗದತ್ತ ನೀರು ಹರಿಸುವುದನ್ನು ಮುಂದುವರಿಸಬೇಕು’ ಎಂದು ರೈತಸಂಘದ ಮುಖಂಡ ಸಿ.ರುದ್ರಸ್ವಾಮಿ ಹೇಳಿದರು.